ನಾನು ಮುಂದಿನ ದಿನಗಳಲ್ಲಿ ಎಡವದೆ ನಡೆಯುವ ಶಕ್ತಿಯನ್ನು ಮಠಾಧೀಶರು ದಯಪಾಲಿಸಲಿ : ಬಿ.ವೈ. ವಿಜಯೇಂದ್ರ

| N/A | Published : Apr 08 2025, 12:32 AM IST / Updated: Apr 08 2025, 01:18 PM IST

ನಾನು ಮುಂದಿನ ದಿನಗಳಲ್ಲಿ ಎಡವದೆ ನಡೆಯುವ ಶಕ್ತಿಯನ್ನು ಮಠಾಧೀಶರು ದಯಪಾಲಿಸಲಿ : ಬಿ.ವೈ. ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಳೆಯ ಮೈಸೂರು ಭಾಗದಲ್ಲಿ ತುಮಕೂರು ಸಿದ್ದಗಂಗಾ ಮಠ ಮತ್ತು ಸುತ್ತೂರು ಮಠ ಜಾತ್ಯತೀತವಾಗಿ ಶಿಕ್ಷಣ, ಆರೋಗ್ಯ ಮತ್ತು ದಾಸೋಹ ದಂತಹ ಸೇವೆ ನೀಡುತ್ತಿವೆ.

 ಮೈಸೂರು  : ರಾಜ್ಯದಲ್ಲಿ ಯುವಕರು ಅಪೇಕ್ಷೆ ಇಟ್ಟುಕೊಂಡಿರುವುದರ ಜೊತೆಗೆ, ಸಮಾಜ ನನ್ನ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ರಾಜಕೀಯದಲ್ಲಿ ಎಡವುದು ಸಹಜ, ಆದರೆ ಹರಗೂರು ಚರಮೂರ್ತಿಗಳವರಲ್ಲಿ ವಿನಂತಿ ಮಾಡುವೆ, ನಾನು ಮುಂದಿನ ದಿನಗಳಲ್ಲಿ ಎಡವದೆ ನಡೆಯತಕ್ಕಂತಹ ಶಕ್ತಿಯನ್ನು ಮಠಾಧೀಶರು ದಯಪಾಲಿಸುವಂತೆ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ತಾಲೂಕಿನ ಜಯಪುರ ಹೋಬಳಿಯ ಮಾದಳ್ಳಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಮಹದೇಶ್ವರ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಸಿದ್ದಪ್ಪಾಜಿ ದೇವಾಲಯಗಳ ಜೀರ್ಣೋದ್ದಾರ, ಅಂಕಶಿಲಾ ಸ್ಥಾಪನೆ ಮತ್ತು ಕಳಸರೋಹಣ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಳೆಯ ಮೈಸೂರು ಭಾಗದಲ್ಲಿ ತುಮಕೂರು ಸಿದ್ದಗಂಗಾ ಮಠ ಮತ್ತು ಸುತ್ತೂರು ಮಠ ಜಾತ್ಯತೀತವಾಗಿ ಶಿಕ್ಷಣ, ಆರೋಗ್ಯ ಮತ್ತು ದಾಸೋಹ ದಂತಹ ಸೇವೆ ನೀಡುತ್ತಿವೆ. ಜಾತಿ ಎಂಬುದು ಕೇವಲ ಮುಖಂಡರ ತಲೆಯಲ್ಲಿದೆ. ಅದಕ್ಕೂ ಮಿಗಿಲಾಗಿ ಮಠಗಳು ಜನರ ಸೇವೆಯಲ್ಲಿ ತೊಡಗಿಸಿಕೊಂಡಿವೆ.ರಾಜ್ಯದಲ್ಲಿ ಮಠ ಮಾನ್ಯಗಳು ಇಲ್ಲದೆ ಹೋಗಿದ್ದರೆ ಪರಿಸ್ಥಿತಿ ಊಹೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದರು

.ನಮ್ಮ ತಂದೆಯಾದ ಬಿ.ಎಸ್‌. ಯಡಿಯೂರಪ್ಪ ಅವರನ್ನು ರಾಜ್ಯ ಮತ್ತು ಸಮಾಜ ಒಪ್ಪಿಕೊಂಡಿದೆ. ಅವರಂತೆ ನನಗೂ ಹೆಚ್ಚು ಪ್ರೀತಿ ತೋರಿಸಿದ್ದೀರಾ. ಈ ಹಿಂದೆ ವರುಣ ವಿಧಾನಸಭಾ ಚುನಾವಣೆ ಮತ್ತು ಕೆ.ಆರ್. ಪೇಟೆ ಉಪಚುನಾವಣೆಗಳು ನನ್ನನ್ನು ಹಳೇ ಮೈಸೂರು ಭಾಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಮೈಸೂರು, ಮಂಡ್ಯ, ಚಾಮರಾಜನಗರ ಜನರು ನನನ್ನು ಪ್ರೀತಿಯಿಂದ ವಿಜಿಯಣ್ಣ ಎಂದು ಕರೆಯುತ್ತಾರೆ. ಅವರಿಗೆ ಪ್ರೀತಿಗೆ ಅಭಾರಿ ಎಂದರು.ಮಾದಳ್ಳಿ ಗ್ರಾಮದಲ್ಲಿ ದೇವಾಲಯಗಳ ಜೀರ್ಣೋದ್ದಾರ ಕಾರ್ಯಕ್ರಮ ಕ್ಕೆ ಆಗಮಿಸಿದ್ದು ಖುಷಿ ನೀಡಿದೆ. ಯುವಕರು ದುಶ್ಚಟಗಳಿಗೆ ದಾಸರಾಗಬಾರದು. ಉತ್ತಮ ಸಂಸ್ಕಾರ ವಂತರಾಗಬೇಕು. ದೇವರ ಅನುಗ್ರಹದಿಂದ ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿ ಎಂದರು. 

