ಸಾರಾಂಶ
ಮುಂಡರಗಿ: ಮಕ್ಕಳು ಯಾರೂ ಕೆಟ್ಟವರಲ್ಲ, ದುಷ್ಟರಲ್ಲ, ದುಶ್ಚಟಗಳನ್ನು ಅರಿತವರಲ್ಲ. ಸುತ್ತಲಿನ ಪರಿಸರದ ಜನರ ಪ್ರಭಾವದಿಂದ, ಅಂಥ ಗೆಳೆಯರು ಹಾಗೂ ಅನುಚಿತ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ಸೆಳೆತ ಅವರಲ್ಲಿ ದುರ್ವರ್ತನೆ ಉಂಟು ಮಾಡುತ್ತಿವೆ. ಪಾಲಕರು ಮಕ್ಕಳ ಸ್ನೇಹಿಯಾಗಿ ಅವರ ವರ್ತನೆಗಳ ಮೇಲೆ ನಿಗಾ ಇಟ್ಟು ಸಕಾಲಿಕ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಹೇಳಿದರು.
ಅವರು ಮುಂಡರಗಿ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಅರಿಯೋಣ ಕಲಿಕೆಯಲ್ಲಿ ತೊಡಗೋಣ ಎಂಬ ಧ್ಯೇಯವಾಕ್ಯದಡಿ ಹಮ್ಮಿಕೊಂಡ ತಾಯಂದಿರ ಸಭೆಯಲ್ಲಿ ಮಾತನಾಡಿದರು. ಮಕ್ಕಳು ಯಾರೂ ದಡ್ಡರಲ್ಲ, ಪ್ರತಿ ಮಗುವಿನಲ್ಲೂ ಕ್ರಿಯಾಶೀಲ ಶಕ್ತಿ, ಪ್ರತಿಭೆ ಅಡಕವಾಗಿದೆ. ಪೂರಕ ಮಾರ್ಗದರ್ಶನ ಹಾಗೂ ತೊಡಗಿಸಿಕೊಳ್ಳುವಿಕೆಯೊಂದಿಗೆ ಉತ್ತಮ ಕಲಿಕೆಯೊಂದಿಗೆ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಪಾಲಕ, ಪೋಷಕರು ಅದರಲ್ಲೂ ವಿಶೇಷವಾಗಿ ತಾಯಂದಿರು ಈ ಬಗ್ಗೆ ಆಸ್ಥೆ ವಹಿಸಬೇಕು. ಪಾಲಕ-ಶಿಕ್ಷಕರ ಕೈ ಜೋಡಿಸುವಿಕೆಯಿಂದ ಮಕ್ಕಳ ಕಲಿಕೆ ನಿರೀಕ್ಷಿತ ಪ್ರಗತಿಯೊಂದಿಗೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ ಎಂದರು. 46 ಜನ ತಾಯಂದಿರು ಭಾಗವಹಿಸಿದ್ದ ಈ ಸಭೆಯಲ್ಲಿ ಶಿಕ್ಷಕ ತಾಯಂದಿರ ಮಧ್ಯೆ ಎರಡು ಗಂಟೆಗಳ ಕಾಲ ಸಂವಾದ ಚರ್ಚೆ ನಡೆಯಿತು. ಶಿಕ್ಷಕರಾದ ಪಿ.ಆರ್. ಗಾಡದ, ಪಿ.ಎಂ. ಲಾಂಡೆ, ಬಿ.ಎಚ್. ಹಲವಾಗಲಿ, ಎಂ.ಆರ್, ಗುಗ್ಗರಿ, ಎಸ್.ಡಿ. ಎಂ.ಸಿ. ಉಪಾಧ್ಯಕ್ಷ ಮಂಜುಳಾ ಡಂಬಳ, ಸದಸ್ಯರಾದ ಗಂಗವ್ವ ಹಲವಾಗಲಿ, ಸವಿತಾ ಕುರಿ, ನಂದಿನಿ ತ್ಯಾಪಿ, ವಿಜಯಲಕ್ಷ್ಮಿ ಜಂಬಗಿ, ಸುವರ್ಣ ಜಳಕಿ, ಮಂಜುಳಾ ಡಂಬಳ, ಪಾರ್ವತಿ ಡೊಣ್ಣಿ ಸೇರಿದಂತೆ 46 ಜನ ತಾಯಂದಿರು ಉತ್ಸಾಹದಿಂದ ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡರು.ಕಲಿಕೆ ಯಾವಾಗ ಆರಂಭವಾಗುತ್ತದೆ ಮತ್ತು ಹೇಗೆ ನಡೆಯುತ್ತದೆ ಎಂಬುದನ್ನು, ಪ್ರತಿ ಮಗು ಹೇಗೆ ಭಿನ್ನ ಎಂಬುದನ್ನು ಸುದೀರ್ಘವಾಗಿ ಚರ್ಚಿಸಲಾಯಿತು. ಮಕ್ಕಳ ಕಲಿಕೆಯಲ್ಲಿ ನಮ್ಮ ಪಾತ್ರ ಏನೆಂಬುದರ ಮನವರಿಕೆ ಮಾಡಿಕೊಡಲಾಯಿತು. ತಾಯಂದಿರ ಅಭಿಪ್ರಾಯದ ಮೇರೆಗೆ ಪ್ರತಿ ಶನಿವಾರ ಬೆಳಗ್ಗೆ 9.30 ರಿಂದ 11.30 ಗಂಟೆಯವರೆಗೆ ಮಕ್ಕಳ ಕಲಿಕೆಯ ಕುರಿತು ವೈಯಕ್ತಿಕ ಪ್ರಗತಿ ತಿಳಿಸಲು, ಕೌನ್ಸೆಲಿಂಗ್‌ಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಯಿತು. ಶಿಕ್ಷಕರಾದ ಪಿ.ಎಂ. ಲಾಂಡೆ ಸ್ವಾಗತಿಸಿದರು, ಎಂ.ಆರ್. ಗುಗ್ಗರಿ ವಂದಿಸಿದರು.