ಸಾರಾಂಶ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 5.78 ಕೋಟಿ ರು. ವೆಚ್ಚದಲ್ಲಿ ಹೆಚ್ಚುವರಿ 5 ಕೊಠಡಿ ಹಾಗೂ ಆಡಿಟೋರಿಯಂ ನಿರ್ಮಾಣಕ್ಕೆ ಶೀಘ್ರ ಗುದ್ದಲಿ ಪೂಜೆ ನೆರೆವೇರಿಸುವುದಾಗಿ ಶಾಸಕ ಎಚ್. ವಿ.ವೆಂಕಟೇಶ್ ಭರವಸೆ ನೀಡಿದರು.
ಕನ್ನಡಪ್ರಭವಾರ್ತೆ ಪಾವಗಡ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 5.78 ಕೋಟಿ ರು. ವೆಚ್ಚದಲ್ಲಿ ಹೆಚ್ಚುವರಿ 5 ಕೊಠಡಿ ಹಾಗೂ ಆಡಿಟೋರಿಯಂ ನಿರ್ಮಾಣಕ್ಕೆ ಶೀಘ್ರ ಗುದ್ದಲಿ ಪೂಜೆ ನೆರೆವೇರಿಸುವುದಾಗಿ ಶಾಸಕ ಎಚ್. ವಿ.ವೆಂಕಟೇಶ್ ಭರವಸೆ ನೀಡಿದರು.ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ.ಇ.ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ತುಮಕೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಖೋ ಖೋ ಪಂದ್ಯಾವಳಿಯ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.ನಮ್ಮ ತಂದೆ ವೆಂಕಟರಮಣಪ್ಪ ಅವರ ಅವಧಿಯಲ್ಲಿ ಈ ಒಂದು ಕಾಲೇಜು ನಿರ್ಮಾಣದ ಕಾರ್ಯ ನೆರೆವೇರಿದ್ದು, ಇದರ ಅಭಿವೃದ್ಧಿಯ ಹೊಣೆ,ನನ್ನ ಮೇಲಿದೆ. ಈ ಸಂಬಂಧ ಕಾಮಗಾರಿ ಕುರಿತು ಟೆಂಡರ್ ಪ್ರಗತಿಯಲ್ಲಿದೆ. ಅತಿ ಶೀಘ್ರದಲ್ಲಿಯೇ ಗುದ್ದಲಿ ಪೂಜೆಯನ್ನು ನೆರವೇರಿಸುತ್ತೇವೆ. ಮುಂದಿನ ವರ್ಷ ಆಡಿಟೋರಿಯಂ ಮತ್ತು ಹೆಚ್ಚುವರಿ ಕೊಠಡಿಗಳ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದು ತಿಳಿಸಿದರು.
ಇಲ್ಲಿಗೆ ಡಿಪ್ಲೊಮಾ ಕಾಲೇಜು ತರುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಪಾವಗಡದಲ್ಲಿ ಸೋಲಾರ್ ಇರುವುದರಿಂದ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಇಲ್ಲಿಯೇ ತರಬೇತಿ ನೀಡಲು ಸಹಕಾರಿಯಾಗುತ್ತದೆ. ಅಲ್ಲದೇ ನಮ್ಮೂರಿನಲ್ಲಿ ಅಂತರ್ ಕಾಲೇಜು ಮಠದ ಖೋ ಖೋ ಪಂದ್ಯಾವಳಿಯನ್ನು ಆಯೋಜಿಸಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಉತ್ತಮ ರೀತಿಯಲ್ಲಿ ತಮ್ಮ ಕ್ರೀಡೆಯನ್ನು ಪ್ರದರ್ಶಿಸಿ ಕ್ರೀಡೆಯಲ್ಲಿ ಸಾಧನೆ ಮಾಡಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಾಧ್ಯಾಪಕರ ಪಾತ್ರ ಹಾಗೂ ಶ್ರಮ ಹೆಚ್ಚಿರುತ್ತದೆ. ಆದ್ದರಿಂದ ತಾವೆಲ್ಲ ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಬೇಕು ಎಂದು ಕಾಲೇಜು ಉಪನ್ಯಾಸಕರಿಗೆ ಕರೆ ನೀಡಿದರು.ಮೊದಲ ಬಹುಮಾನವನ್ನು ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಡೆದುಕೊಂಡಿದ್ದು, ದ್ವಿತೀಯ ಬಹುಮಾನ ಪಾವಗಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಡೆದುಕೊಂಡಿದೆ.
ಪ್ರಭಾರ ಪ್ರಾಂಶುಪಾಲ ಮುರಳೀಧರ್, ಪತ್ರಾಂಕಿತ ವ್ಯವಸ್ಥಾಪಕ ಬಿ.ಪಿ.ಪ್ರಹ್ಲಾದ್ ಪುರಸಭಾ ಸದಸ್ಯ ಪಿ.ಎಚ್. ರಾಜೇಶ್, ತೆಂಗಿನಕಾಯಿ ರವಿ, ದೈಹಿಕ ಶಿಕ್ಷಣ ನಿರ್ದೇಶಕ ಎ. ಹನುಮಂತರಾಯಪ್ಪ, ಮಹಿಳಾ ಕಾಲೇಜಿನ ಮಧುಕರ್, ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.