ಪಾಟೀಲ ಪುಟ್ಟಪ್ಪನವರ ಕಾರ್ಯಗಳು ಕನ್ನಡಿಗರಿಗೆ ದಾರಿದೀಪ: ಶ್ರೀನಿವಾಸ ವಾಡಪ್ಪಿ

| Published : Jan 16 2024, 01:48 AM IST

ಸಾರಾಂಶ

ವಿದ್ಯಾರ್ಥಿ ದೆಸೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಡಾ. ಪಾಟೀಲ ಪುಟ್ಟಪ್ಪ, ಗಾಂಧೀಜಿ ಅವರಿಂದ ಪ್ರೇರೇಪಿತರಾಗಿ ನಿಜಲಿಂಗಪ್ಪನವರ ಒಡನಾಡಿಯಾಗಿ ಸಾಕಷ್ಠು ಕನ್ನಡದ ಕೆಲಸ ಮಾಡಿದ್ದಾರೆ ಎಂದು ಸಾಹಿತಿ ಶ್ರೀನಿವಾಸ ವಾಡಪ್ಪಿ ಹೇಳಿದರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 52 ವರ್ಷಗಳಿಗಿಂತ ಹೆಚ್ಚುಕಾಲ ಸಂಘವನ್ನು ಬೆಳೆಸಿರುವ ಜೊತೆಗೆ ಅಖಂಡ ಕರ್ನಾಟಕದ ಕನಸನ್ನು ಕಂಡು ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಪಾಟೀಲ ಪುಟ್ಟಪ್ಪನವರು ಇವತ್ತು ನಮ್ಮೊಂದಿಗೆ ಇಲ್ಲವಾದರೂ ಅವರು ಮಾಡಿದ ಕೆಲಸಗಳು ನಮಗೆ ದಾರಿದೀಪವಾಗಿವೆ ಎಂದು ಸಾಹಿತಿ ಶ್ರೀನಿವಾಸ ವಾಡಪ್ಪಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಿದ್ದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ 104ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಡಾ. ಪಾಟೀಲ ಪುಟ್ಟಪ್ಪ, ಗಾಂಧೀಜಿ ಅವರಿಂದ ಪ್ರೇರೇಪಿತರಾಗಿ ನಿಜಲಿಂಗಪ್ಪನವರ ಒಡನಾಡಿಯಾಗಿ ಸಾಕಷ್ಠು ಕನ್ನಡದ ಕೆಲಸ ಮಾಡಿದ್ದಾರೆ. ಕನ್ನಡ ಕಾವಲು ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಇಡೀ ಕರ್ನಾಟಕವನ್ನು ಸುತ್ತಿದ್ದಾರೆ. ಕನ್ನಡ, ಕರ್ನಾಟಕ ಏನು ಮಾಡಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಸೂಚಿಸಿದ ವ್ಯಕ್ತಿ ಅವರು. ಇಂಥವರ ಜೊತೆಗೆ ನಾವು ನೀವೆಲ್ಲ ಕೆಲಸ ಮಾಡಿದ್ದೇವೆ ಎಂಬುದು ಹೆಮ್ಮೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಪ್ರಸ್ತುತ ಪಾಪು ಅವರು ಎಷ್ಟು ಪ್ರಸ್ತುತ ಎಂಬುದು ಅವರು ಇಲ್ಲದ ಈ ದಿನಗಳಲ್ಲಿ ಇಡೀ ಕರ್ನಾಟಕಕ್ಕೆ ಗೊತ್ತಾಗಿದೆ. ಅವರ ನೇರ ಮತ್ತು ದಿಟ್ಟ ಸ್ಪಷ್ಟ ಮಾತುಗಳು ಎಲ್ಲರನ್ನು ಎಚ್ಚರಿಸುತ್ತಿದ್ದವು. ಸತ್ಯಕ್ಕಾಗಿ ಹೋರಾಡುತ್ತ ಕನ್ನಡ ಮತ್ತು ಕರ್ನಾಟಕದ ಕೆಲಸಕ್ಕಾಗಿ ಯಾವ ಮುಲಾಜಿಲ್ಲದೇ ಯಾರ ಭೀತಿಯೂ ಇಲ್ಲದೇ ಮಾತನಾಡುವ ಧೀಮಂತ ವ್ಯಕ್ತಿಯಾಗಿದ್ದರು. ಸರ್ಕಾರಕ್ಕೆ ಮಾರ್ಗದರ್ಶನ ಮಾಡುವ ಶಕ್ತಿ ಅವರಲ್ಲಿತ್ತು. ನೆಹರು ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಡಾ. ಪಾಪು ಅವರು ರಾಜ್ಯಸಭಾ ಸದಸ್ಯರಾಗಿ ಎರಡು ಅವಧಿಯಲ್ಲಿ ದೇಶದ ಕೆಲಸ ಕಾರ್ಯಗಳಿಗೆ ತೊಡಗಿಸಿಕೊಂಡು‘ಪ್ರಪಂಚ’ವಾರ ಪತ್ರಿಕೆ ಮೂಲಕ ಬದುಕಿನುದ್ದಕ್ಕೂ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಿದರು ಎಂಬುದು ಪತ್ರಿಕಾ ರಂಗದಲ್ಲಿ, ಸರ್ಕಾರದಲ್ಲಿ, ನಾಡಿನ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದರು.

ಶಂಕರ ಹಲಗತ್ತಿ ಸ್ವಾಗತಿಸಿದರು. ಶಿ.ಮ. ರಾಚಯ್ಯನವರ ಪಾಪು ಕುರಿತು ರಚಿಸಿದ‘ನೂರು ವರ್ಷದ ಕನ್ನಡ ಪುರುಷ’ ಕವನ ಓದಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಶ್ರೀಶೈಲ ಹುದ್ದಾರ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ನಿಂಗಣ್ಣ ಕುಂಟಿ, ಶಿವಾನಂದ ಭಾವಿಕಟ್ಟಿ, ಮಂಜುಳಾ ಹಾರೋಗೊಪ್ಪ, ಅಶೋಕ ಪಾಟೀಲ, ಬಿ.ಎಲ್. ಪಾಟೀಲ ಮತ್ತಿತರರು ಇದ್ದರು.