ತಂದೆಯವರಂತೆ ಜನಮಾನಸದಿಂದ ಪ್ರೀತಿ ಗಳಿಸುತ್ತಾರೆಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ದಾರ ಗೊಂಡಿರುವ ದೇವಾಲಯದ ಒಂದೇ ಪ್ರಾಂಗಣದಲ್ಲಿ ಮೂರು ದೇವಾಲಯಗಳನ್ನು ನಿರ್ಮಿಸಿರುವುದು ಮಾದಳ್ಳಿ ಗ್ರಾಮದ ವಿಶೇಷ. ದೇವಾಲಯಗಳು ವ್ಯವಹಾರಿಕ ಕೇಂದ್ರ ವಾಗಬಾರದು. ಬದಲಿಗೆ ಭಕ್ತಿ ಭಾವ ಇರಬೇಕು. ಮನುಷ್ಯ ಭಾವಿಸುವ ಹಾಗೇ ಭಗವಂತ ಇರುತ್ತಾನೆ. ಭಗವಂತನ ಆರಾಧನೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಮಾತು, ನಡೆ-ನುಡಿಯಲ್ಲಿ ಸತ್ಯವಿರಬೇಕು.ಮಹದೇಶ್ವರ ಮತ್ತು ಸಿದ್ದಪ್ಪಾಜಿ ಪವಾಡ ಪುರುಷರು. ಇವರ ಮೇಲೆ ಜಾನಪದ ವಿದ್ವಾಂಸರು, ನೀಲಗಾರರು ಕಾವ್ಯಗಳನ್ನು ರಚಿಸಿದ್ದಾರೆ.ಅವನ್ನು ಹಾಡುವಾಗ ತಮ್ಮಲ್ಲಿ ತಾವು ತನ್ಮಯರಾಗುತ್ತಾರೆ ಎಂದರು. 

ವಿಜಯೇಂದ್ರ ಯುವ ನಾಯಕರಾಗಿದ್ದು, ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ತಮ್ಮ ತಂದೆಯವರಂತೆ ಜನಮಾನಸದಿಂದ ಪ್ರೀತಿ ಗಳಿಸುತ್ತಿದ್ದಾರೆ ಎಂದರು.

ತುಮಕೂರು ಸಿದ್ದಗಂಗಾ ಮಠ ಕಿರಿಯ ಶ್ರೀಗಳಾದ ಶಿವ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಭಾರತದಲ್ಲಿ ದೇವಾಲಯಗಳ ಸ್ಥಾಪನೆ ಹೆಚ್ಚಾಗುತ್ತಿದೆ ಆದರೆ ಭಕ್ತರಲ್ಲಿ ಭಕ್ತಿಯ ಕೊರತೆ ಎದ್ದು ಕಾಣುತ್ತಿದೆ. 12ನೇ ಶತಮಾನದಲ್ಲಿ ಬಸವೇಶ್ವರರರು ಜನ್ಮತಾಳಿ ಸಾಮಾಜಿಕ ಕೊಳಕು ತೊಳೆಯುವ ಕೆಲಸ ಮಾಡಿದರು. ದೇವರು ಸರ್ವವ್ಯಾಪಿಯಾಗಿದ್ದಾನೆ. ಮನುಷ್ಯನ ದೇಹವು ಕೂಡ ದೇವಾಲಯ ವಿದ್ದಂತೆ. ದೇವರಿಗೆ ಬಡತನ, ಸಿರಿತನ ಎಂಬ ಬೇಧವಿಲ್ಲ, ನಂಬಿಕೆ ಆಧಾರದಲ್ಲಿ ದೇವರನ್ನು ಸ್ಮರಿಸಬೇಕು ಎಂದರು.

