ಕನ್ನಡಪ್ರಭ ವಾರ್ತೆ ಬೇಲೂರು
ಅನಾವೃಷ್ಟಿ ನಿವಾರಣೆ, ಸಕಾಲಿಕ ಮಳೆಯ ಪ್ರಾಪ್ತಿ ಹಾಗೂ ಲೋಕಕ್ಷೇಮಕ್ಕಾಗಿ ಪಟ್ಟಣದ ಶ್ರೀ ಪಾರ್ವತಿ ಸಮೇತ ಪ್ರಸನ್ನ ನಂಜುಂಡೇಶ್ವರ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪರ್ಜನ್ಯಾಭಿಷೇಕ (ಗುಟುಕು ನೀರು ಕುಡಿಸುವುದು) ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.ದೇವಾಲಯದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ವಿಶೇಷ ಆಚರಣೆಯ ಅಂಗವಾಗಿ ಶ್ರೀ ನಂಜುಂಡೇಶ್ವರ ಸ್ವಾಮಿಗೆ ವೇದಮಂತ್ರೋಚ್ಚಾರಣೆಯೊಂದಿಗೆ ಅಭಿಷೇಕ, ಅರ್ಚನೆ ಮತ್ತು ಪರ್ಜನ್ಯ ಪ್ರಾರ್ಥನೆ ಸಲ್ಲಿಸಲಾಯಿತು. ಮಳೆಯ ಕೊರತೆಯಿಂದ ಕೃಷಿ, ಕುಡಿಯುವ ನೀರು ಹಾಗೂ ಜನಜೀವನದ ಮೇಲೆ ಉಂಟಾಗಿರುವ ಸಂಕಷ್ಟ ನಿವಾರಣೆಯಾಗಲಿ ಎಂಬ ಸಂಕಲ್ಪದೊಂದಿಗೆ ಪೂಜೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ವೇದಬ್ರಹ್ಮ ಕೆ. ಆರ್. ಮಂಜುನಾಥ್, ದೇಶ ಹಾಗೂ ನಾಡಿನಲ್ಲಿ ಉಂಟಾಗಿರುವ ಮಳೆಯ ಕೊರತೆ ನಿವಾರಣೆಯಾಗಲೆಂದು ಪರ್ಜನ್ಯಾಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ. ಮಳೆ ದೇವತೆಯಾದ ಪರ್ಜನ್ಯನನ್ನು ಪ್ರಾರ್ಥಿಸುವ ಉದ್ದೇಶದಿಂದ ನಡೆಯುವ ಈ ಅಭಿಷೇಕದ ಮೂಲಕ ವರುಣ ಮತ್ತು ಇಂದ್ರ ದೇವತೆಗಳ ಕೃಪೆಯಿಂದ ಭೂಮಿಗೆ ಸಮೃದ್ಧ ಮಳೆ ಲಭಿಸುತ್ತದೆ ಎಂಬ ನಂಬಿಕೆ ಇದೆ ಎಂದರು.ಪೂಜೆಯ ಭಾಗವಾಗಿ 11 ಬಾರಿ ರುದ್ರಾಭಿಷೇಕ ನಡೆಸಲಾಗುತ್ತಿದ್ದು, ಈಗಾಗಲೇ ಆರು ಬಾರಿ ಅಭಿಷೇಕ ಪೂರ್ಣಗೊಂಡಿದೆ. ವಿಶೇಷ ಸೇವೆಯಾಗಿ ಈಶ್ವರ ಲಿಂಗವನ್ನು ನೀರಿನಲ್ಲಿ ಸಂಪೂರ್ಣ ಮುಳುಗಿಸಿ ಮೂರು ದಿನಗಳ ಕಾಲ ಇರಿಸುವ ‘ಗುಟುಕು ನೀರು ಕುಡಿಸುವ’ ಆಚರಣೆಯನ್ನೂ ನಡೆಸಲಾಗುತ್ತಿದೆ. ಈ ಮೂಲಕ ಈಶ್ವರನು ಪ್ರಸನ್ನನಾಗಿ ಭೂಮಿಗೆ ಅಗತ್ಯ ಪ್ರಮಾಣದ ಮಳೆಯನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ನಾಡಿನಾದ್ಯಂತ ಉತ್ತಮ ಮಳೆಯಾಗಿ ಕೃಷಿ ಸಮೃದ್ಧಿಯಾಗಲಿ, ಜಲಮೂಲಗಳು ತುಂಬಿ ಜನಜೀವನ ಸುಗಮವಾಗಲಿ ಹಾಗೂ ಸಮಸ್ತ ಜೀವಕೋಟಿಗೆ ಒಳಿತಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಕ್ತರ ಸಹಭಾಗಿತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಹಾಗೂ ಶೃಂಗೇರಿ ಮಠದ ಧರ್ಮಾಧಿಕಾರಿ ವಿಜಯ ಕೇಶವ್, ಗೈಡ್ ರವೀಂದ್ರ, ರಮೇಶ್ ಆನಂಬಿ, ತೊ ಚ ನರಸಿಂಹಸ್ವಾಮಿ, ಕೇಶವಮೂರ್ತಿ ಹತ್ವಾರ್, ಭಕ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಅನಾವೃಷ್ಟಿ ನಿವಾರಣೆಗೆ ಪರ್ಜನ್ಯಾಭಿಷೇಕ
ದೇವಾಲಯದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ವಿಶೇಷ ಆಚರಣೆಯ ಅಂಗವಾಗಿ ಶ್ರೀ ನಂಜುಂಡೇಶ್ವರ ಸ್ವಾಮಿಗೆ ವೇದಮಂತ್ರೋಚ್ಚಾರಣೆಯೊಂದಿಗೆ ಅಭಿಷೇಕ, ಅರ್ಚನೆ ಮತ್ತು ಪರ್ಜನ್ಯ ಪ್ರಾರ್ಥನೆ ಸಲ್ಲಿಸಲಾಯಿತು. ಮಳೆಯ ಕೊರತೆಯಿಂದ ಕೃಷಿ, ಕುಡಿಯುವ ನೀರು ಹಾಗೂ ಜನಜೀವನದ ಮೇಲೆ ಉಂಟಾಗಿರುವ ಸಂಕಷ್ಟ ನಿವಾರಣೆಯಾಗಲಿ ಎಂಬ ಸಂಕಲ್ಪದೊಂದಿಗೆ ಪೂಜೆ ನಡೆಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.