ಸಾರಾಂಶ
ನಾರಾಯಣ ಹೆಗಡೆ
ಹಾವೇರಿ : ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರನ್ನು ಮಣಿಸಿ ಕಾಂಗ್ರೆಸ್‌ನ ಯಾಸೀರ್ ಅಹ್ಮದ್ ಖಾನ್ ಪಠಾಣ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸತತ ನಾಲ್ಕು ಬಾರಿ ತಮ್ಮನ್ನು ಗೆಲ್ಲಿಸಿದ್ದ ಶಿಗ್ಗಾಂವಿ ಕ್ಷೇತ್ರದಲ್ಲೇ ಪುತ್ರನ ರಾಜಕೀಯ ಭವಿಷ್ಯ ರೂಪಿಸುವ ಬೊಮ್ಮಾಯಿ ಕನಸು ಭಗ್ನವಾದಂತಾಗಿದೆ.
ಅಹಿಂದ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಬಸವರಾಜ ಬೊಮ್ಮಾಯಿ ೨೦೦೮ರಲ್ಲಿ ಮೊದಲ ಬಾರಿಗೆ ಇಲ್ಲಿ ಕಮಲ ಅರಳಿಸಿದ್ದರು. ಅಲ್ಲಿಂದ ಸತತ ನಾಲ್ಕು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಶಿಗ್ಗಾಂವಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ರ ಭರತ ಬೊಮ್ಮಾಯಿ ಅವರನ್ನು ಅವರು ಕಣಕ್ಕಿಳಿಸಿದ್ದರು. ಸಾಕಷ್ಟು ಪ್ರಚಾರ, ಪ್ರಯತ್ನಗಳ ಹೊರತಾಗಿಯೂ ಕ್ಷೇತ್ರದಲ್ಲಿ ಪುತ್ರನ ಪಟ್ಟಾಭಿಷೇಕಕ್ಕೆ ನಡೆಸಿದ ಪ್ರಯತ್ನ ಫಲಕೊಡಲಿಲ್ಲ. ಹಲವು ಆರೋಪಗಳ ಮಧ್ಯೆಯೂ ಕ್ಷೇತ್ರದ ಮತದಾರ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ್ದರಿಂದ ಕ್ಷೇತ್ರದಲ್ಲಿ ಮತ್ತೆ ಕೈ ಬಾವುಟ ರಾರಾಜಿಸುವಂತಾಗಿದೆ.
ಕಾಂಗ್ರೆಸ್ ಸಂಘಟಿತ ಹೋರಾಟ: ಕಾಂಗ್ರೆಸ್ ಟಿಕೆಟ್ ಹಂಚಿಕೆ ವೇಳೆ ಅಸಮಾಧಾನಗೊಂಡು ಬಂಡಾಯದ ಬಾವುಟ ಹಾರಿಸಿದ್ದ ಅಜ್ಜಂಪೀರ್ ಖಾದ್ರಿ ಮನವೊಲಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ನಾಯಕರು ನಂತರ ಅವರನ್ನು ವಿಶ್ವಾಸಕ್ಕೆ ಪಡೆದೇ ಪ್ರಚಾರ ನಡೆಸಿದರು. ಅಲ್ಲದೆ, ಸಚಿವರಾದ ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ, ಈಶ್ವರ ಖಂಡ್ರೆ, ಜಮೀರ್ ಅಹಮದ್, ಸಲೀಂ ಅಹ್ಮದ್ ಸೇರಿ ಕಾಂಗ್ರೆಸ್ ಹಲವು ನಾಯಕರು ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಆಯಾ ಸಮುದಾಯದ ಮತ ಕ್ರೋಢೀಕರಣಕ್ಕೆ ಶಕ್ತಿ ಮೀರಿ ಪ್ರಯತ್ನ ಹಾಕಿದರು. ಸತೀಶ್ ಅವರಂತೂ ಒಂದೂವರೆ ತಿಂಗಳ ಕಾಲ ಶಿಗ್ಗಾಂವಿಯಲ್ಲೇ ಉಳಿದುಕೊಂಡು ಜಾತಿವಾರು ತಂತ್ರಗಾರಿಕೆ ರೂಪಿಸಿದರು.
