ಬೆಳಾಲು ಕಾಡಿನಲ್ಲಿ ಪತ್ತೆಯಾದ ಅನಾಥ ಶಿಶು ಪೋಷಕರು ಪತ್ತೆ!

| Published : Apr 04 2025, 12:47 AM IST

ಸಾರಾಂಶ

ಕೊಡೋಳುಕೆರೆ -ಮುಂಡ್ರೋಟ್ಟು ಕಾಡಿನಲ್ಲಿ ಮಾ.22 ರಂದು ಪತ್ತೆಯಾಗಿದ್ದ ಹೆಣ್ಣು ಶಿಶುವಿನ ಪೋಷಕರನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣದ ಆರೋಪಿ, ಬೆಳಾಲು ಗ್ರಾಮದ ಮಾಯಾ ನಿವಾಸಿ ರಂಜಿತ್ ಗೌಡ ಎಂಬಾತನನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನ ಬೆಳಾಲು ಗ್ರಾಮದ ಕೊಡೋಳುಕೆರೆ -ಮುಂಡ್ರೋಟ್ಟು ಕಾಡಿನಲ್ಲಿ ಮಾ.22 ರಂದು ಪತ್ತೆಯಾಗಿದ್ದ ಹೆಣ್ಣು ಶಿಶುವಿನ ಪೋಷಕರನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣದ ಆರೋಪಿ, ಬೆಳಾಲು ಗ್ರಾಮದ ಮಾಯಾ ನಿವಾಸಿ ರಂಜಿತ್ ಗೌಡ ಎಂಬಾತನನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿವಾಹಪೂರ್ವದಲ್ಲಿ ಜನಿಸಿದ ಶಿಶುವನ್ನು ಜೋಡಿಯ ಮನಸ್ತಾಪ ಹಿನ್ನೆಲೆಯಲ್ಲಿ ಕಾಡಿನಲ್ಲಿ ಬಿಟ್ಟು ಹೋಗಿದ್ದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ: ಬೆಳಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೋಳುಕೆರೆ-ಮಯಾ ರಸ್ತೆಯ ಸಮೀವಿರುವ ಕಾಡಿನಲ್ಲಿ ಎರಡುವರೆ ತಿಂಗಳ ಪುಟ್ಟ ಹೆಣ್ಣು ಮಗು ಮಾ.22ರಂದು ಬೆಳಗ್ಗೆ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಬಳಿಕ ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಹಾಗೂ ಗ್ರಾಮಸ್ಥರಾದ ಪ್ರೇಮಾ ಕೊಲ್ಪಾಡಿ ಮತ್ತು ಪ್ರೇಮಾ, ಮಾಯ ಸಹಿತ ಆಶಾ ಕಾರ್ಯತೆಯರು, ಆರೋಗ್ಯ ಇಲಾಖೆಯ ಸಿಎಚ್‌ಒ ಆಗಮಿಸಿ ಮಗುವನ್ನು ರಕ್ಷಿಸಿದರು. ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಲಾಗಿತ್ತು.

ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಅನ್ನಪೂರ್ಣ ಮಾ.೨೨ ರಂದು ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿತ್ತು.

ಬೆಳಾಲು ಕಾಡಿನಲ್ಲಿ ಪತ್ತೆಯಾದ ಮಗುವಿನ ಪೋಷಕರ ಬಗ್ಗೆ ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಚಾರಗಳು ವೈರಲ್‌ ಆಗುತ್ತಿದ್ದವು. ಈ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಧರ್ಮಸ್ಥಳ ಪೊಲೀಸರ ತಂಡ ಬುಧವಾರ ರಾತ್ರಿ ಬೆಳಾಲು ಗ್ರಾಮದ ನಿವಾಸಿ ರಂಜಿತ್ ಗೌಡ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ನಡೆದದ್ದು ಏನು:

ರಂಜಿತ್ ಗೌಡ ಧರ್ಮಸ್ಥಳದ ನಿವಾಸಿ ಯುವತಿಯನ್ನು ಪ್ರೀತಿಸಿದ್ದು, ಮದುವೆಯಾಗುವ ಭರವಸೆಯೊಂದಿಗೆ ಸಮ್ಮತಿಯೊಂದಿಗೆ ಮಗು ಜನಿಸಿದೆ. ಆದರೆ ನಂತರ ಅವರೊಳಗೆ ಮನಸ್ತಾಪ ಉಂಟಾಗಿ, ಯುವತಿ ಮಗುವನ್ನು ಯವಕನ ಮನೆಗೆ ತಂದು ಬಿಟ್ಟು ಹೋಗಿದ್ದಾಳೆ ಎನ್ನಲಾಗುತ್ತಿದೆ.

ಇದರಿಂದ ಕಂಗೆಟ್ಟಿರುವ ಯುವಕ ಮಗುನ್ನು ಕಾಡಿಗೆ ತಂದು ಬಿಟ್ಟ ಎಂದು ತನಿಖೆಯಿಂದ ಗೊತ್ತಾಗಿದೆ. ಪ್ರಕರಣದ ಸತ್ಯಾತ್ಯತೆ ಪೊಲೀಸರ ವಿಚಾರಣೆ, ಡಿಎನ್‌ಎ ಪರೀಕ್ಷೆ ಬಳಿಕವಷ್ಟೇ ಬೆಳಕಿಗೆ ಬರಬೇಕಾಗಿದೆ.