ಸಾರಾಂಶ
ಧಾರವಾಡ:
ಬರೀ ಶೈಕ್ಷಣಿಕ ಮಾತ್ರವಲ್ಲದೇ ಧಾರವಾಡ ಸಾಂಸ್ಕೃತಿಕ, ಪ್ರಾಕೃತಿಕವಾಗಿಯೂ ಮೆಚ್ಚುಗೆಯ ಸ್ಥಳ ಎಂದು ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ ಹೇಳಿದರು.ಕಲಾಶಕ್ತಿ ಫೌಂಡೇಶನ್, ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಜಂಟಿಯಾಗಿ ರಂಗಾಯಣದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ರಾಜ್ಯದ ಪೈಕಿ ಧಾರವಾಡ ಶ್ರೇಷ್ಠ ಸ್ಥಳ. ಹೋರಾಟದ ಊರು. ಇಲ್ಲಿ ಶಿಕ್ಷಣ ಪಡೆದ ಅದೆಷ್ಟೋ ಜನರು ದೊಡ್ಡ ಸ್ಥಾನಗಳನ್ನೇರಿದ್ದಾರೆ. ಹೀಗಾಗಿ ಇಲ್ಲಿ ಕಲಿತ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎಂದರು.
ಮಕ್ಕಳಲ್ಲಿ ಹುದುಗಿದ ಪ್ರತಿಭೆ ಗುರುತಿಸುವಲ್ಲಿ ಬೇಸಿಗೆ ಶಿಬಿರಗಳು ಯಶಸ್ವಿಯಾಗುತ್ತಿವೆ. ಅದರಲ್ಲೂ ಕಲಾಶಕ್ತಿ ಫೌಂಡೇಶನ್ ಕಲಾಲೋಕದಲ್ಲಿ ಒಂದು ಪುಟ್ಟ ಹೆಜ್ಜೆ ಎಂಬ ಶಿಬಿರ ಮಕ್ಕಳಿಗೆ ಉತ್ತಮ ವೇದಿಕೆ ಎಂದು ಹೇಳಿದರು.ಪ್ರತಿಯೊಂದು ಮಗುವಿಗೆ ವಿಶೇಷ ಹಕ್ಕುಗಳಿವೆ. ಅವುಗಳನ್ನು ಅರಿತು ಪೋಷಕರು ಅವರ ಹಕ್ಕುಗಳನ್ನು ನೀಡಬೇಕು. ಅವರನ್ನು ಶಿಕ್ಷಿಸುವ ಹಕ್ಕು ಪೋಷಕರಿಗಿಲ್ಲ. ಮಕ್ಕಳ ರಕ್ಷಣೆ ಜತೆಗೆ ಗುಣಮಟ್ಟ ಶಿಕ್ಷಣ ನೀಡಬೇಕು. ಇದರಿಂದ ಮಾತ್ರವೇ ಉತ್ಕೃಷ್ಟ ಮಾನವ ಸಂಪನ್ಮೂಲ ನಿರ್ಮಾಣ ಮಾಡಲು ಸಾಧ್ಯ. ಮಕ್ಕಳನ್ನು ಯಾಂತ್ರಿಕವಾಗಿ ಬೆಳೆಸುತ್ತಿರುವುದು ಸರಿಯಲ್ಲ. ಪ್ರಸ್ತುತ ಅಂಕಗಳ ಆಧಾರದ ಮೇಲೆ ಅವರ ಪ್ರತಿಭೆ ಯ ಗುರುತಿಸುವುದು ತಪ್ಪು. ಅಲ್ಲದೇ, ಇತರೆ ಮಕ್ಕಳೊಂದಿಗೆ ತಮ್ಮ ಮಕ್ಕ ಳನ್ನು ಹೋಲಿಕೆ ಮಾಡುವುದು ಹೆಚ್ಚಾಗುತ್ತಿದೆ. ಅವರ ಅಭಿವೃದ್ಧಿಗೆ ಒತ್ತು ನೀಡಿ, ಒತ್ತಾಯ ಮಾಡಬೇಡಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಸಂಘ-ಸಂಸ್ಥೆಗಳು ಆಯೋಜಿಸುವ ಶಿಬಿರಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರಯುಕ್ತವಾಗಿವೆ. ಶಿಬಿರಗಳು ಸಮಾಜಕ್ಕೆ ಪೂರಕವಾಗಿ ಮಕ್ಕಳ ಭವ್ಯ ಭವಿಷ್ಯ ಬರೆಯುವ ಮುನ್ನುಡಿಯಾಗಬೇಕು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ಗಮನ ಹರಿಸಿ ಉತ್ತಮ ಮಾರ್ಗದತ್ತ ನಡೆಯಲು ತಿಳಿಸಿದರು.ಬಿಜೆಪಿ ಯುವ ಮೋರ್ಚಾ ನಗರ ಘಟಕ ಅಧ್ಯಕ್ಷರಾದ ಶಕ್ತಿ ಹಿರೇಮಠ, ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ್ ಮಾತನಾಡಿದರು. ಕಲಾಶಕ್ತಿ ಫೌಂಡೇಶನ್ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ್, ಕಾರ್ಯದರ್ಶಿ ಮಲ್ಲನಗೌಡ ಪಾಟೀಲ ಇದ್ದರು. ಪೂಜಾ ಪಾಟೀಲ ನಿರೂಪಿಸಿದರು. ರೇಖಾ ಯಾದಗಿರಿ ಪ್ರಾರ್ಥಿಸಿದರು. ವಿನಾಯಕ ಕಲ್ಲೂರ ಸ್ವಾಗತಿಸಿದರು. ಅನ್ನಪೂರ್ಣ ಪಾಟೀಲ ವಂದಿಸಿದರು. ನಂತರ ಬೇಸಿಗೆ ಶಿಬಿರದ ಮಕ್ಕಳಿಂದ ಕಲಾಲೋಕದಲ್ಲಿ ಒಂದು ಪುಟ್ಟ ಹೆಜ್ಜೆಗಳ ಕಾರ್ಯಕ್ರಮ ಮತ್ತು ಜಾನಪದ ನೃತ್ಯ, ಹಾಡುಗಳ ರಂಜಮಂಜರಿ, ಸಾಂಸ್ಕೃತಿಕ ಕಲಾ ಪ್ರಕಾರಗಳ ನೃತ್ಯಗಳು ನಡೆದವು. ಅಮೃತಾ ಪಾಟೀಲ, ಪ್ರೇಮಾನಂದ ಶಿಂದೆ, ಸಂದೀಪ ಯಾದಗಿರಿ, ವೆಂಕಟೇಶ ಮನ್ನಿಕೇರಿ, ಸುನೀಲ ಅರಳಿಕಟ್ಟಿ, ಕೃಷ್ಣ ಮೂರ್ತಿ ಗೊಲ್ಲರ ಇದ್ದರು.