ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕವಿ, ಲೇಖಕ, ಹಾಡುಗಾರ, ಶಿಕ್ಷಕ, ಹೋರಾಟ ಮತ್ತು ಸಂಘಟನಾಕಾರ ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಡಾ. ಹ.ರಾ. ಮಹೇಶ್‌ರವರನ್ನು ಶಿಕ್ಷಣ ಕ್ಷೇತ್ರದ ಮತದಾರರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕೆಂದು ಬಿಎಸ್ಪಿ ರಾಜ್ಯ ಸಂಯೋಜಕ ಮತ್ತು ಉಸ್ತುವಾರಿ ಎಂ. ಕೃಷ್ಣಮೂರ್ತಿ ಮನವಿ ಮಾಡಿದರು.ಕಳೆದ ೨೪ ವರ್ಷಗಳಿಂದ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡ ಅವರನ್ನು ಶಿಕ್ಷಕರು ಸೋಲಿಸಬೇಕು. ಮರಿತಿಬ್ಬೆಗೌಡ ಅವರು ಮೊದಲ ಬಾರಿಗೆ ಎಂಎಲ್ಸಿ ಆದಾಗ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಶೇ. ೭೦ರಷ್ಟು ಖಾಯಂ ಬೋಧಕರಿದ್ದರು. ಈಗ ಕೇವಲ ಶೇ.೩೦ ರಿಂದ ೩೫ ರಷ್ಟು ಮಾತ್ರ ಕಾಯಂ ಬೋಧಕರಿದ್ದಾರೆ. ಇದರ ಹೊಣೆಯನ್ನು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿದ್ದವರು ಹೊರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೇ.೭೦ ರಷ್ಟು ಅತಿಥಿ ಪ್ರಾಧ್ಯಾಪಕರಿಂದ ಇಂದು ಪ್ರಥಮ ದರ್ಜೆ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳು ನಡೆಯುತ್ತಿವೆ. ಇವರನ್ನು ಕಾಯಂ ಮಾಡಿಸಲು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ವಿಫಲರಾಗಿದ್ದಾರೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ೧.೪೦ ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಿಸುವಲ್ಲಿ ಮರಿತಿಬ್ಬೇಗೌಡರು ವಿಫಲರಾಗಿದ್ದಾರೆ ಎಂದು ದೂರಿದರು.ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರು ತಮಗೆ ವಿಮೆ, ಆರೋಗ್ಯ ಮತ್ತು ಪಿಂಚಣಿ ಸೌಲಭ್ಯ ನೀಡಬೇಕೆಂದು ಕಳೆದ ೨೦ ವರ್ಷಗಳಿಂದ ಹೋರಾಡುತ್ತಿದ್ದಾರೆ. ಇವರ ಬೇಡಿಕೆಗಳನ್ನು ಈಡೇರಿಸುವುದಕ್ಕೂ ಮರಿತಿಬ್ಬೆಗೌಡರಿಗೆ ಸಾಧ್ಯವಾಗಿಲ್ಲ. ೧೯೯೫ ರಿಂದ ಕನ್ನಡ ಶಾಲಾ ಕಾಲೇಜುಗಳಿಗೆ ಅನುದಾನ ಕೊಡಿಸುವಲ್ಲಿ ವೈಫಲ್ಯ ಸಾಧಿಸಿರುವುದರಿಂದ ಅವರು ಮತ್ತೆ ವಿಧಾನಪರಿಷತ್‌ಗೆ ಆಯ್ಕೆಯಾಗುವ ಅರ್ಹತೆಯನ್ನೇ ಕಳೆದುಕೊಂಡಿದ್ದಾರೆ ಎಂದು ಮೂದಲಿಸಿದರು..
ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಲು ಸಹ ಅರ್ಹರಲ್ಲ. ಚಿಂತಕರು ಮತ್ತು ಬುದ್ಧಿವಂತರ ಚಾವಡಿಯಾಗಿರುವ ವಿಧಾನಪರಿಷತ್‌ಗೆ ಶಿಕ್ಷಕರು ಹಾಗೂ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಯಾವುದೇ ಜ್ಞಾನ ಇಲ್ಲದ, ಕೇವಲ ಎಸ್‌ಎಸ್‌ಎಲ್‌ಸಿ ಓದಿರುವ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸುವ ಮೂಲಕ, ಜೆಡಿಎಸ್ ಮತ್ತು ಬಿಜೆಪಿಗಳು ಶಿಕ್ಷಕ ವೃಂದಕ್ಕೆ ಅಪಮಾನ ಮಾಡಿವೆ. ಕೇವಲ ಹಣಕಾಸಿನ ಮಾನದಂಡವನ್ನು ಇಟ್ಟುಕೊಂಡು ಕುರಿ ಕೋಳಿ ತರಕಾರಿಗಳನ್ನು ಖರೀದಿ ಮಾಡುವಂತೆ, ಶಿಕ್ಷಕ ಮತದಾರರನ್ನು ಖರೀದಿ ಮಾಡಲು ಚುನಾವಣೆಗೆ ಇಳಿಸಿದಂತಿದೆ ಎಂದು ಲೇವಡಿ ಮಾಡಿದರು.ಬಿಎಸ್ಪಿ ಬೆಂಬಲಿತ ಹ.ರಾ. ಮಹೇಶ್ ಅವರನ್ನು ಗೆಲ್ಲಿಸಿದರೆ ಪ್ರಥಮ ದರ್ಜೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಬೋಧಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು, ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಸದನದಲ್ಲಿ ಹೋರಾಡುತ್ತೇವೆ ಎಂದು ಭರವಸೆ ನೀಡಿದರು.ಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ಜಿಲ್ಲಾಧ್ಯಕ್ಷ ಶಿವಶಂಕರ್, ನಂಜುಂಡಸ್ವಾಮಿ, ದಿನೇಶ್, ಯೋಗಾನಂದಗೌಡ, ಅನಿಲ್‌ಕುಮಾರ್ ಹಾಜರಿದ್ದರು.