ಅಪ್ಪ-ಅಮ್ಮ, ಮರೆಯದೇ ಮತದಾನ ಮಾಡಿ

| Published : Mar 24 2024, 01:31 AM IST

ಸಾರಾಂಶ

ವಿದ್ಯಾರ್ಥಿಗಳಿಂದ ಪೋಷಕರು, ಸಂಬಂಧಿಕರು, ನೆರೆಹೊರೆಯವರಿಗೆ ಪತ್ರ ಅಭಿಯಾನ ಎಂಬ ವಿಶೇಷ ಜಾಗೃತಿ ಕಾರ್ಯಕ್ರಮ ಕೈಗೊಂಡಿದೆ.

ಮಂಜುನಾಥ್‌ ಕೆ.ಎಂ

ಬಳ್ಳಾರಿ: ಪ್ರೀತಿಯ ಅಪ್ಪ-ಅಮ್ಮ...

ನಾನಿಲ್ಲಿ ಕ್ಷೇಮ. ಪರೀಕ್ಷೆಗೆ ಚೆನ್ನಾಗಿ ಸಿದ್ಧತೆ ಮಾಡುತ್ತಿರುವೆ. ಈ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ನೀವು ಯಾವುದೇ ಆಮಿಷಕ್ಕೆ ಒಳಗಾಗದೇ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ, ಅಣ್ಣನಿಗೂ ಮತದಾನ ಮಾಡಲು ತಿಳಿಸಿ.

-ಇಂತಿ ನಿಮ್ಮ ಪ್ರೀತಿಯ ಮಗ/ಮಗಳು

ಇದು, ಮನೆಯಿಂದ ದೂರವಿದ್ದು, ಹಾಸ್ಟೆಲ್‍ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮತದಾನ ಮಾಡಲು ಬರೆದ ಪತ್ರಗಳು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮತದಾರರು ಮತದಾನ ಪ್ರಕ್ರಿಯೆ ಕೈಗೊಳ್ಳಲು ಜಿಲ್ಲಾ ಸ್ವೀಪ್ ಸಮಿತಿ ವಿವಿಧ ಅಭಿಯಾನ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಂದ ಪೋಷಕರು, ಸಂಬಂಧಿಕರು, ನೆರೆಹೊರೆಯವರಿಗೆ ಪತ್ರ ಅಭಿಯಾನ ಎಂಬ ವಿಶೇಷ ಜಾಗೃತಿ ಕಾರ್ಯಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ 295 ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿನ 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಪೋಷಕರಿಗೆ ಪತ್ರ ಬರೆಯುವ ಪತ್ರ ಅಭಿಯಾನಕ್ಕೆ ಚಾಲನೆ ನೀಡಿದೆ.

ಬಳ್ಳಾರಿ ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪತ್ರ ಬರೆದು ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಲಾಯಿತು.

ಜಿಲ್ಲಾ ಮಟ್ಟದಲ್ಲಿ ಬಳ್ಳಾರಿಯ ಕೋಟೆ ಪ್ರದೇಶದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ನಂತರದ ವಸತಿ ನಿಲಯದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ವಿದ್ಯಾರ್ಥಿಗಳಿಗೆ ಚುನಾವಣೆ ಪ್ರಕ್ರಿಯೆ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಗೆ ಮತದಾನದ ಅವಶ್ಯಕತೆ ಕುರಿತು ಮಾಹಿತಿ ನೀಡಿದರು.

ತಮ್ಮ ಊರನ್ನು, ಮನೆಯನ್ನು ಬಿಟ್ಟು ಓದಲು ಆಗಮಿಸಿರುವ ನೀವು ನಿಮ್ಮ ಪೋಷಕರಿಗೆ ಪತ್ರ ಬರೆಯುವ ಮೂಲಕ ಯಾವುದೇ ಆಮಿಷಕ್ಕೆ ಒಳಗಾಗದೇ ಸೂಕ್ತ ಅಭ್ಯರ್ಥಿಗೆ ಹಕ್ಕು ಚಲಾಯಿಸುವ ಕುರಿತು ಪ್ರೇರಣೆ ಮಾತುಗಳನ್ನು ಉಲ್ಲೇಖಿಸಿ ಪತ್ರ ಬರೆಯಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಮತದಾನದಿಂದ ವಂಚಿತರಾದ ಮತದಾರರಲ್ಲಿ ಜಾಗೃತಿ ಮೂಡಿಸಿ, ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಲಾಗಿದೆ. ಅದೇರೀತಿಯಾಗಿ ಕಡ್ಡಾಯ ಮತದಾನ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ವಿವಿಧ ಅಭಿಯಾನ ಕೈಗೊಳ್ಳಲಾಗುತ್ತಿದ್ದು, ಹಾಸ್ಟೆಲ್ ವಿದ್ಯಾರ್ಥಿಗಳ ಮೂಲಕ ಪತ್ರ ಬರೆದು ಪೋಷಕ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಪಂ ಯೋಜನಾ ನಿರ್ದೇಶಕ ವಾಗೀಶ್, ಜಿಪಂ ಸಹಾಯಕ ನಿರ್ದೇಶಕ ಬಸವರಾಜ ಹಿರೇಮಠ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಮತಾ, ವಸತಿ ನಿಲಯದ ನಿಲಯಪಾಲಕರಾದ ಅಂಬಿಕಾ, ಉಷಾ, ಭಾರತಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೆಲ್ಲರೂ ಸೇರಿ ರೂಪಿಸಿದ್ದ “ಒಂದು ಕ್ಯಾಂಡಲ್ ನಿಮ್ಮ ರಾತ್ರಿ ಬೆಳಗುತ್ತೆ, ಒಂದು ವೋಟ್ ನಿಮ್ಮ ಜೀವನ ಬೆಳಗಿಸುತ್ತೆ” ಎಂಬ ಬೃಹತ್ ಗಾತ್ರದ ರಂಗೋಲಿಯು ಗಮನ ಸೆಳೆಯಿತು.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸ್ವೀಪ್ ನೋಡಲ್ ಅಧಿಕಾರಿಗಳು, ಶಾಲೆಗಳ ಮುಖ್ಯ ಗುರುಗಳು ಮತ್ತು ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಂದ ಪೋಷಕರಿಗೆ ಪತ್ರ ಬರೆಸುವ ಮೂಲಕ ಪತ್ರ ಅಭಿಯಾನ ನಡೆಸಲಾಯಿತು.