ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿಗೆ ಮಕ್ಕಳ ದಾಖಲಾತಿಗೆ ಮುಗಿಬಿದ್ದ ಪೋಷಕರು

| Published : Jun 27 2024, 01:02 AM IST

ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿಗೆ ಮಕ್ಕಳ ದಾಖಲಾತಿಗೆ ಮುಗಿಬಿದ್ದ ಪೋಷಕರು
Share this Article
  • FB
  • TW
  • Linkdin
  • Email

ಸಾರಾಂಶ

ಎಲ್‌ಕೆಜಿಗೆ 463 ಮಕ್ಕಳು, ಯುಕೆಜಿಗೆ 417 ಮಕ್ಕಳು ದಾಖಲಾತಿಯಾಗಿದೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಅಂಗನವಾಡಿ ಕಾರ್ಯಕರ್ತರ ವಿರೋಧದ ಮಧ್ಯೆಯೂ ರಾಜ್ಯ ಸರ್ಕಾರದ ಆದೇಶದಂತೆ ತಾಲೂಕಿನ 23 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳಲ್ಲಿ ಮಕ್ಕಳ ಕಲರವ ಆರಂಭಗೊಂಡಿದೆ. ಇಲ್ಲಿ ಮಕ್ಕಳ ದಾಖಲಾತಿಗೆ ಪೋಷಕರು ಮುಗಿಬಿದ್ದಿದ್ದಾರೆ.

ಪಟ್ಟಣದಲ್ಲಿ ಹರಿಹರ ರಸ್ತೆಯ ಆಶ್ರಯ ಕ್ಯಾಂಪ್ ಶಾಲೆ, ಬಾಪೂಜಿ ನಗರ ಶಾಲೆ, ಮೇಗಳಪೇಟೆ ಶಾಲೆ, 8ನೇ ವಾರ್ಡ್ ಶಾಲೆ, ಉನ್ನತೀಕರಿಸಿದ ಉರ್ದು ಶಾಲೆ ಹೀಗೆ 5 ಶಾಲೆಗಳಲ್ಲಿ ಹಾಗೂ ಚೆನ್ನಹಳ್ಳಿ ತಾಂಡಾ, ಚಿಗಟೇರಿ, ದುಗ್ಗಾವತ್ತಿ, ರಾಗಿಮಸಲವಾಡ, ಹಲುವಾಗಲು, ಹೊಂಬಳಗಟ್ಟಿ, ಹುಲ್ಲಿಕಟ್ಟಿ, ಕಮ್ಮತ್ತಹಳ್ಳಿ, ಕಣವಿಹಳ್ಳಿ, ಚಿರಸ್ಥಹಳ್ಳಿ, ಕ್ಯಾರಕಟ್ಟಿ, ಎನ್‌. ಶೀರನಹಳ್ಳಿ, ನೀಲಗುಂದ, ಅರಸಿಕೇರಿ, ಕುಂಚೂರು, ಅರಸಿಕೇರಿಯ ಶಾಂತಪ್ರಕಾಶ ನಗರ, ಶಿಂಗ್ರಿಹಳ್ಳಿ, ಮೈದೂರು ಹೀಗೆ 23 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭಗೊಂಡಿವೆ.

ಈಗಾಗಲೇ ಎಲ್‌ಕೆಜಿಗೆ 463 ಮಕ್ಕಳು, ಯುಕೆಜಿಗೆ 417 ಮಕ್ಕಳು ದಾಖಲಾತಿಯಾಗಿದೆ. ಇವೇ 23 ಶಾಲೆಗಳಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ಆರಂಭಗೊಂಡಿದ್ದು, ಆಂಗ್ಲ ಮಾಧ್ಯಮಕ್ಕೆ 426 ಮಕ್ಕಳು ದಾಖಲಾಗಿವೆ. ಹೀಗೆ ದಾಖಲಾತಿ ಭರದಿಂದ ಸಾಗಿದೆ.

ಎಲ್‌ಕೆಜಿ, ಯುಕೆಜಿಗೆ ಎನ್‌ಟಿಸಿ ತರಬೇತಿ ಪಡೆದ ಮಹಿಳಾ ಅತಿಥಿ ಶಿಕ್ಷಕರನ್ನು ಈಗಾಗಲೇ ನೇಮಕಾತಿ ಮಾಡಿಕೊಂಡು ಅವರಿಗೆ ತರಬೇತಿ ನೀಡುವ ಪ್ರಕ್ರಿಯೆ ನಡೆದಿದೆ. ಇನ್ನು ಈ ಶಾಲೆಗಳಲ್ಲಿ ಆಯಾಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ತಲಾ 30 ಸೀಟುಗಳಿಗೆ ಮಾತ್ರ ಅವಕಾಶವಿದೆ. ಈಗಾಗಲೇ ಹುಲ್ಲಿಕಟ್ಟಿ, ದುಗ್ಗಾವತ್ತಿ, ನೀಲಗುಂದ, ಹರಪನಹಳ್ಳಿಯ 8ನೇ ವಾರ್ಡ್ ಶಾಲೆ, ಮೇಗಳಪೇಟೆ ಶಾಲೆ, ಸಿಂಗ್ರಿಹಳ್ಳಿ ಹೀಗೆ ಆರು ಶಾಲೆಗಳಲ್ಲಿ ಸೀಟುಗಳು ಭರ್ತಿಯಾಗಿವೆ. ಉಳಿದ 17 ಶಾಲೆಗಳಲ್ಲಿ ಭರ್ತಿಯಾಗುವ ಸನಿಯದಲ್ಲಿವೆ. ಅಗತ್ಯ, ಅರ್ಹ ಶಿಕ್ಷಕರು ನೇಮಕಗೊಂಡರೆ ಸರ್ಕಾರಿ ಶಾಲೆಗಳಿಗೂ ಶುಕ್ರದೆಸೆ ಆರಂಭವಾಗುವ ಕಾಲ ದೂರವಿಲ್ಲ.

ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆಯ್ದ 23 ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿದ್ದೇವೆ. ಸಕಲ ಸಿದ್ಧತೆ ಕೈಗೊಂಡಿದ್ದೇವೆ. ಪೋಷಕರು ಉತ್ಸಾಹದಿಂದ ದಾಖಲಾತಿಗೆ ಮುಂದಾಗಿರುವುದು ಸಂತಸದ ಸಂಗತಿ ಎನ್ನುತ್ತಾರೆ ಹರಪನಹಳ್ಳಿ ಬಿಇಒ ಯು. ಬಸವರಾಜಪ್ಪ.