ಸಾರಾಂಶ
ಮೋಹನ್ ರಾಜ್
ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳಿಂದ ಪ್ರತಿನಿತ್ಯ ಜನ ಸಂಕಷ್ಟ ಎದುರಿಸುತ್ತಿದ್ದು, ವಾಹನಗಳ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಅಧಿಕಾರಿಗಳು ಗುಂಡಿ ಮುಚ್ಚುವ ನೆಪದಲ್ಲಿ ಬೇಕಾಬಿಟ್ಟಿ ತೇಪೆ ಹಚ್ಚುವ ಬದಲು ಹಾಳಾಗಿರುವ ರಸ್ತೆಗಳನ್ನು ಸಂಪೂರ್ಣ ಅಭಿವೃದ್ದಿ ಪಡಿಸಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ. ಬೇಕಾಬಿಟ್ಟಿ ಕಳಪೆ ಗುಣಮಟ್ಟದ ತೇಪೆ ಹಚ್ಚಿ ಹೋಗುವುದರಿಂದ ಮುಂದಿನ ಮಳೆಗಾಲ ಬರುವಷ್ಟರಲ್ಲಿ ಆ ಜಾಗದಲ್ಲಿ ತೇಪೆ ಹಾಕಿದ್ದಕ್ಕೆ ಕುರುಹೂ ಇರುವುದಿಲ್ಲ. ಅಲ್ಲಿ ಬೃಹತ್ ಹೊಂಡಗಳು ಮತ್ತೆ ತಲೆ ಎತ್ತುತ್ತವೆ. ಇದರಿಂದ ರಸ್ತೆ ಸಂಚಾರ ಮತ್ತಷ್ಟು ದುಸ್ತರ ಆಗುವುದರಿಂದ ಸರಕಾರ ಜನಪ್ರತಿನಿಧಿಗಳು ಗಮನ ಹರಿಸಿ, ದೊಡ್ಡ ಪ್ರಮಾಣದಲ್ಲಿ ಹಾಳಾಗಿರುವ ರಸ್ತೆಗಳನ್ನು ಸಂಪೂರ್ಣ ತೆಗೆದು ಮರು ಡಾಂಬರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕೆಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.ಸಿದ್ದಾಪುರ - ಮರಗೋಡು ಮಾರ್ಗದ ಸ್ಥಿತಿ ಶೋಚನೀಯವಾಗಿದೆ. ನೆಲ್ಯ ಹುದಿಕೇರಿಯಿಂದ ಪ್ರಾರಂಭವಾಗುವ ಗುಂಡಿಮಯ ರಸ್ತೆ ಮುಂದೆ ಹೋಸ್ಕೆರಿವರೆಗೂ ಮುಂದುವರೆದಿದ್ದು, ಮರಗೋಡು ಮಡಿಕೇರಿ ತೆರಳುವ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.
ನೆಲ್ಯಹುದಿಕೇರಿ-ಅತ್ತಿಮಂಗಲ ಮಾರ್ಗದ ಅರೆಕಾಡು, ಮರಗೋಡು ಮೂಲಕ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ 15 ವರ್ಷಗಳಿಂದ ಡಾಂಬರು ಕಾಣದೆ ಹೊಂಡ-ಗುಂಡಿಗಳಿಂದ ಕೂಡಿದೆ. ಈ ರಸ್ತೆ ಮಧ್ಯೆಯೇ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ನಿತ್ಯ ಸಂಚರಿಸಬೇಕಾಗಿದೆ. ವಾಹನ ಸವಾರರು ಪ್ರಯಾಣಕ್ಕೆ ಪ್ರಯಾಸ ಪಡಬೇಕಾಗಿದೆ. ಲೋಕೋಪಯೋಗಿ ಇಲಾಖೆ ಇತ್ತೀಚೆಗೆ ರಸ್ತೆಯ ರಿಪೇರಿ ಕಾಮಗಾರಿ ಶುರು ಮಾಡಿದ್ದು, ಅದೂ ಕೂಡ ಗುಂಡಿ ಮುಚ್ಚುವ ನೆಪದಲ್ಲಿ ಗುಂಡಿಗಳಿಗೆ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಗುಂಡಿಗಳು ಉದ್ಭವವಾಗಲಿವೆ ಎಂದು ಅಸಮಾಧಾನನ ಹೊರಹಾಕಿರುವ ಸ್ಥಳೀಯರು, ಸಂಪೂರ್ಣ ರಸ್ತೆ ಮರುಡಾಂಬರೀಕರಣಕ್ಕೆ ಆಗ್ರಹಿಸಿದ್ದಾರೆ.ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟು, ಹೊಂಡ ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ವಾಹನ ಸಂಚಾರವಿರಲಿ, ಪಾದಾಚಾರಿಗಳ ಓಡಾಟವೂ ಅಸಾಧ್ಯ. ಬೈಕ್ ಸವಾರರು ಬಿದ್ದು ಗಾಯಗೊಳ್ಳುವುದು ಇಲ್ಲಿ ಸಾಮಾನ್ಯವಾಗಿದೆ. ಹೀಗಿದ್ದರೂ ಇವೆಲ್ಲವನ್ನೂ ಅರಿತಿರುವ ಇಲಾಖೆ ಹೆಸರಿಗೆ ಮಾತ್ರ ತೇಪೆ ಹಚ್ಚಿ ಜನರ ಕಣ್ಣಿಗೆ ನೀರೆರಚುವ ಕಾರ್ಯಕ್ಕೆ ಮುಂದಾಗಿದೆ. ಇದನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸುತ್ತಿದ್ದೇವೆ. ರಸ್ತೆಗೆ ಮರು ಡಾಂಬರೀಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕಾಗಿದೆ. ತಪ್ಪಿದಲ್ಲಿ ಸಾರ್ವಜನಿಕರ ಜತೆ ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲು ಸ್ಥಳೀಯರು ಚಿಂತಿಸಿದ್ದೇವೆ. ಸುಕುಮಾರ್, ಅರೇಕಾಡು ನಿವಾಸಿ.
ಪ್ರತಿದಿನ ಇದೆ ಮಾರ್ಗದಲ್ಲಿ ನೂರಾರು ವಾಹನ ಓಡಾಡುತ್ತವೆ. ಅಧಿಕಾರಿಗಳು ಜನಪ್ರತಿನಿಧಿಗಳು ಸಹ ಓಡಾಡ್ತಾರೆ. ಹೀಗಿದ್ದರೂ ರಸ್ತೆ ಅಭಿವೃದ್ದಿಗೆ ಮುಂದಾಗದಿರುವುದು ವಿಷಾದನೀಯ.. ಕ್ಷೇತ್ರದಿಂದ ಆಯ್ಕೆಯಾಗಿರುವ ನೂತನ ಶಾಸಕರು ಇತ್ತ ಗಮನ ಹರಿಸಿ, ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರ ಹಣ ಪೋಲಾಗದಂತೆ ಜನರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು.ನಂದ ಕುಮಾರ್ (ಕುಂಜ), ಆಟೋಚಾಲಕ ಮತ್ತು ಗ್ರಾ. ಪಂ ಸದಸ್ಯ ಮರಗೋಡು.ಕನ್ನಡಪ್ರಭ ವರದಿ ಪರಿಣಾಮ : ಸಿದ್ದಾಪುರ-ಕುಶಾಲನಗರ ರಸ್ತೆ ದುರಸ್ತಿ ಆರಂಭಇತ್ತೀಚೆಗಷ್ಟೇ ಸಿದ್ದಾಪುರ-ಕುಶಾಲನಗರ ನಡುವಿನ ರಸ್ತೆ ತೀರಾ ಹದಗೆಟ್ಟಿರುವ ಬಗ್ಗೆ ‘ಕನ್ನಡಪ್ರಭ’ದಲ್ಲಿ ವರದಿ ಪ್ರಕಟಿಸಲಾಗಿತ್ತು. ಇದೀಗ ಆ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ಬೃಹತ್ ಹೊಂಡಗಳಿದ್ದ ಕಡೆ ತೇಪೆ ಹಚ್ಚಿ, ತೀರಾ ಹದಗೆಟ್ಟಿರುವ ಕಡೆ ಡಾಂಬರು ಕಿತ್ತು ಮರು ಡಾಂಬರೀಕರಣ ಕಾರ್ಯ ಕೈಗೊಳ್ಳಲಾಗಿದೆ.
ರಸ್ತೆ ಕಾಮಗಾರಿ ನಿಧಾನವಾಗಿ ಸಾಗುತ್ತಿದ್ದು, ಅಲ್ಲಲ್ಲಿ ಚದುರಿ ಬಿದ್ದಿರುವ ಕಲ್ಲುಗಳು, ಧೂಳಿನಿಂದ ಆವೃತ್ತವಾಗಿರುವ ರಸ್ತೆಯಲ್ಲೇ ಜನ ಪ್ರಯಾಣಿಸುತ್ತಿದ್ದಾರೆ.