ಇದರ ಜತೆಗೆ ಟಿಕೆಟ್ ಆಕಾಂಕ್ಷಿಗಳೆಲ್ಲ ಭಿನ್ನಮತ ಮರೆತು ಪಕ್ಷದ ಪರ ಒಂದಾಗಿ ಕೆಲಸ ಮಾಡಿದರು. ಸಣ್ಣಪುಟ್ಟ ಸಮುದಾಯದ ಮತಗಳೂ ಕೈತಪ್ಪದಂತೆ ನೋಡಿಕೊಂಡರು. ಚುನಾವಣೆಯ ದಿನ ಸಮೀಪಿಸುವ ವೇಳೆ ಸಿಎಂ ಸಿದ್ದರಾಮಯ್ಯ ಬಿರುಸಿನ ಪ್ರಚಾರ ನಡೆಸಿ ಕುರುಬ ಮತ್ತು ಹಿಂದುಳಿದ ವರ್ಗಗಳ ಮತಗಳ ಕ್ರೋಢೀಕರಣಕ್ಕೆ ಕಾರಣರಾದರು. ಇದರಿಂದ ಒಟ್ಟಾರೆ ಪ್ರತಿ ಚುನಾವಣೆಯಲ್ಲಿ ಬೊಮ್ಮಾಯಿ ಪರವಾಗಿರುತ್ತಿದ್ದ ಕುರುಬ, ಪಂಚಮಸಾಲಿ, ದಲಿತರ ಮತಗಳನ್ನು ಸೆಳೆವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾದರು. ಅಲ್ಪಸಂಖ್ಯಾತರ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್ ಪಾಲಾಗಿದ್ದರಿಂದ ನಿರೀಕ್ಷೆಗೂ ಮೀರಿ ಪಠಾಣ್ ಗೆಲುವು ಸಾಧಿಸಿದರು.-ಬಾಕ್ಸ್-
ಹಾವೇರಿ ಜಿಲ್ಲೆಯೀಗ ಪೂರ್ಣ ಕೈ ವಶಜಿಲ್ಲೆಯಲ್ಲಿರುವ ೬ ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಚುನಾವಣೆಯಲ್ಲಿ ೫ ಕಡೆ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಶಿಗ್ಗಾಂವಿಯಲ್ಲಿ ಬಿಜೆಪಿಯ ಬೊಮ್ಮಾಯಿ ಗೆದ್ದಿದ್ದರು. ಆದರೀಗ ಜಿಲ್ಲೆಯ ಎಲ್ಲ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದೆ.
ಫಲಿಸದ ಬೊಮ್ಮಾಯಿ ತಂತ್ರ: ಸತತ ನಾಲ್ಕು ಚುನಾನಣೆಗಳಲ್ಲಿ ಗೆದ್ದಿದ್ದ ಬಸವರಾಜ ಬೊಮ್ಮಾಯಿ ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದರು. ಆದರೆ ಈ ಸಲ ಅವರ ಚುನಾವಣಾ ತಂತ್ರ ಪುತ್ರನನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಪ್ಪನನ್ನು ಬೆಂಬಲಿಸಿದ್ದ ಮತದಾರರು ಪುತ್ರನಿಗೆ ಜೈ ಎನ್ನಲಿಲ್ಲ. ಬೊಮ್ಮಾಯಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದರೂ ಅವು ಅವರ ಕೈಹಿಡಿಯಲಿಲ್ಲ. ಚುನಾವಣೆ ಹೊತ್ತಿನಲ್ಲಿ ಎದ್ದಿದ್ದ ವಕ್ಫ್ ವಿವಾದ, ಹಿಂದುತ್ವದ ಅಸ್ತ್ರ ಕ್ಷೇತ್ರದಲ್ಲಿ ಅಷ್ಟಾಗಿ ಕೆಲಸ ಮಾಡಿದಂತಿಲ್ಲ. ಜತೆಗೆ, ಕುಟುಂಬ ರಾಜಕಾರಣವನ್ನು ಕ್ಷೇತ್ರದ ಜನ ಒಪ್ಪಿದಂತಿಲ್ಲ.
ಸಾಮಾನ್ಯ ಕುಟುಂಬದಿಂದ ಬಂದ, ಅಲ್ಪಸಂಖ್ಯಾತ ಸಮುದಾಯದ ನನ್ನನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಹಾಗೂ ಶಿಗ್ಗಾಂವಿ ಕ್ಷೇತ್ರದ ಜನ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ನನ್ನ ಗೆಲುವಿಗೆ ಕಾರಣರಾದ ಕಾಂಗ್ರೆಸ್ ಮುಖಂಡರು ಹಾಗೂ ಎಲ್ಲ ಸಮಾಜದ ಗುರು ಹಿರಿಯರಿಗೆ, ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಶಪಥ ಮಾಡಿದ್ದ ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಸತೀಶ್ ಜಾರಕಿಹೊಳಿ, ಮಯೂರ ಜೈಕುಮಾರ್ ನಾಲ್ಕು ತಿಂಗಳಿಂದ ನಿರಂತರ ಕೆಲಸ ಮಾಡಿ ಗೆಲುವಿಗೆ ಕಾರಣರಾಗಿದ್ದಾರೆ.
- ಯಾಸೀರ್‌ಖಾನ್ ಪಠಾಣ್, ವಿಜೇತ ಕಾಂಗ್ರೆಸ್ ಅಭ್ಯರ್ಥಿ
ಶಿಗ್ಗಾಂವಿ-ಸವಣೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿ ಗೆಲುವು ಸಾಧಿಸಿದೆ. ಪಕ್ಷದ ಸೋಲಿನ ಕಾರಣಗಳ ಬಗ್ಗೆ ಬೂತ್ ಮಟ್ಟದಲ್ಲಿ ಚರ್ಚಿಸಲಾಗುವುದು. ನಾನು ಚುನಾವಣೆಯಲ್ಲಿ ಸೋತಿದ್ದೇನೆ ಅಷ್ಟೆ, ಆದರೆ ಈ ಕ್ಷೇತ್ರದ ಅಭಿವೃದ್ಧಿಗೆ, ಜನರ ಪರವಾಗಿ ಸದಾ ದುಡಿಯುತ್ತೇನೆ. ಮುಂದಿನ ದಿನಗಳಲ್ಲಿ ಈ ಸೋಲಿನ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ನನಗೆ ಮತ ನೀಡಿದ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ.
- ಭರತ್ ಬೊಮ್ಮಾಯಿ, ಪರಾಜಿತ ಬಿಜೆಪಿ ಅಭ್ಯರ್ಥಿ