ಕೂಡ್ಲಿಗಿ: ಶಾಲೆಯ ಸುಧಾರಣೆ ಮತ್ತು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಜತೆಗೆ ಪೋಷಕರು, ಶಾಲಾಭಿವೃದ್ಧಿ ಸಮಿತಿ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಆಯೋಜಿಸಿದ್ದ ಶಾಲಾಭಿವೃದ್ಧಿ ಸಮಿತಿಗಳ ಹಕ್ಕು ಮತ್ತು ಕರ್ತವ್ಯ ಕುರಿತು ತಾಲೂಕು ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸಮುದಾಯ ಹಾಗೂ ಶಾಲೆಯ ನಡುವೆ ಕೊಂಡಿಯಾಗಿರುವ ಅಧ್ಯಕ್ಷರು, ಶಾಲೆಯ ಮೂಲಭೂತ ಸೌಕರ್ಯ, ಶೈಕ್ಷಣಿಕ ಗುಣಮಟ್ಟ ಹಾಗೂ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ಪ್ರಮುಖ ಜವಾಬ್ದಾರಿ ಹೊಂದಿರುತ್ತಾರೆ. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ. ಶಿಕ್ಷಣದ ಜೊತೆಗೆ ಸಂಸ್ಕಾರ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಸರ್ಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ ಮಾತನಾಡಿ, ಶಿಕ್ಷಣದ ಪರಿಕಲ್ಪನೆ, ಉದ್ದೇಶ ಗುರಿ ಈಡೇರಬೇಕಾದರೆ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳ ಸಮನ್ವಯದಿಂದ ಕೂಡಿರಬೇಕಾಗುತ್ತದೆ. ಅಂಕಗಳಿಗೋಸ್ಕರ ಮಕ್ಕಳನ್ನು ತಯಾರು ಮಾಡದೇ ಅವರ ಜೀವನ ರೂಪಿಸುವ ಶಿಕ್ಷಣ ನೀಡುವ ಮೂಲಕ ಶಿಕ್ಷಕರು ತಮ್ಮ ವೃತ್ತಿ ಘನತೆ ಕಾಪಾಡಿಕೊಳ್ಳಬೇಕಿದೆ ಎಂದರು.ಉಪನ್ಯಾಸಕ ಚಾಂದ್‌ಪೀರ್ ಉಪನ್ಯಾಸ ನೀಡಿದರು. ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ರಾಜ್ಯ ಖಜಾಂಚಿ ಉಡುಪಿಯ ಜ್ಯೋತಿ ರಾಮಶೆಟ್ಟಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ಕೂಡ್ಲಿಗಿ, ಲೇಖಕ ಭೀಮಣ್ಣ ಗಜಾಪುರ, ಪತ್ರಕರ್ತರ ಸಂಘದ ಅಧ್ಯಕ್ಷ ಹೂಡೇಂ ಕೃಷ್ಣಮೂರ್ತಿ, ಬಿ.ನಾಗರಾಜ್, ಜಿಲ್ಲಾ ಗೌರವಾಧ್ಯಕ್ಷ ಡಿ.ಎಂ. ಈಶ್ವರಪ್ಪ, ಜಿಲ್ಲಾ ಕಾರ್ಯದರ್ಶಿ ಹೊನ್ನೂರಪ್ಪ, ಜಿಲ್ಲಾ ಉಪಾಧ್ಯಕ್ಷ ಹೂಡೇಂ ಮಂಜುನಾಥ, ತಾಲೂಕು ಅಧ್ಯಕ್ಷೆ ಟಿ ಭಾಗ್ಯಮ್ಮ, ಕೊಟ್ಟೂರು ತಾಲೂಕು ಅಧ್ಯಕ್ಷ ಹರೀಶ್, ಶಿಕ್ಷಕ ಎಚ್. ಹನುಮಂತಪ್ಪ, ಕೊಟ್ರಗೌಡ ಉಪಸ್ಥಿತರಿದ್ದರು. ಶಿಕ್ಷಕ ಎಚ್.ಡಿ. ಉಡುಚಪ್ಪ ನಿರೂಪಿಸಿದರು. ಹೊನ್ನೂರಪ್ಪ ಸ್ವಾಗತಿಸಿದರು.