ಮುಖ್ಯಶಿಕ್ಷಕನ ಅಸಭ್ಯ ವರ್ತನೆ ವಿರೋಧಿಸಿ ಪೋಷಕರು, ವಿದ್ಯಾರ್ಥಿನಿಯರ ಪ್ರತಿಭಟನೆ

| Published : Nov 20 2025, 12:00 AM IST

ಮುಖ್ಯಶಿಕ್ಷಕನ ಅಸಭ್ಯ ವರ್ತನೆ ವಿರೋಧಿಸಿ ಪೋಷಕರು, ವಿದ್ಯಾರ್ಥಿನಿಯರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿದ್ದರು. ಮಕ್ಕಳ ಜತೆ ಪೋಷಕರು ಸಹ ಪ್ರತಿಭಟನೆಗೆ ಸಾಥ್ ನೀಡಿದರು. ಹಿರಿಯ ಅಧಿಕಾರಿಗಳೇ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದು ಚಿಂತಾಮಣಿ-ಶ್ರೀನಿವಾಸಪುರ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ತಾಲೂಕಿನ ದೊಡ್ಡಗಂಜೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿಯರು, ಪೋಷಕರು ಶಾಲೆ ಮುಂಭಾಗ ಮತ್ತು ಚಿಂತಾಮಣಿ-ಶ್ರೀನಿವಾಸಪುರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.

ದೊಡ್ಡಗಂಜೂರು ಶಾಲೆಗೆ ವರ್ಗಾವಣೆಯಾದಾಗಿನಿಂದಲೂ ವಿದ್ಯಾರ್ಥಿನಿಯರ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ನ.೧೪ರಂದು ಶಾಲೆಯಲ್ಲಿ ಕರೆದಿದ್ದ ಪಾಲಕರ ಸಭೆಯಲ್ಲಿ ಮುಖ್ಯಶಿಕ್ಷಕರನ್ನು ಪಾಲಕರು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಶಿಕ್ಷಕ ಕ್ಷಮಾಪಣೆ ಕೇಳಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಇದರಿಂದ ಕುಪಿತಗೊಂಡ ಶಿಕ್ಷಕ ವಿದ್ಯಾರ್ಥಿನಿಯರ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತೆ ತನ್ನ ದರ್ಪ ತೋರಿದ್ದಾನೆನ್ನಲಾಗಿದೆ. ವಿದ್ಯಾರ್ಥಿನಿಯರು ಪಾಲಕರ ಗಮನಕ್ಕೆ ತಂದಿದ್ದು ಮಂಗಳವಾರ ಬೆಳಗ್ಗೆ ಶಾಲೆ ಬಳಿ ಧಾವಿಸಿದ ಪೋಷಕರ ಜತೆ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಶಾಲೆ ಮುಂಭಾಗದಲ್ಲಿ ಧರಣಿ ನಡೆಸಿದರು.

ಈ ಪ್ರೌಢಶಾಲೆಯ ವಸತಿ ನಿಲಯದಲ್ಲಿ ೧೦ನೇ ತರಗತಿಯ ೫೦ ವಿದ್ಯಾರ್ಥಿನಿಯರಿದ್ದಾರೆ. ಈ ಹಿಂದೆ ಚಿಂತಾಮಣಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲೂ ಆರೋಪಿ ಮುಖ್ಯಶಿಕ್ಷಕ ಇದೇ ರೀತಿ ಅಸಭ್ಯ ವರ್ತನೆ ತೋರಿದ್ದರು ಎನ್ನಲಾಗಿದೆ.

ಮಾನಸಿಕ- ದೈಹಿಕ ಕಿರುಕುಳ ಆರೋಪ:

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಮುಖ್ಯಶಿಕ್ಷಕನ ವರ್ತನೆ ಮತ್ತು ಅಸಭ್ಯ ಮಾತು, ಮಾನಸಿಕ ಮತ್ತು ದೈಹಿಕ ಕಿರುಕುಳದ ಬಗ್ಗೆ ವಿವರಿಸಿ ಈ ಮುಖ್ಯಶಿಕ್ಷಕರಿದ್ದರೆ ಶಾಲೆಗೆ ಬರುವುದಿಲ್ಲವೆಂದು ಅವರನ್ನು ವರ್ಗಾವಣೆ ಮಾಡಿದರೆ ಮಾತ್ರ ಪ್ರತಿಭಟನೆ ಹಿಂಪಡೆಯುವುದಾಗಿ ಪೋಷಕರು, ವಿದ್ಯಾರ್ಥಿನಿಯರು ಎಚ್ಚರಿಕೆ ನೀಡಿದರು.

ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿದ್ದರು. ಮಕ್ಕಳ ಜತೆ ಪೋಷಕರು ಸಹ ಪ್ರತಿಭಟನೆಗೆ ಸಾಥ್ ನೀಡಿದರು. ಹಿರಿಯ ಅಧಿಕಾರಿಗಳೇ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದು ಚಿಂತಾಮಣಿ-ಶ್ರೀನಿವಾಸಪುರ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿದರು. ನಂತರ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ರಸ್ತೆ ತಡೆಗೆ ಅವಕಾಶ ಕಲ್ಪಿಸಲಿಲ್ಲ.

ಪೋಷಕರಾದ ಶ್ರೀನಾಥ್, ಬೈರಮ್ಮ, ಶೋಭಾ, ಚೌಡರೆಡ್ಡಿ, ಪ್ರಭಾವತಿ, ಗಂಗಾಧರಪ್ಪ, ಸುಜಾತಾ, ಪವಿತ್ರಾ, ಅಶ್ವಿನಿ, ಶಾಂತಮ್ಮ, ರವಿ, ದೇವರಾಜ್, ಗೋಕುಲ್, ವೆಂಕಟ್ ಶಿವ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕರೆಡ್ಡಿ, ಕೃಷಿಕ ಸಮಾಜದ ಅಧ್ಯಕ್ಷ ಜಯರಾಮರೆಡ್ಡಿ ಇದ್ದರು.