ಮನೆಗಳ ಮೇಲೆ ಹೊಲೆಯ ಸ್ಟಿಕ್ಕರ್ ಅಂಟಿಸಿ: ಮುನಿಸ್ವಾಮಿ

| Published : Apr 28 2025, 11:48 PM IST

ಮನೆಗಳ ಮೇಲೆ ಹೊಲೆಯ ಸ್ಟಿಕ್ಕರ್ ಅಂಟಿಸಿ: ಮುನಿಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮೇ ೫ ರಿಂದ ಆರಂಭವಾಗುವ ಒಳ ಮೀಸಲಾತಿಯ ಜನಸಂಖ್ಯಾ ಗಣತಿ ಕಾಲಕ್ಕೆ ನಮ್ಮ ಸಮುದಾಯದ ನಿಖರವಾದ ಜನಸಂಖ್ಯೆ ದಾಖಲು ಮಾಡುವ ಸಲುವಾಗಿ ಎಲ್ಲ ಬಲಗೈ ಜನಾಂಗದವರು ತಮ್ಮ ಮನೆಗಳ ಮೇಲೆ "ಹೊಲೆಯ " ಎಂಬ ಸ್ಟಿಕ್ಕರ್ ಅಂಟಿಸಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಕೋಲಾರಮೇ ೫ ರಿಂದ ಆರಂಭವಾಗುವ ಒಳ ಮೀಸಲಾತಿಯ ಜನಸಂಖ್ಯಾ ಗಣತಿ ಕಾಲಕ್ಕೆ ನಮ್ಮ ಸಮುದಾಯದ ನಿಖರವಾದ ಜನಸಂಖ್ಯೆ ದಾಖಲು ಮಾಡುವ ಸಲುವಾಗಿ ಎಲ್ಲ ಬಲಗೈ ಜನಾಂಗದವರು ತಮ್ಮ ಮನೆಗಳ ಮೇಲೆ "ಹೊಲೆಯ " ಎಂಬ ಸ್ಟಿಕ್ಕರ್ ಅಂಟಿಸಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಸಲಹೆ ನೀಡಿದರು.ನಗರದ ಹೊರವಲಯದ ವೆಂಕಟೇಗೌಡ ರೆರ್ಸಾಟ್‌ನಲ್ಲಿ ಬಲಗೈ ಜನಾಂಗದ ಮುಖಂಡರ ಸಮಾವೇಶದಲ್ಲಿ ಮಾತನಾಡಿ, ನಾವು ಹೊಲೆಯರು ಎಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ಬೇಡ, ಇದನ್ನೇ ಸ್ವತಃ ನನ್ನ ಮಗನಿಗೆ ತಿಳಿ ಹೇಳಿದ್ದೇನೆ ಎಂದರು.ಹಿಂದಿನ ಜನಗಣತಿ ವೇಳೆ ನಮ್ಮ ಜನಾಂಗದ ಜನಸಂಖ್ಯೆ ಕುರಿತು ನಮ್ಮಲ್ಲಿ ಸರಿಯಾದ ಅರಿವು ಇಲ್ಲದ ಕಾರಣ ವ್ಯತ್ಯಾಸವಾಗಿದೆ, ಈ ಬಾರಿ ನಡೆಯುವ ಜನಗಣತಿ ನಿರ್ಣಾಯಕವಾಗಿದ್ದು ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಇದೊಂದೇ ಸಾಧನವಾಗಿದೆ. ಹಾಗಾಗಿ ಜನತೆಯ ಜನಗಣತಿಗೆ ಬಂದ ವೇಳೆ ಯಾವುದೇ ಹಿಂಜರಿಕೆ ಇಲ್ಲದೆ ಹೊಲೆಯ ಎಂಬುದನ್ನು ಬರೆಸಬೇಕು ಎಂದು ಮುನಿಸ್ವಾಮಿ ತಿಳಿಸಿದರು.ಗಣತಿಗೆ ಬಂದ ವೇಳೆ ಮನೆಯಲ್ಲಿ ನಮ್ಮ ಹಿರಿಯರು ಇದ್ದಾಗ ಗೊಂದಲಕ್ಕೆ ತುತ್ತಾಗದ ರೀತಿಯಲ್ಲಿ ಎಲ್ಲ ಮನೆಗಳ ಮೇಲೆ ’ಹೊಲೆಯ’ ಎಂಬ ಸ್ಟಿಕ್ಕರ್ ಅಂಟಿಸುವಂತೆ ಅರಿವು ಮೂಡಿಸಿ ಸ್ಟಿಕ್ಕರ್ ಗಳನ್ನು ಸಿದ್ಧಪಡಿಸಿ ಹಂಚಬೇಕು ಎಂದು ಸಂಘಟನೆಗಳ ಮುಖಂಡರಿಗೆ ಮನವಿ ಮಾಡಿದರು.ಕೋಲಾರ ಜಿಲ್ಲೆ ಮತ್ತು ಕರ್ನಾಟಕದಲ್ಲಿ ನಮ್ಮ ಬಲಗೈ ಜನಾಂಗದ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ನಮ್ಮಲ್ಲಿ ಅರಿವು ಇಲ್ಲದ ಕಾರಣ ನಿಖರ ಸಂಖ್ಯೆ ದೊರಕಲು ಸಾಧ್ಯವಾಗುತ್ತಿಲ್ಲ. ನಮ್ಮವರ ಜನಸಂಖ್ಯೆಯನ್ನು ಸೇರಿಸಿ ಬೇರೆಯವರು ತಮ್ಮದೇ ಹೆಚ್ಚು ಜನಸಂಖ್ಯೆ ಇದೆ ಎಂದು ಹೇಳಿಕೊಳ್ಳಲು ಅವಕಾಶವಾಗುತ್ತಿದೆ. ಇದನ್ನು ಈ ಬಾರಿ ಗಣತಿ ವೇಳೆ ಸರಿಪಡಿಸಲೇಬೇಕು ಎಂದು ಮುನಿಸ್ವಾಮಿ ವಿವರಿಸಿದರು.ಈ ವಿಚಾರದಲ್ಲಿ ಬಲಗೈ ಜನಾಂಗದ ಮುಖಂಡರು ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಭಿನ್ನಾಭಿಪ್ರಾಯ ಮರೆತು ಒಂದಾಗಲೇಬೇಕು. ಇಲ್ಲವಾದರೆ ನಮಗೆ ಉಳಿಗಾಲ ಇರುವುದಿಲ್ಲ ಎಂದು ಎಚ್ಚರಿಸಿದರು.ಸಮಾವೇಶದಲ್ಲಿ ಮಾಜಿ ಶಾಸಕರಾದ ವೆಂಕಟಮುನಿಯಪ್ಪ, ವೈ.ಸಂಪಂಗಿ, ಬಲಗೈ ಜನಾಂಗದ ಮುಖಂಡರಾದ ಎಂ. ನಾರಾಯಣ್, ಎಸ್.ಬಿ.ಮುನಿವೆಂಕಟಪ್ಪ, ಡಾ.ಚಂದ್ರಕಲಾ, ಎಂ.ಚಂದ್ರಶೇಖರ್, ಟಿ.ವಿಜಯಕುಮಾರ್, ಹೂವಳ್ಳಿ ಪ್ರಕಾಶ್, ವಕ್ಕಲೇರಿ ರಾಜಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಹೂವರಸನಹಳ್ಳಿ ರಾಜಪ್ಪ, ಯಲುವಗುಳಿ ಸತೀಶ್, ಮುನಿರಾಜು, ಅಪ್ಪಿನಾರಾಯಣಸ್ವಾಮಿ ಇದ್ದರು.

