ನಾವು ಸಂಸ್ಥೆ ಮತ್ತು ಗುಡ್‌ಮೈಂಡ್ಸ್ ವತಿಯಿಂದ ಪಟ್ಟಣದ ಮಹಿಳಾ ಸಮಾಜದಲ್ಲಿ ಮಕ್ಕಳ ಬಾಲ್ಯ ಕಟ್ಟುವ ಹಬ್ಬ ಹೆಸರಿನ ಬೇಸಿಗೆ ಶಿಬಿರ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ನಾವು ಸಂಸ್ಥೆ ಮತ್ತು ಗುಡ್‌ಮೈಂಡ್ಸ್ ವತಿಯಿಂದ ಪಟ್ಟಣದ ಮಹಿಳಾ ಸಮಾಜದಲ್ಲಿ ಮಕ್ಕಳ ಬಾಲ್ಯ ಕಟ್ಟುವ ಹಬ್ಬ ಹೆಸರಿನ ಬೇಸಿಗೆ ಶಿಬಿರ ಆರಂಭವಾಯಿತು. ಮಕ್ಕಳ ಹಕ್ಕುಗಳ ಕಾರ್‍ಯಕರ್ತೆ ಸುಮನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆಗೆ ಹಕ್ಕುಗಳ ಮಹತ್ವವನ್ನು ಪೋಷಕರು ಅರಿತುಕೊಳ್ಳಬೇಕು. ಮಕ್ಕಳು ಸಮಾಜದಲ್ಲಿ ಸುರಕ್ಷಿತವಾಗಿರಲು ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು. ಪೋಷಕರು ಮಕ್ಕಳ ಮೊದಲ ಗುರುಗಳು. ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಬೆಳೆಸುವುದು, ಅವರ ಆಸಕ್ತಿ-ಪ್ರತಿಭೆಯನ್ನು ಉತ್ತೇಜಿಸುವುದು, ಭಯವಿಲ್ಲದ ವಾತಾವರಣದಲ್ಲಿ ಬೆಳೆಯಲು ಸಹಕಾರ ನೀಡುವುದು ಪೋಷಕರ ಕರ್ತವ್ಯವಾಗಿದೆ. ಮಕ್ಕಳನ್ನು ಅನವಶ್ಯಕವಾಗಿ ಬೈಯುವುದು ಸರಿಯಾದ ಕ್ರಮವಲ್ಲ. ಮಕ್ಕಳ ಮಾತುಗಳನ್ನು ಆಲಿಸಿ, ಅವರಿಗೆ ಸಮಯ ನೀಡುವುದು, ಪ್ರೀತಿ ಮತ್ತು ಕಾಳಜಿಯಿಂದ ಮಾರ್ಗದರ್ಶನ ಮಾಡುವುದು ಅತ್ಯಂತ ಅಗತ್ಯವೆಂದು ಹೇಳಿದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಎಚ್.ಆರ್. ಜೀವಿತ ಡ್ರಾಯಿಂಗ್ ಮತ್ತು ಕ್ರಾಫ್ಟ್ ಕುರಿತಾಗಿ ತಿಳಿಸಿದರು. ಮಕ್ಕಳ ಸೃಜನಾತ್ಮಕತೆಯನ್ನು ಉತ್ತೇಜಿಸುವ ವಿವಿಧ ಚಿತ್ರಕಲೆ ತಂತ್ರಗಳು, ಬಣ್ಣಗಳ ಬಳಕೆ ಹಾಗೂ ಕಾಗದ ಸಾಮಗ್ರಿಗಳಿಂದ ಕ್ರಾಫ್ಟ್ ತಯಾರಿಸುವ ವಿಧಾನಗಳನ್ನು ವಿವರಿಸಿದರು. ಮಕ್ಕಳಲ್ಲಿ ಕಲಾತ್ಮಕ ಆಸಕ್ತಿ ಬೆಳೆಸುವ ಜೊತೆಗೆ ಅವರ ಕಲ್ಪನಾಶಕ್ತಿಯನ್ನು ವೃದ್ಧಿಸುವುದು ಮುಖ್ಯ ಎಂದು ಹೇಳಿದರು.

ಉಪನ್ಯಾಸದ ಬಳಿಕ ವಿದ್ಯಾರ್ಥಿಗಳು ಕ್ರಾಫ್ಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡರು. ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಾವು ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು ಮಾತನಾಡಿ, ಏ.೨೫ರವರೆಗೆ ಶಿಬಿರ ನಡೆಯಲಿದ್ದು, ಮಕ್ಕಳ ಬಾಲ್ಯವನ್ನು ಚಂದವಾಗಿಸುವ, ಸುರಕ್ಷಿತವಾಗಿಸುವ ಜವಾಬ್ದಾರಿ ನಮ್ಮದಿದೆ. ಮಕ್ಕಳಿಗೆ ಜೀವನ ಕೌಶಲ್ಯ, ಹಳೆ ಆಟಗಳ ಕಲಿಕೆಯೊಂದಿಗೆ, ಸೃಜನ ಶೀಲತೆಗೆ ಒತ್ತು ನೀಡುವ ಚಟುವಟಿಕೆಗಳನ್ನು ನೀಡಲಾಗುವುದು ಎಂದು ಹೇಳಿದರು.