ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್‌ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ ವಿರುದ್ಧ 23,098 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್‌ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ ವಿರುದ್ಧ 23,098 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದೇ ವೇಳೆ, ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಅವರು ಕಾಂಗ್ರೆಸ್‌ನ ಮೋಹನ ಲಿಂಬಿಕಾಯಿ ವಿರುದ್ಧ 9,323 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರಿಂದಾಗಿ ಅ.23ರಂದು ನಡೆದಿದ್ದ ಪರಿಷತ್‌ ಚುನಾವಣೆಯ ಎಲ್ಲಾ ನಾಲ್ಕು ಸ್ಥಾನಗಳಲ್ಲೂ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಗೆಲುವು ಸಾಧಿಸಿದಂತಾಗಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ.

ಪರಿಷತ್ತಿನ ನಾಲ್ಕು ಸ್ಥಾನಗಳ ಮತಗಳ ಎಣಿಕೆ ಮಂಗಳವಾರ ನಡೆಯಿತು. ಸಂಜೆಯ ವೇಳೆಗೆ ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ 5ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಶಶೀಲ್ ಜಿ.ನಮೋಶಿ ಅವರು ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಭರ್ಜರಿ ಜಯ ಗಳಿಸಿದ್ದರು. ನಮೋಶಿ ಅವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರು ಅವರನ್ನು 3,297 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್‌ ಅವರು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ 908 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದು, ಐದು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಸೋಲು ಕಂಡಿದ್ದಾರೆ. ಈ ಮಧ್ಯೆ, ಉಳಿದೆರಡು ಕ್ಷೇತ್ರಗಳಲ್ಲಿ ಮತಗಳ ಎಣಿಕೆ ಮುಂದುವರಿದಿದ್ದು, ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರು.

ಆಗ್ನೇಯ ಪದವೀಧರರ ಕ್ಷೇತ್ರದ ಮತಗಳ ಎಣಿಕೆ ಬುಧವಾರ ಬೆಳಗ್ಗೆ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಶಶಿ ಹುಲಿಕುಂಟೆಮಠ ವಿರುದ್ಧ 23,098 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. 1,12,062 ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಸುರೇಶ್‌ 66,020 ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ 42,922 ಮತ ಪಡೆದಿದ್ದಾರೆ.ಉಳಿದಂತೆ, ಸರ್ವ ಜನತಾ ಪಾರ್ಟಿಯ ಅಭ್ಯರ್ಥಿ ಸಿ.ಜಿ.ಪಾಟೀಲ್‌ 162, ಪಕ್ಷೇತರ ಅಭ್ಯರ್ಥಿಗಳಾದ ಕಪನಿಗೌಡ 156, ಚಿಕ್ಕರಾಜು ಎಸ್.ವೈ.ಯಾದವ್‌ 377, ಲಕ್ಷ್ಮಯ್ಯ ಆರ್‌. 387, ಲಕ್ಷ್ಮಿಕಾಂತ ಎಸ್‌.ಯಾದವ್‌ 369, ಶಶಿ ಹುಲಿಕಟ್ಟಿ 449, ಸೈಯದ್‌ ಅಫಕ್ ಅಹಮ್ಮದ್‌ 113, ಅಡ್ವೊಕೇಟ್‌ ಬಾರಿದ್‌ 1,107 ಮತಗಳನ್ನು ಪಡೆದಿದ್ದಾರೆ.

ಇನ್ನು, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ವಿ.ಸಂಕನೂರು ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ಅವರು ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು 9,323 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಂಕನೂರಗೆ 33,711 ಮತಗಳು ಬಂದರೆ, ಲಿಂಬಿಕಾಯಿಗೆ 24,388 ಮತಗಳು ಲಭಿಸಿದವು.