ಪೋಷಕರು ಮಕ್ಕಳಿಗೆ ಇತಿಹಾಸ ತಿಳಿಸಿಕೊಡಿ

| Published : Jun 30 2024, 12:59 AM IST

ಸಾರಾಂಶ

ಚನ್ನಪಟ್ಟಣ: ಮಕ್ಕಳಿಗೆ ಸ್ಥಳೀಯ ಇತಿಹಾಸ ತಿಳಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಇದರಿಂದ ಮಕ್ಕಳು ತಮ್ಮ ನೆಲದ ಸಂಸ್ಕೃತಿ ಮತ್ತು ಆಚರಣೆಗಳ ಬಗೆಗೆ ಅಭಿಮಾನ ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.

ಚನ್ನಪಟ್ಟಣ: ಮಕ್ಕಳಿಗೆ ಸ್ಥಳೀಯ ಇತಿಹಾಸ ತಿಳಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಇದರಿಂದ ಮಕ್ಕಳು ತಮ್ಮ ನೆಲದ ಸಂಸ್ಕೃತಿ ಮತ್ತು ಆಚರಣೆಗಳ ಬಗೆಗೆ ಅಭಿಮಾನ ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.

ಪಟ್ಟಣದ ಅನ್ನಪೂರ್ಣೇಶ್ವರಿ ಬಡಾವಣೆಯ ಇಂಡಿಯನ್ ಆಕ್ಸ್‌ಫರ್ಡ್ ಸ್ಕೂಲ್ ಆವರಣದಲ್ಲಿ ಏರ್ಪಡಿಸಿದ್ದ ಚನ್ನಪಟ್ಟಣದ ಇತಿಹಾಸ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಚನ್ನಪಟ್ಟಣ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನ ಪಡೆದಿದೆ. ಗಂಗರು ಮುಂಕುಂದ ಗ್ರಾಮವನ್ನು ಹಾಗೂ ಪಾಳೇಗಾರರು ಚನ್ನಪಟ್ಟಣವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಿ ಮಾದರಿ ಆಡಳಿತ ನಡೆಸಿದ್ದಾರೆ ಎಂದು ತಿಳಿಸಿದರು.

೧೫ನೇ ಶತಮಾನದಲ್ಲಿ ಚನ್ನಪಟ್ಟಣದ ಪಾಳೇಪಟ್ಟು ಪಿರಿಯಾಪಟ್ಟಣ, ಕೋಲಾರ, ನಾಗಮಂಗಲ ಹಾಗೂ ತಮಿಳುನಾಡಿನ ಗಡಿಭಾಗದವರೆಗೂ ವಿಸ್ತರಿಸಿತ್ತು. ಕ್ರಿ.ಶ ೧೫೭೦ರಲ್ಲಿ ಅಧಿಕಾರಕ್ಕೆ ಬಂದ ಇಮ್ಮಡಿ ಜಗದೇವರಾಯ ಚನ್ನಪಟ್ಟಣ ರಾಜ್ಯದ ಸ್ವತಂತ್ರ ಪಾಳೆಯಗಾರನಾಗಿ ಆಳ್ವಿಕೆ ನಡೆಸಿದನು. ಈ ಸಂದರ್ಭದಲ್ಲಿ ಸುಸಜ್ಜಿತ ಕೋಟೆ ಸಹ ನಿರ್ಮಾಣಗೊಂಡಿತಲ್ಲದೇ ದೇವಾಲಯಗಳಿಗೆ ದಾನ ದತ್ತಿ ಕೊಟ್ಟರಲ್ಲದೇ ಅವುಗಳನ್ನು ಪುನರುಜ್ಜೀವನಗೊಳಿಸಿದರು. ಜತೆಗೆ ಹತ್ತಾರು ಕವಿಗಳಿಗೆ ಆಶ್ರಯ ನೀಡಿ, ಸಾಹಿತ್ಯ ಮತ್ತು ಕಲೆಗೆ ಪ್ರೋತ್ಸಾಹ ನೀಡಿದರು. ಕ್ರಿ.ಶ. ೧೬೩ರಲ್ಲಿ ಮೈಸೂರಿನ ಚಾಮರಾಜ ಒಡೆಯರ್ ಚನ್ನಪಟ್ಟಣ ರಾಜ್ಯವನ್ನು ಮುತ್ತಿ ವಶಪಡಿಸಿಕೊಂಡ ನಂತರ ಚನ್ನಪಟ್ಟಣ ಪಾಳೆಯಗಾರರ ಆಳ್ವಿಕೆ ಅಂತ್ಯಗೊಂಡಿತು ಎಂದರು.

ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಮಾಲಿನಿ ಮಾತನಾಡಿ, ಸ್ಥಳೀಯ ಇತಿಹಾಸ ಮತ್ತು ಪರಂಪರೆಯ ಅಧ್ಯಯನಗಳು ಮಕ್ಕಳಲ್ಲಿ ಅಗಾಧವಾದ ಜ್ಞಾನವನ್ನು ತುಂಬಿಕೊಳ್ಳಲು ಸಹಕಾರಿ. ಸ್ಥಳೀಯ ಇತಿಹಾಸದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಇತಿಹಾಸದ ಬಗ್ಗೆ ಜ್ಞಾನ ಹೊಂದಲು ಇದು ಮೊದಲ ಮೆಟ್ಟಿಲು ಎಂದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶಕುಂತಲಾ, ಸಹ ಶಿಕ್ಷಕಿಯರಾದ ಎಚ್.ಎಸ್. ಗಿರಿಜಾ, ಪುಷ್ಪಲತಾ, ಭಾಗ್ಯಶ್ರೀ, ಶುಭಾ ಹಾಜರಿದ್ದರು.

ಪೊಟೋ೨೮ಸಿಪಿಟಿ೧:

ಚನ್ನಪಟ್ಟಣದ ಇಂಡಿಯನ್ ಆಕ್ಸ್‌ಫರ್ಡ್ ಸ್ಕೂಲ್ ಆವರಣದಲ್ಲಿ ಏರ್ಪಡಿಸಿದ್ದ ಚನ್ನಪಟ್ಟಣದ ಇತಿಹಾಸ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಸಾಹಿತಿ ವಿಜಯ್ ರಾಂಪುರ ಉದ್ಘಾಟಿಸಿದರು.