ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಆರ್.ಸಿ. ರಸ್ತೆ ಬಳಿ ಇರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಮತ್ತು ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ಪಕ್ಷದ ಸ್ಥಾಪನಾ ದಿನವನ್ನು ಆಚರಿಸಲಾಯಿತು.ಇದೇ ವೇಳೆ ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾತನಾಡಿ, ಬಿಜೆಪಿ ಬೆಳೆದು ಬಂದ ದಾರಿ ಅದರ ಸಿದ್ಧಾಂತಗಳು ಮತ್ತು ಅದರ ಮೌಲ್ಯಗಳನ್ನು ಮತ್ತೆ ಜ್ಞಾಪನ ಮಾಡುವುದೇ ಸ್ಥಾಪನ ದಿನದ ಉದ್ದೇಶವಾಗಿದೆ. ಬಿಜೆಪಿ ಸಿದ್ಧಾಂತ ಒಪ್ಪಿಕೊಂಡು ಅನೇಕರು ಬಂದಿದ್ದಾರೆ. ಒಂದು ಸಂಘಟನೆ ಮತ್ತು ಸಂಘ ಕಟ್ಟಬೇಕಾದರೇ ಒಂದು ಉದ್ದೇಶ ಗುರಿ ಇಲ್ಲದಿದ್ದರೇ ಯಾವುದೇ ಸಂಘಟನೆ ಕಟ್ಟಲು ಆಗುವುದಿಲ್ಲ. ನಮ್ಮೂರಿಗೆ ಕೆರೆ, ಆಸ್ಪತ್ರೆಗಾಗಿ ಹೋರಾಟ ಮಾಡಬೇಕು ಎಂಬಂತಹ ಗುರಿಗಳು ನಮ್ಮಲ್ಲಿ ಇರಬೇಕು ಎಂದರು. ಬಿಜೆಪಿಯ ಉದ್ದೇಶ ಎಂದರೇ ರಾಷ್ಟ್ರೀಯತೆ, ಹಿಂದೂ ರಾಷ್ಟ್ರದ ಕಲ್ಪನೆ, ಅಖಂಡ ಭಾರತ ಆಗಬೇಕು ಎಂಬುದು ಆಗಿದೆ. ಜಮ್ಮು ಕಾಶ್ಮೀರ ಬೇರೆ ಮಾಡಿದಾಗ ತಡೆಯಬೇಕು ಉದ್ದೇಶದಲ್ಲಿ ಜನಸಂಗ್ರಹ ಸ್ಥಾಪನೆಯಾಯಿತು. ರಾಷ್ಟ್ರ ಮೊದಲು ಎನ್ನುವ ಸಿದ್ಧಾಂತವನ್ನಿಟ್ಟುಕೊಂಡು ಬಿಜೆಪಿ ಸ್ಥಾಪನೆ ಮಾಡಲಾಗಿದೆ ಎಂದು ಉದ್ದೇಶ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಏಪ್ರಿಲ್ ೬ರ ೧೯೮೦ರಂದು ಭಾರತೀಯ ಜನತಾ ಪಾರ್ಟಿಯ ಸ್ಥಾಪನೆ ದಿನವಾಗಿದ್ದು, ಪ್ರತಿ ವರ್ಷ ಕಾರ್ಯಕರ್ತರು ತಮ್ಮ ಮನೆಗಳ ಮತ್ತು ಪಕ್ಷದ ಕಚೇರಿ ಮೇಲೆ ಹಾಗೂ ವಿವಿಧ ಸ್ಥಳಗಳಲ್ಲಿ ಧ್ವಜವನ್ನು ಹಾರಿಸುವ ಮೂಲಕ ಸ್ಥಾಪನ ದಿನ ಆಚರಿಸಲಾಗುತ್ತಿದೆ. ಈ ವರ್ಷ ಸ್ಥಾಪನಾ ದಿನದಂದು ಶ್ರೀ ರಾಮನವಮಿ ಸಹ ಬಂದಿರುವುದು ಹಿಂದೂ ಬಾಂಧವರಿಗೆ ವಿಶೇಷ ಉತ್ಸಹ ಕೊಟ್ಟಿದೆ. ಎಲ್ಲಾ ಬಿಜೆಪಿ ಕಚೇರಿಯಲ್ಲಿ ಹಿರಿಯ ಮುಖಂಡರಾದ ನವೀಲೆ ಅಣ್ಣಪ್ಪ ಅವರ ನೇತೃತ್ವದಲ್ಲಿ ನೆರವೇರಿಸಲಾಗಿದೆ ಎಂದರು.ಅಡ್ವಾಣಿ ಮತ್ತು ವಾಜಪೇಯಿ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಅತ್ಯುತ್ತಮವಾಗಿ ನಡೆದುಕೊಂಡು ಬಂದಿದೆ. ಪ್ರಧಾನಿ ಮೋದಿ ಅವರು ಉತ್ತಮ ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಕೇಂದ್ರದ ಯೋಜನೆಗಳು ಎಲ್ಲಾರ ಮನೆ ಮುಟ್ಟಿದೆ. ಇಡೀ ದೇಶದ ಜನತೆಗೆ ಆಧಾರ್ ಕಾರ್ಡ್ ಆಧಾರ ಸ್ಥಂಭವಾಗಿ ನಿಂತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಯೋಗೇಶ್ ಗೌಡ (ಮಂಜು), ಪಕ್ಷದ ಮುಖಂಡರಾದ ರಾಜಕುಮಾರ್, ರಾಜೀವ್, ಹರ್ಷಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.