ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಪಿಸಿಸಿಯು ಕೆಲ ನಾಯಕರ ಮೇಲೆ ತೆಗೆದುಕೊಂಡಿರುವ ಕ್ರಮ ಸರಿ ಇದೆ. ಜತೆಗೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಪಡೆಯುವಲ್ಲಿ ನಾವು ಎಡವಿದ್ದೆಲ್ಲಿ ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಪಿಸಿಸಿಯು ಕೆಲ ನಾಯಕರ ಮೇಲೆ ತೆಗೆದುಕೊಂಡಿರುವ ಕ್ರಮ ಸರಿ ಇದೆ. ಜತೆಗೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಪಡೆಯುವಲ್ಲಿ ನಾವು ಎಡವಿದ್ದೆಲ್ಲಿ ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ 56,000 ಅಲ್ಪಸಂಖ್ಯಾತ ಮತ ಚಲಾವಣೆಯಾಗಿದ್ದು, ಇದರಲ್ಲಿ 35,000 ಮತ ಕಾಂಗ್ರೆಸ್‌ ಅಭ್ಯರ್ಥಿಗೆ ಬಂದಿದೆ. ಆದರೂ ಅಲ್ಪಸಂಖ್ಯಾತರ ಹೆಚ್ಚು ಮತ ಪಡೆಯುವಲ್ಲಿ ನಾವು ಎಡವಿದ್ದೆಲ್ಲಿ? ಎಸ್‌ಡಿಪಿಐಗೆ 19,000 (18,975) ಮತ ಹೇಗೆ ಹೋಯಿತು? ಎಂಬುದನ್ನು ಪಕ್ಷ ತನಿಖೆ ನಡೆಸಲಿದೆ. ಬಳಿಕ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಅಲ್ಪಸಂಖ್ಯಾತ ನಾಯಕರ ಮೇಲೆ ಪಕ್ಷ ಕ್ರಮ ಕೈಗೊಂಡಿರುವುದನ್ನು ಸಿದ್ದರಾಮಯ್ಯ ಅವರು ಸಮರ್ಥಿಸಿದ್ದು, ‘ಪಕ್ಷ ತೆಗೆದುಕೊಂಡ ಕ್ರಮ ಸರಿ ಇದೆ’ ಎಂದರು. ಇನ್ನು ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ನಿಂದ ದೂರವಾಗಿಲ್ಲ. ಎಸ್‌ಡಿಪಿಐ ಅಭ್ಯರ್ಥಿ ಸುಮಾರು 19,000 ಮತ ಪಡೆದಿದ್ದು, ಒಟ್ಟಾರೆ ಅಲ್ಪಸಂಖ್ಯಾತ ಅಭ್ಯರ್ಥಿಗಳು 22,000 ಮತಗಳನ್ನು ಪಡೆದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 56,000 ಅಲ್ಪಸಂಖ್ಯಾತ ಮತ ಚಲಾವಣೆಯಾಗಿದ್ದು, 35 ಸಾವಿರ ಮತ ಕಾಂಗ್ರೆಸ್‌ಗೆ ಬಂದಿದೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಎಸ್‌ಡಿಪಿಐ ಇಷ್ಟು ಮತ ಪಡೆದಿರಲಿಲ್ಲವಲ್ಲ ಎಂಬ ಪ್ರಶ್ನೆಗೆ, ‘ಈ ಬಾರಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ಗೆ ಕಡಿಮೆಯಾಗಿವೆ. ನಾವು ಎಡವಿದ್ದೆಲ್ಲಿ? ಎಸ್‌ಡಿಪಿಐಗೆ ಹೇಗೆ ಮತ ಹೋಯಿತು ಎಂಬ ಬಗ್ಗೆ ಪಕ್ಷ ತನಿಖೆ ನಡೆಸಿ ವರದಿ ಪಡೆಯಲಿದೆ. ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.ಪಕ್ಷದ ಸೇನಾನಿಯಂತೆ ಕೆಲಸ ಮಾಡಿದ ಸಲೀಂ, ರಿಜ್ವಾನ್‌ಗೆ ಅಭಿನಂದನೆ:

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತಿಕ್ಕಾಟವನ್ನು ಸಮರ್ಥವಾಗಿ ನಿಭಾಯಿಸಿದ ಸಲೀಂ ಅಹಮದ್‌ ಹಾಗೂ ರಿಜ್ವಾನ್ ಅರ್ಷದ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು.