ಸುಧಾಕರ್ ಅವರೇ ನಂಬಲಿಲ್ಲ!ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಮ್ಮ ಸಮುದಾಯದ ಜನರು ಮತ್ತು ಸಂಬಂಧಿಕರು ಗಣನೀಯ ಪ್ರಮಾಣದಲ್ಲಿ ಇದ್ದಾರೆ ಎಂದು ತಿಳಿಸಿದರೆ ಅವರು ನಂಬಲೇ ಇಲ್ಲ. ಆದಿ ದ್ರಾವಿಡ ಜನಾಂಗದವರೇ ಹೆಚ್ಚು ಇದ್ದಾರೆ ಎಂದು ಪ್ರತಿಪಾದಿಸಿದರು ಎಂದು ಮಾಜಿ ಸಂಸದ ಮುನಿಸ್ವಾಮಿ ವಿವರಿಸಿದರು. ಜಿಲ್ಲೆಯ ಎಲ್ಲಾ ಮುಖಂಡರನ್ನು ಒಳಗೊಂಡ ಸಮಿತಿ ರಚನೆ ಮಾಡಿ ಹೋಬಳಿವಾರು ಪ್ರವಾಸ ಮಾಡಿ ಸ್ಟಿಕ್ಕರ್ ಗಳನ್ನು ಅಂಟಿಸಿ ಅರಿವು ಮೂಡಿಸುವ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.ನಮ್ಮ ಹಲವು ಮುಖಂಡರು ಹತ್ತಾರು ಸಂಘಟನೆಗಳನ್ನು ಮಾಡಿಕೊಂಡಿದ್ದಾರೆ. ಆ ಸಂಘಟನೆಗಳಿಗೆ ಅವರು ರಾಜ್ಯಾಧ್ಯಕ್ಷರಷ್ಟೇ ಅಲ್ಲ, ಬೇಕಾದರೆ ರಾಷ್ಟ್ರೀಯ ಅಧ್ಯಕ್ಷರಾಗಲಿ, ನಮ್ಮ ಅಭ್ಯಂತರ ಇಲ್ಲ. ಆದರೆ ಜಾತಿ ಜನಗಣತಿ ವಿಚಾರದಲ್ಲಿ ಎಲ್ಲ ರೀತಿಯ ಪ್ರತಿಷ್ಠೆ ಬಿಟ್ಟು ಒಂದಾಗಬೇಕು. ರಾಜಕಾರಣಿಗಳಾಗಿದ್ದರೆ ಚುನಾವಣೆ ವೇಳೆಗೆ ಮಾತ್ರ ಭಿನ್ನಾಭಿಪ್ರಾಯ ಇಟ್ಟುಕೊಳ್ಳಲಿ.

- ಎಸ್.ಮುನಿಸ್ವಾಮಿ, ಮಾಜಿ ಸಂಸದ