ಮಕ್ಕಳಿಗೆ ಮೌಲ್ಯಯುತ ಬದುಕು ಕಟ್ಟಿಕೊಡುವುದರಲ್ಲಿ ಪಾಲಕರು ವಿಫಲ

| Published : Oct 06 2025, 01:00 AM IST

ಮಕ್ಕಳಿಗೆ ಮೌಲ್ಯಯುತ ಬದುಕು ಕಟ್ಟಿಕೊಡುವುದರಲ್ಲಿ ಪಾಲಕರು ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ ತಾಲೂಕಿನ ಜೋಡಿ ತುಂಬಿನಕೆರೆ ಗ್ರಾಮದಲ್ಲಿ ನಡೆದ ಶತಾಯುಷಿ ಗುತ್ಯಮ್ಮನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಈಶ್ವರಾನಂದ ಪುರಿ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಪೋಷಕರು ಮಕ್ಕಳನ್ನು ಬಾಲ್ಯದಲ್ಲಿ ತಮ್ಮ ಜೊತೆಯಲ್ಲಿ ಬೆಳಸದೆ ಶಿಕ್ಷಣದ ನೆಪದಲ್ಲಿ ಹಾಸ್ಟೆಲ್‌ಗಳಲ್ಲಿ ಬಿಡುವ ಕಾರಣದಿಂದ ಮಕ್ಕಳಿಗೆ ತಂದೆ ತಾಯಿಗಳಿಂದ ಮೌಲ್ಯಯುತ ಬದುಕು ಕಟ್ಟಿಕೊಡುವುದರಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ವೃದ್ಯಾಪ್ಯದಲ್ಲಿ ಮಕ್ಕಳು ತಂದೆ ತಾಯಿಗಳನ್ನು ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಬಿಡುತ್ತಿದ್ದಾರೆ ಎಂದು ಕಾಗಿನೆಲೆ ಕನಕಗುರು ಪೀಠ ಕೆಲ್ಲೋಡು ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಜೋಡಿ ತುಂಬಿನಕೆರೆ ಗ್ರಾಮದಲ್ಲಿ ನಡೆದ ಶತಾಯುಷಿ ಗುತ್ಯಮ್ಮನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗುತ್ಯಮ್ಮನವರು ಪಡೆದ ಮೌಲ್ಯಯುತ ಬದುಕು ಅವರ ಮಕ್ಕಳಿಗೆ ಸಮಾಜದಲ್ಲಿ ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ಖಚಿತ. ಹುಟ್ಟು ನಮ್ಮ ಸಂಭ್ರಮದ ಕ್ಷಣಕ್ಕೆ ಕಾರಣವಾದರೆ, ಸಾವು ನಮ್ಮನ್ನು ಇನ್ನಿಲ್ಲದ ದುಃಖಕ್ಕೀಡು ಮಾಡುವಂತಹ ಸಹಜ ಪ್ರಕ್ರಿಯೆ. ಜನನ ಕೇವಲ ಕುಟುಂಬಕ್ಕಷ್ಟೇ ತಿಳಿಯುವುದು. ಬದುಕಿನೊಳಗೆ ಸಾರ್ಥಕತೆ ಮೆರೆದಾಗ, ಸಾವು ಜಗತ್ತಿಗೆ ತಿಳಿಯುವುದು ಎಂದರು.

ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ, ವ್ಯಕ್ತಿ ಬದುಕಿದ ರೀತಿ, ಅವನ ಕಾರ್ಯ ವೈಖರಿ, ಇತರರೊಂದಿಗಿನ ಒಡನಾಟ ಮತ್ತು ಬಾಂಧವ್ಯ ಎಲ್ಲವೂ ಗಣನೆಗೆ ಬರುವ ಸಮಯ ಸಾವಿನ ಸಮಯದಲ್ಲಿ. ಜೀವ ಮತ್ತು ಜೀವನ ಎಷ್ಟು ಅಮೂಲ್ಯ ಎನ್ನುವುದು ಆ ಗಳಿಗೆಯಲ್ಲಿ ಎಂಥವರಿಗೂ ಅನಿಸದಿರದು. ಸಿಕ್ಕ ಬದುಕನ್ನು ನಾವು ಎಷ್ಟು ಸುಂದರವಾಗಿಸಿಕೊಂಡಿದ್ದೇವೆ ಎಷ್ಟು ಹದಗೆಡಿಸಿಕೊಂಡಿದ್ದೇವೆ? ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಯುವ ಮುಖಂಡ ಬಿ.ಜಿ.ಅರುಣ್ ಮಾತನಾಡಿ, ಬದುಕು ಭಗವಂತನ ಉಡುಗೊರೆ. ಇದ್ದಷ್ಟು ದಿನ ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಬದುಕಿ ಸಾರ್ಥಕ ಜೀವನ ಕಾಣಬೇಕು. ಮಾತೆ ಗುತ್ಯಮ್ಮನವರ ಆದರ್ಶ ಕುಟುಂಬಕ್ಕೂ ವರ್ಗಾವಣೆಗೊಂಡಿದೆ. ಆದ್ದರಿಂದಲೇ, ಮಕ್ಕಳು, ಮೊಮ್ಮಕ್ಕಳು ಮತ್ತು ಪರಿವಾರದವರು ಆದರ್ಶಯುತ ಜೀವನ ನಡೆಸಲು ಕಾರಣವಾಗಿದೆ. ಕುಲ, ಮತ, ಧರ್ಮ ಮತ್ತು ಸೈದ್ಧಾಂತಿಕ ನಿಲುವುಗಳು ಏನೇ ಇದ್ದರೂ, ಮೂಲದಲ್ಲಿ ನಾವೆಲ್ಲರೂ ಕೂಡ ಮಾನವರು ಎಂಬ ಅರಿವು ನಮ್ಮಲ್ಲಿ ಬರಬೇಕು ಆದಾಗ ಎಲ್ಲರೊಂದಿಗೆ ಬಾಂಧವ್ಯದಿಂದ ಬದುಕು ಕಟ್ಟಿಕೊಂಡು ಸಾರ್ಥಕತೆ ಪಡೆಯಲು ಸಾಧ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ದೊಡ್ಡಘಟ್ಟ ದೊಡ್ಡಯ್ಯ, ರಾಗಿ ಶಿವಮೂರ್ತಿ, ಅಲ್ತಾಫ್ ಪಾಷಾ, ಸಿರಾಜ್, ಗೂಳಿಹಟ್ಟಿ ಕೃಷ್ಣಮೂರ್ತಿ ಜ್ಯೋತಿಷ್ ಚೌದರಿ, ಮಾಜಿ ತಾಪಂ ಸದಸ್ಯ ಅಜ್ಜಯ್ಯ, ವಾಲ್ಮೀಕಿ ಸಮಾಜ ಹೊಳಲ್ಕೆರೆ ತಾಲೂಕ ಅಧ್ಯಕ್ಷ ಸುರೇಗೌಡ, ಗೌಡ್ರ ತಿಪ್ಪೇಸ್ವಾಮಿ, ವೈದ್ಯರಾದ ಯು.ಎಸ್ ಸಂಜಯ್, ಡಾ.ರಘುಪ್ರಸಾದ್, ಡಾ.ಶ್ರೀಧರ್, ಕಾರ್ಯದರ್ಶಿ ಹೊರಕೇರಪ್ಪ ರಾಜಪ್ಪ ರಂಗಪ್ಪ, ಪರಮೇಶ್ವರಪ್ಪ, ಹೊರಗೆರ ಹೊರಕೇರಪ್ಪ ಜಯಪ್ರಕಾಶ್, ಎಂ.ಎಚ್. ಕೃಷ್ಣಮೂರ್ತಿ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.