ಸಲೀಂ ಅಹಮದ್‌ ಮತ್ತು ತಂಡ ಪಕ್ಷದ ಸೇನಾನಿಗಳಂತೆ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಅವರು ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ. ಹೀಗಾಗಿ ಅವರು ಸಚಿವ ಸ್ಥಾನದ ಆಕಾಂಕ್ಷಿ ಆಗಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆಂದಾಯ್ತು:

ಬಿಜೆಪಿಯವರು ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದಿದ್ದರು. ಇದೀಗ ಎರಡೂ ಕ್ಷೇತ್ರವನ್ನು ಗೆದ್ದಿದ್ದು, ಬಿಜೆಪಿಯವರ ಪ್ರಕಾರ 2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಆಯ್ತಲ್ಲ. ಉಪಚುನಾವಣೆ ಫಲಿತಾಂಶ ನೋಡಿದರೆ ಜನ ನಮ್ಮ ಆಡಳಿತ, ಗ್ಯಾರಂಟಿ ಮೆಚ್ಚಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ತಮಿಳುನಾಡು ಫಲಿತಾಂಶ ಅಚ್ಚರಿ:

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ 15 ವರ್ಷದಿಂದ ಆಡಳಿತ ಮಾಡಿದ್ದು, ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿರಬಹುದು. ಜತೆಗೆ ಎಸ್ಐಆರ್ ಪರಿಷ್ಕರಣೆ ವೇಳೆ 91 ಲಕ್ಷ ಮತ ಡಿಲೀಟ್ ಆಗಿದೆ. ಇದೆಲ್ಲಾ ಅವರು ಸೋಲಲು ಕಾರಣವಾಗಿರಬಹುದು. ಆದರೆ, ತಮಿಳುನಾಡಿನಲ್ಲಿ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಬಂದಿದೆ. ಬದಲಾವಣೆ ಬಯಸಿ ಜನ ಅಲ್ಲಿ ಮತ ಚಲಾವಣೆ ಮಾಡಿರಬಹುದು. ಇಲ್ಲದಿದ್ದರೆ ಪಕ್ಷ ಸ್ಥಾಪಿಸಿದ ಅಲ್ಪಸಮಯದಲ್ಲೇ ಪಕ್ಷ ಅಧಿಕಾರಕ್ಕೆ ಬರುವಂಥ ಸಾಧನೆ ಮಾಡುವುದು ಸರಳ ವಿಷಯವಲ್ಲ ಎಂದು ಹೇಳಿದರು.

ಇನ್ನು ಕೇರಳದಲ್ಲಿ ಕಾಂಗ್ರೆಸ್‌ ಪಕ್ಷ ನಿರೀಕ್ಷೆಗಿಂತ ಉತ್ತಮ ಸ್ಥಾನ ಪಡೆದಿದೆ. ಕೇರಳ ಫಲಿತಾಂಶದ ಬಗ್ಗೆ ಖುಷಿಯಿದೆ ಎಂದು ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಕೇರಳ ಮುಖ್ಯಮಂತ್ರಿ ಆಯ್ಕೆ ಕುರಿತು ಪಕ್ಷದ ಹೈಕಮಾಂಡ್‌ ನಿರ್ಧಾರ ಮಾಡಲಿದೆ. ಈ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್, ಶಾಸಕರಾದ ರಿಜ್ವಾನ್‌ ಅರ್ಷದ್‌, ಶಿವಲಿಂಗೇಗೌಡ, ಗ್ಯಾರಂಟಿ ಪ್ರಾಧಿಕಾರದ ರಾಜ್ಯಾದ್ಯಕ್ಷ ಎಚ್.ಎಂ. ರೇವಣ್ಣ ಸೇರಿ ಹಲವರು ಹಾಜರಿದ್ದರು.

ರಾಜ್ಯದಲ್ಲಿ ನಿಷ್ಪಕ್ಷಪಾತ ಎಸ್‌ಐಆರ್‌ ನಡೆಯಬೇಕು:

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ಬಳಿಕ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸ್‌ಐಆರ್‌ಗೆ ಅವಕಾಶ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಂತ್ರಿ ಸಿದ್ದರಾಮಯ್ಯ, ‘ರಾಜ್ಯದಲ್ಲಿ ನಿಷ್ಪಕ್ಷಪಾತವಾಗಿ ಎಸ್ಐಆರ್ ನಡೆಯಬೇಕು. ಇಲ್ಲಿ ಅರ್ಹ ಮತದಾರರನ್ನು ಡಿಲೀಟ್‌ ಮಾಡಲು ನಾವು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ದೆಹಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗೆ, ‘ಹೈಕಮಾಂಡ್‌ ಕರೆದಾಗ ಹೋಗುತ್ತೇನೆ’ ಎಂದಷ್ಟೇ ಹೇಳಿದರು.