ಕುಂದೂರು ಮಠದ ಶರತ್ ಚಂದ್ರ ಸ್ವಾಮೀಜಿ ಮಾತನಾಡಿ, ಊರಿಗೊಂದು ದೇವಾಲಯ ಇರಬೇಕು. ಭಕ್ತಿಯನ್ನು ಹೆಚ್ಚಿಸಿ ಭಗವಂತನನ್ನು ಪೂಜಿಸಬೇಕು. ದ್ವೇಷ, ಅಸೂಯೆ ಬಿಡಬೇಕು. ಅಂತರಾತ್ಮವನ್ನು ಪ್ರೀತಿಸಬೇಕು. ಜನ ಮೆಚ್ಚುವ ಬದಲು ಮನ ಮೆಚ್ಚುವ ಹಾಗೆ ಬದುಕಬೇಕು. ಹಣದ ಮೋಹಕ್ಕೆ ಭಗವಂತನನ್ನು ಮರೆಯಬಾರದು.ದೇವರನ್ನು ತಂದೆ ತಾಯಿ ಪೂಜಿಸುವುದರಲ್ಲಿ ಕಾಣಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ದೇವಸ್ಥಾನ ಊರಿಗೆ ಸಂಸ್ಕಾರ ಕೇಂದ್ರವಾಗಬೇಕು. ಧಾರ್ಮಿಕ ಸಂಸ್ಕಾರ ಕೂಡ ಮುಖ್ಯ ಎಂದರು. 

ವಿಜಯೇಂದ್ರಗೆ ಮುಖ್ಯಮಂತ್ರಿ ಆಗುವ ಅವಕಾಶವಿದೆ-ಜಿಟಿಡಿ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಕಲ್ಲು ಮಾದಳ್ಳಿಯಲ್ಲಿ ಇವತ್ತು ಮಠಾಧೀಶರ ಸಮಾಗಮದಲ್ಲಿ ಧಾರ್ಮಿಕ ಶೃಂಗ ಸಭೆ ನಡೆಯುತ್ತಿರುವುದು ಸಂತೋಷ. ನಾನು ಶಾಸಕನಾದ ಮೇಲೆ ಮಾದಳ್ಳಿ ಗ್ರಾಮಕ್ಕೆ ಶಾಲೆ, ಅಂಗನವಾಡಿ, ಡೇರಿ ಕಟ್ಟಡ ಗಳ ನಿರ್ಮಾಣ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ, ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ್ದೇನೆ.ಇಂದು ಮೂರು ಪಕ್ಷಗಳ ರಾಜಕಾರಣ ಛಿದ್ರವಾಗಿವೆ. ರಾಜಕಾರಣ ದಲ್ಲಿ ನನಗೆ ಅನ್ಯಾಯವಾಗಿದೆ. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿದ್ದಾರೆ. ಅವರಂತೆ ಅವರ ಮಗ ವಿಜಯೇಂದ್ರ ಕೂಡ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಅವರಿಗೆ ಉತ್ತಮ ಭವಿಷ್ಯವಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದರು.

ವೀರಗಾಸೆಕುಣಿತ, ತಮಟೆ, ಮಂಗಳವಾದ್ಯದ ಮೂಲಕ ಮಠಾಧೀಶರನ್ನ ಗ್ರಾಮದಲ್ಲಿ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಭಕ್ತರು ಕರೆತಂದರು. ಯುವಕರು ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಜೈಕಾರ ಕೂಗಿದರು. ಭಕ್ತರಿಗೆ ತುಪ್ಪದ ಕಜ್ಜಾಯ ಖಾದ್ಯದ ಅನ್ನಸಂತರ್ಪಣೆ ಮಾಡಲಾಯಿತು.

ಬರಡನಪುರ ಗುರು ಮಹಾಂತೇಶ್ವರ ಮಠದ ಪರಶಿವ ಮೂರ್ತಿ ಸ್ವಾಮೀಜಿ, ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮಾದಹಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ಸಿದ್ದಮಲ್ಲ ಸ್ವಾಮೀಜಿ, ನಟರಾಜ ಸ್ವಾಮೀಜಿ, ಅರ್ಕ ಆಶ್ರಮದ ಯೋಗಿ ಶ್ರೀನಿವಾಸ ಅರ್ಕ ಗುರೂಜಿ, ಶಿವಬಸವ ಸ್ವಾಮೀಜಿ, ಪುರ ಮಠದ ಚಂದ್ರಶೇಖರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಇಮ್ಮಡಿ ಗುರುಲಿಂಗ ಸ್ವಾಮೀಜಿ, ಬಸವಣ್ಣ ಸ್ವಾಮೀಜಿ, ಬರಡನಪುರ ಮಠ ದ ಚನ್ನಬಸವಣ್ಣ ಸ್ವಾಮೀಜಿ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಮುಖಂಡರಾದ ವಿ. ಕವೀಶ್ ಗೌಡ, ಬೀರಿಹುಂಡಿ ಬಸವಣ್ಣ, ಕಾನ್ಯ ಶಿವಮೂರ್ತಿ, ಚಾಮುಂಡೇಶ್ವರಿ ಬಿಜೆಪಿ ಅಧ್ಯಕ್ಷ ಪೈ.ಟಿ. ರವಿ, ದಾರಿಪುರ ಡಿ. ಚಂದ್ರಶೇಖರ್, ಜಯಪುರ ಠಾಣಾ ಎಸ್ಐಗಳಾದ ಪ್ರಕಾಶ್ ಯತ್ತಿನಮನಿ, ಹೇಮಲತಾ ಮತ್ತು ಗ್ರಾಮದ ಮುಖಂಡರು ಇದ್ದರು.