ಸೌಕರ್ಯಗಳಿಲ್ಲದೇ ಸೊರಗಿದ ಉದ್ಯಾನವನಗಳು

| Published : May 02 2024, 12:15 AM IST

ಸೌಕರ್ಯಗಳಿಲ್ಲದೇ ಸೊರಗಿದ ಉದ್ಯಾನವನಗಳು
Share this Article
  • FB
  • TW
  • Linkdin
  • Email

ಸಾರಾಂಶ

ಗೌರಿಬಿದನೂರು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ನಗರದ ಅಂದ ಹೆಚ್ಚಿಸುವ ಉದ್ಯಾನವನಗಳ ಬಗ್ಗೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದಾದ್ಯಂತ ಹಲವಾರು ಸ್ಥಳಗಳಲ್ಲಿ ಉದ್ಯಾನವನಗಳಿದ್ದರೂ ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ಉದ್ಯಾನವನದಲ್ಲಿದ್ದ ಹಸಿರೆಲ್ಲ ಮಾಯ­ವಾಗಿದೆ. ತುಕ್ಕು ಹಿಡಿದು,ಕಿತ್ತು ಹೋಗಿರುವ ಬೆಂಚ್‌ಗಳು ಮಾತ್ರ ಕಣ್ಣಿಗೆ ಕಾಣುತ್ತವೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರವಾಸಿಗಳು ಮನಸ್ಸಿಗೆ ಒಂದಷ್ಟು ನೆಮ್ಮದಿ ನೀಡುವ ತಾಣ, ಮಕ್ಕಳ ಆಟಕ್ಕೊಂದು ಸ್ಥಳ, ಹಿರಿಯರು, ಕಿರಿಯರು ಕೆಲಹೊತ್ತು ಸಮಯ ಕಳೆಯುವುದಕ್ಕಾಗಿ ಮತ್ತು ಮುಂಜಾನೆಯ ವಾಕಿಂಗ್ ಗಾಗಿ ಅವಲಂಬಿಸಿರುವ ಒಂದೇ ಒಂದು ಸುಸಜ್ಜಿತ ತಾಣವೆಂದರೆ ಅದು ಉದ್ಯಾನವನ. ಆದರೆ ಗೌರಿಬಿದನೂರು ನಗರದ ಯಾವುದೇ ವಾರ್ಡ್ ನಲ್ಲಿಯೂ ಸುಸಜ್ಜಿತ ಉದ್ಯಾನವನ ಕಾಣಲು ಸಿಗುವುದಿರುವುದು ವಿಪರ್ಯಾಸ.

ಗೌರಿಬಿದನೂರು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ನಗರದ ಅಂದ ಹೆಚ್ಚಿಸುವ ಉದ್ಯಾನವನಗಳ ಬಗ್ಗೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದಾದ್ಯಂತ ಹಲವಾರು ಸ್ಥಳಗಳಲ್ಲಿ ಉದ್ಯಾನವನಗಳಿದ್ದರೂ ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ಉದ್ಯಾನವನದಲ್ಲಿದ್ದ ಹಸಿರೆಲ್ಲ ಮಾಯ­ವಾಗಿದೆ. ತುಕ್ಕು ಹಿಡಿದು,ಕಿತ್ತು ಹೋಗಿರುವ ಬೆಂಚ್‌ಗಳು ಮಾತ್ರ ಕಣ್ಣಿಗೆ ಕಾಣುತ್ತವೆ.

