ಪೋಷಕರು ಮಕ್ಕಳ ಮೇಲೆ ನಿರಂತರ ನಿಗಾವಹಿಸಿ: ಲಕ್ಷ್ಮಣ್

| Published : Mar 04 2024, 01:21 AM IST

ಸಾರಾಂಶ

ಆಧುನಿಕ ಜೀವನ ಶೈಲಿಯಲ್ಲಿ ವಿಶೇಷವಾಗಿ ದಂಪತಿಗಳಿಬ್ಬರೂ ಅನಿವಾರ್ಯವಾಗಿ ಕೆಲಸಕ್ಕೆ ಹೋಗುವ ಭರಾಟೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗದೇ ಮಕ್ಕಳು ಕೆಲವೊಂದು ಹಂತಗಳಲ್ಲಿ ದಾರಿತಪ್ಪಿದರೂ ಅದನ್ನು ಗಮನಿಸಲಾಗದೇ ಸಮಾಜದಲ್ಲಿ ಅನೇಕ ರೀತಿಯ ಅವಘಡಗಳು ಸಂಭವಿಸುವುದು ನೋಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಆಧುನಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳ ಎಲ್ಲಾ ರೀತಿಯ ಚಟುವಟಿಕೆಗಳ ಮೇಲೆ ನಿರಂತರ ಗಮನವಿರಿಸುವುದು ಅಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ಲಕ್ಷ್ಮಣ್ ಎಂ. ಹೇಳಿದರು.

ಹಿರೇಕಲ್ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆಧುನಿಕ ಜೀವನ ಶೈಲಿಯಲ್ಲಿ ವಿಶೇಷವಾಗಿ ದಂಪತಿಗಳಿಬ್ಬರೂ ಅನಿವಾರ್ಯವಾಗಿ ಕೆಲಸಕ್ಕೆ ಹೋಗುವ ಭರಾಟೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗದೇ ಮಕ್ಕಳು ಕೆಲವೊಂದು ಹಂತಗಳಲ್ಲಿ ದಾರಿತಪ್ಪಿದರೂ ಅದನ್ನು ಗಮನಿಸಲಾಗದೇ ಸಮಾಜದಲ್ಲಿ ಅನೇಕ ರೀತಿಯ ಅವಘಡಗಳು ಸಂಭವಿಸುವುದು ನೋಡುತ್ತಿದ್ದೇವೆ, ಪೋಷಕರು ತಮಗೆ ಎಷ್ಟೇ ಕೆಲಸದ ಒತ್ತಡವಿದ್ದರೂ ತಮ್ಮ ಮಕ್ಕಳಿಗಾಗಿ ಸಮಯ ಮೀಸಲಿಟ್ಟು ಅವರ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸುರಭಿ ಮಹಿಳಾ ಮಂಡಳಿ ಶಿವಮೊಗ್ಗದ ನಿರ್ದೇಶಕರಾದ ರೇಖಾ ಜಿ.ಎಂ. ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ರಕ್ಷಣೆಯಲ್ಲಿ ಹೆತ್ತವರ ಪಾತ್ರ ಎನ್ನುವ ವಿಷಯವಾಗಿ ಉಪನ್ಯಾಸ ನೀಡಿ ಲೈಂಗಿಕ ದಬ್ಬಾಳಿಕೆ ಕೇವಲ ಹೆಣ್ಣು ಮಕ್ಕಳಿಗಷ್ಟೇ ಅಲ್ಲ ಕೆಲವು ಸಂದರ್ಭದಲ್ಲಿ ಗಂಡು ಮಕ್ಕಳ ಮೇಲೂ ನಡೆಯುತ್ತದೆ ಈ ಬಗ್ಗೆ ಪೋಷಕರಾದ ನಾವು ತಮ್ಮ ಮಕ್ಕಳಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಸೂಕ್ಷ್ಮವಾಗಿ ತಿಳಿವಳಿಕೆ ನೀಡಬೇಕು. ವಾಟ್ಸಆಪ್,ಫೇಸ್ ಬುಕ್,ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳ ಮಕ್ಕಳು ಹಾಗೂ ಮಹಿಳೆಯೆರು ಆತ್ಯಂತ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ ಅನಾವಶ್ಯಕ, ಹಾಗೂ ಅಪರಿಚಿತ ಕರೆಗಳಿಗೆ ಸ್ಪಂದಿಸಬಾರದು ಎಂದು ಎಚ್ಚರಿಕೆ ನೀಡಿದರು.

ಜನಜಾಗೃತಿ ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷ ಸುರೇಶ್ ಹೊಸಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಜ್ಞಾನವಿಕಾಸ ಯೋಜನೆಯ ಯೋಜನಾಧಿಕಾರಿ ರತ್ನಾ ಮೈದಾಳ ಮಾತನಾಡಿದರು. ಹೊನ್ನಾಳಿ ಯೋಜನಾಧಿಕಾರಿ ಬಾಬು, ಬಸವಾಜ್ ಲಕ್ಕುಂಡಿ, ಲಿಂಗರಾಜ್ ಹವಳದ, ಬಿ.ಎಲ್.ಕುಮಾರಸ್ವಾಮಿ, ನ್ಯಾಮತಿ ನಟರಾಜ್ ಶ್ರೀನಿವಾಸ್ ಮುಂತಾದವರಿದ್ದರು,

ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರ, ಪುಷ್ಪಗುಚ್ಛ ತಯಾರಿಕಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಸಿರಿಧಾನ್ಯಗಳ ಪ್ರದರ್ಶನ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು