ಸಾರಾಂಶ
ಹಾವೇರಿ: ಖಬರಸ್ತಾನದಲ್ಲಿ ಅನಧಿಕೃತವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಖಂಡಿಸಿ ಸೋಮವಾರ ಹಾವೇರಿ ಬಂದ್‌ಗೆ ಕರೆ ನೀಡಿ, ಪ್ರತಿಭಟನೆಗೆ ಮುಂದಾಗಿದ್ದ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಹಾವೇರಿ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದ ಪುರಸಿದ್ದೇಶ್ವರ ದೇವಸ್ಥಾನದ ಬಳಿ ಹಾಗೂ ಬಸ್ ನಿಲ್ದಾಣದ ಬಳಿ ಜನರನ್ನು ಸಂಘಟಿಸಲು ಸೇರಿದ್ದ ೨೦ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಆನಂತರ ಸುಮಾರು ೧೧.೩೦ರ ಹೊತ್ತಿಗೆ ಮತ್ತೊಂದು ತಂಡ ನಗರದ ಪುರಸಿದ್ದೇಶ್ವರ ದೇವಸ್ಥಾನದ ಬಳಿ ಜಮಾವಣೆಗೊಂಡು ಪ್ರತಿಭಟನೆಗೆ ಮುಂದಾಯಿತು. ಆಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ಪ್ರತಿಭಟನೆಗೆ ಅವಕಾಶವಿಲ್ಲ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ತಿಳಿಹೇಳಿದರು. ಬಳಿಕ ಅವರನ್ನು ವಶಕ್ಕೆ ಪಡೆದರು.ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ, ಮುಸ್ಲಿಂ ತುಷ್ಟೀಕರಣದ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.ನಗರದ ಅಂಜುಮನ್ ಕಮಿಟಿಗೆ ಸೇರಿದ ಸ್ಮಶಾನ ಭೂಮಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಕಾನೂನು ಪ್ರಕಾರ ಎಲ್ಲಿಯೂ ಅವಕಾಶ ಇಲ್ಲ. ಇದನ್ನು ಹಲವು ಪ್ರಕರಣಗಳಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್ ಪುನರುಚ್ಚರಿಸಿದೆ. ಅಂಜುಮನ್ ಸಂಸ್ಥೆಯವರು ಬೇರೆ ಎಲ್ಲೋ ವಾಣಿಜ್ಯ ಮಳಿಗೆ ನಿರ್ಮಿಸುವುದಾಗಿ ೨೦೧೬ರಲ್ಲಿ ನಗರಸಭೆಯಿಂದ ಪರವಾನಗಿ ಪಡೆದು, ಈಗ ಸ್ಮಶಾನ ಭೂಮಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ. ಇಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸದಂತೆ ನಗರಸಭೆ ತಡೆಯಾಜ್ಞೆ ನೀಡಿದರೂ ಕಾಮಗಾರಿ ನಡೆಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಟ್ಟಡ ನಿರ್ಮಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.ರಾಣಿಬೆನ್ನೂರು, ಹಾನಗಲ್ಲನ ಸ್ಮಶಾನ ಭೂಮಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ವಾಣಿಜ್ಯ ಮಳಿಗೆ ನಿರ್ಮಿಸದಂತೆ ನಗರಸಭೆ ನೋಟಿಸ್ ನೀಡಿದರೂ ಕಾಮಗಾರಿ ನಡೆಸುತ್ತಿದ್ದಾರೆ ಎಂದರೆ ಇವರು ಕಾನೂನಿಗೆ ಎಷ್ಟರ ಮಟ್ಟಿಗೆ ಗೌರವ ಕೊಡುತ್ತಾರೆ ಎಂಬುದು ಗೊತ್ತಾಗುತ್ತದೆ. ಆಡಳಿತ ವ್ಯವಸ್ಥೆಯೂ ಇವರ ಬೆನ್ನಿಗೆ ನಿಂತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಟ್ಟು ೭೦ಕ್ಕೂ ಹೆಚ್ಚು ನಾಯಕರನ್ನು ವಶಕ್ಕೆ ಪಡೆದ ಪೊಲೀಸರು ೫ ವಾಹನಗಳಲ್ಲಿ ಅವರನ್ನು ಕೆರೆಮತ್ತಿಹಳ್ಳಿಯ ಕಾರಾಗೃಹದತ್ತ ಕರೆದೊಯ್ದರು.ಪ್ರತಿಭಟನೆಯಲ್ಲಿ ಪ್ರಮುಖರಾದ ಮಾಜಿ ಶಾಸಕ ಶಿವರಾಜ ಸಜ್ಜನರ, ಸಿದ್ದರಾಜು ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ವಿಜಯಕುಮಾರ ಚಿನ್ನಿಕಟ್ಟಿ, ಸಂತೋಷ ಆಲದಕಟ್ಟಿ, ಕಿರಣ್ ಕೊಳ್ಳಿ, ಶಂಭಣ್ಣ ಜತ್ತಿ, ಜಗದೀಶ್ ಬಶೇಗಣ್ಣಿ, ಪ್ರಭು ಹಿಟ್ನಳ್ಳಿ, ನಿರಂಜನ್ ಹೇರೂರು, ಮುತ್ತಣ್ಣ ಮುಷ್ಟಿ, ಕೆ.ಸಿ. ಪಾವಲಿ, ಬಸವರಾಜ ಹಾಲಪ್ಪನವರ, ಪ್ರವೀಣ್ ಶೆಟ್ಟರ, ಶಿವಯೋಗಿ ಕೊಳ್ಳಿ, ಚೆನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ್ ಇತರರು ಇದ್ದರು.ಹಾವೇರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ಹಿಂದೂಪರ ಸಂಘಟನೆಗಳಿಂದ ಕರೆ ನೀಡಿದ್ದ ಹಾವೇರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಹುಕ್ಕೇರಿಮಠ, ಎಂ.ಜಿ. ರಸ್ತೆ, ಸುಭಾಸ ವೃತ್ತ ಸೇರಿದಂತೆ ಪ್ರಮುಖ ಭಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬೆಂಬಲಿಸಿದ್ದು ಕಂಡು ಬಂದಿತು. ಪೊಲೀಸರು ಬೆಳಗ್ಗೆಯೇ ಮುನ್ನೆಚ್ಚರಿಕೆ ವಹಿಸಿದ್ದರು. ಪ್ರಮೋದ ಮುತಾಲಿಕ್ ಅವರಿಗೆ ಹಾವೇರಿಗೆ ಬರುವುದನ್ನು ನಿರ್ಬಂಧಿಸಲಾಗಿತ್ತು.