ಈ ಕಾರಣಗಳಿಂದಾಗಿ ತಾಲೂಕು ಕೇಂದ್ರವಾಗಿರುವ ನಗರ­ದಲ್ಲಿ ಒಂದೇ ಒಂದು ಸುಸಜ್ಜಿತ ಉದ್ಯಾನವನ ಹುಡುಕಿದರೂ ಸಿಗ­ದಂತಾಗಿದೆ. ಇಲ್ಲಿಯ ಕೃಷಿ ಇಲಾಖೆಯ ಮುಂಭಾಗ, ಸಾರ್ವಜನಿಕ ಆಸ್ಪತ್ರೆ, ವಿದ್ಯಾನಗರ, ಕರೇಕಲ್ಲಹಳ್ಳಿ, ಮಾದನಹಳ್ಳಿ ಸೇರಿ ಹಲವಾರು ವಾರ್ಡ್ ಗಳಲ್ಲಿ ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ಆದರೆ ಈ ಎಲ್ಲ ಉದ್ಯಾನವನಗಳೂ ಒಂದೊಂದು ಕೊರತೆ­ಯಿಂದ ನಲುಗುತ್ತಿದ್ದು, ಜನರಿಂದ ದೂರವಾಗಿಯೇ ಉಳಿದಿವೆ. ಕೆಲವು ಉದ್ಯಾನವನಗಳಲ್ಲಿ ವಿದ್ಯುತ್‌ ದೀಪಗಳು, ತಂತಿ ಬೇಲಿ ಇದ್ದರೂ, ಇದೊಂದು ಉದ್ಯಾನವನ ಎಂಬುದೇ ತಿಳಿಯದಂತಹ ವಾತಾವರಣವಿದೆ. ಒಣಗಿದ ಗಿಡಗಳು, ಕಿತ್ತುಹೋಗಿ­ರುವ ಪಾದಚಾರಿ ರಸ್ತೆಗಳು, ಮುರಿದು ಬಿದ್ದಿರುವ ಕಟ್ಟಿಗೆ, ಕಲ್ಲು ಚೂರುಗಳು,ಉದ್ಯಾನವನದ ಕಳೆಯೇ ಹೊರಟು ಹೋಗಿದೆ, ಕೋರ್ಟ್ ರಸ್ತೆಯಲ್ಲಿ 2 ಉದ್ಯಾನವನಗಳಿದ್ದು ಅವು ಇದ್ದೂ ಇಲ್ಲದಂತಾಗಿವೆ. ಇನ್ನು ಸ್ವಲ್ಪದಿನಗಳು ಕಳೆದರೆ ಕೆಲವು ಉದ್ಯಾನವನಗಳೇ ಮಾಯವಾಗುವ ಸಾಧ್ಯತೆಗಳು ಸಹ ಇವೆ ಎನ್ನುವುದು ನಗರವಾಸಿಗಳ ಕಳವಳ.

ನಗರದ ಯೋಜನಾ ಪ್ರಾಧಿಕಾರದಿಂದ ಹೊಸದಾಗಿ ನಿರ್ಮಿಸುವ ಬಡಾವಣೆಗಳಿಗೆ ಇಂತಿಷ್ಟು ಜಾಗ ಉದ್ಯಾನವನಕ್ಕೆಂದು ಮೀಸಲಿಟ್ಟಿರುತ್ತದೆ. ಭೂ ಮಾಲೀಕರು ಅನುಮತಿ ಪಡೆಯುವವರೆಗೆ ಮಾತ್ರ ಗಿಡಗಳನ್ನು ಆರೈಕೆ ಮಾಡುತ್ತಾರೆ, ನಂತರ ನಗರಸಭೆ ಸುಪರ್ದಿಗೆ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ, ನಿರ್ವಹಣೆ ಕೊರತೆಯಿಂದ ಉದ್ಯಾನವನಗಳು ಪಾಳು ಬೀಳಲಾರoಭಿಸಿ, ಕುಡುಕರ ಅಡ್ಡೆಗಳಾಗಿ ಮಾರ್ಪಡುತ್ತಿವೆ, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನಗರದ ಅಂದ ಹೆಚ್ಚಿಸುವ ಜೊತೆಗೆ, ಪ್ರಕೃತಿಯನ್ನೂ ಕಾಪಾಡುವ ಕೆಲಸ ಮಾಡಬೇಕಾಗಿದೆ.