ಸಾರಾಂಶ
ತೀವ್ರ ಒತ್ತಡದ ಹಿನ್ನೆಲೆಯಲ್ಲಿ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವ ರಾಜ್ಯ ಸರ್ಕಾರವು ಕಾರ್ಯಕರ್ತರಿಗೆ ನಿಗಮ-ಮಂಡಳಿ ಹುದ್ದೆ ಹಂಚುವ ಪ್ರಕ್ರಿಯೆಗೆ ವೇಗ ನೀಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತೀವ್ರ ಒತ್ತಡದ ಹಿನ್ನೆಲೆಯಲ್ಲಿ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವ ರಾಜ್ಯ ಸರ್ಕಾರವು ಕಾರ್ಯಕರ್ತರಿಗೆ ನಿಗಮ-ಮಂಡಳಿ ಹುದ್ದೆ ಹಂಚುವ ಪ್ರಕ್ರಿಯೆಗೆ ವೇಗ ನೀಡುತ್ತಿಲ್ಲ.
ಕಳೆದ 8-10 ದಿನಗಳಿಂದ ನೇಮಕ ಪ್ರಕ್ರಿಯೆ ಬಗ್ಗೆ ಸುಳಿವೇ ಇಲ್ಲದಿರುವುದರಿಂದ ಆಕಾಂಕ್ಷಿ ಕಾರ್ಯಕರ್ತರಲ್ಲಿ ತೀವ್ರ ಆತಂಕ ಮನೆ ಮಾಡಿದೆ.ಶಾಸಕರಿಗೆ ಜ.26 ರಂದೇ ನಿಗಮ-ಮಂಡಳಿ ಹಂಚಿಕೆಯಾಗಿದೆ.
ಕಾರ್ಯಕರ್ತರ ಪೈಕಿ 34 ಮಂದಿ ಕಾರ್ಯಕರ್ತರ ಪಟ್ಟಿ ಸಿದ್ಧವಾಗಿದ್ದರೂ ನಿಗಮ-ಮಂಡಳಿ ಹಂಚಿಕೆಯಾಗಿಲ್ಲ. ಈ ಬಗ್ಗೆ ಒಂದೆರಡು ಸಭೆ ನಡೆಯಿತಾದರೂ ಕಳೆದ 8-10 ದಿನಗಳಿಂದ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಆತಂಕ ಏಕೆ?
ಸದ್ಯದಲ್ಲೇ ಜಂಟಿ ಅಧಿವೇಶನ, ಬಜೆಟ್ ಮಂಡನೆ ಆ ಬಳಿಕ ಮಾರ್ಚ್ ತಿಂಗಳಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ನೀತಿ ಸಂಹಿತೆ ಜಾರಿಯಾದರೆ ಲೋಕಸಭೆ ಚುನಾವಣೆ ಮುಗಿದು ಫಲಿತಾಂಶ ಬರುವವರೆಗೂ ನಿಗಮ-ಮಂಡಳಿ ನೇಮಕ ಮಾಡುವಂತಿಲ್ಲ.
ಹೀಗಾಗಿ ಪಟ್ಟಿಯಲ್ಲಿ ಹೆಸರಿರುವ ಕಾರ್ಯಕರ್ತರಿಗೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಅಧ್ಯಕ್ಷ ಸ್ಥಾನ ಸಿಗಲ್ಲವೇನೋ ಎಂಬ ಆತಂಕ ಉಂಟಾಗಿದೆ ಎಂದು ತಿಳಿದುಬಂದಿದೆ.
ನಿಗಮ-ಮಂಡಳಿ ನೇಮಕದ ವೇಳೆ ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ಅಧಿಕಾರ ನೀಡಬೇಕು. ಲೋಕಸಭೆ ಚುನಾವಣೆ ಬಳಿಕ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದರು.
ಹೀಗಾಗಿ ಶಾಸಕರ ಪಟ್ಟಿಯನ್ನು ಮಾತ್ರವೇ ಹೈಕಮಾಂಡ್‌ಗೆ ರವಾನಿಸಿದ್ದರು.ಆದರೆ ಹೈಕಮಾಂಡ್ ಕಾರ್ಯಕರ್ತರನ್ನೂ ಸೇರಿಸಿ ನಿಗಮ-ಮಂಡಳಿ ಅಧಿಕಾರ ಹಂಚಿಕೆ ಮಾಡಿ ಎಂದು ಸಲಹೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಕಾರ್ಯಕರ್ತರ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ನಿಂದಲೂ ಅನುಮೋದನೆ ಪಡೆದಿದೆ.
ಬೆನ್ನಲ್ಲೇ ಶಾಸಕರ ಪಟ್ಟಿಯನ್ನೂ ಪ್ರಕಟಿಸಿದೆ. ಆದರೆ ಕಾರ್ಯಕರ್ತರಿಗೆ ನಿಗಮ-ಮಂಡಳಿ ಹಂಚಿಕೆ ಪ್ರಕ್ರಿಯೆ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಆತಂಕ ಹೆಚ್ಚಾಗುತ್ತಿದೆ.