ಕನ್ನಡ ನಾಡು-ನುಡಿಗೆ ಪಾಪು ಅವಿರತ ಶ್ರಮ: ಶಿಕ್ಷಕ ಶಿವಾನಂದ ಮಣ್ಣೂರಮಠ

| Published : Aug 21 2024, 12:33 AM IST

ಕನ್ನಡ ನಾಡು-ನುಡಿಗೆ ಪಾಪು ಅವಿರತ ಶ್ರಮ: ಶಿಕ್ಷಕ ಶಿವಾನಂದ ಮಣ್ಣೂರಮಠ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಿಕೋದ್ಯಮಿಯಾಗಿದ್ದ ಪಾಟೀಲ ಪುಟ್ಟಪ್ಪನವರು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶಿಕ್ಷಕ ಶಿವಾನಂದ ಮಣ್ಣೂರಮಠ ಹೇಳಿದರು.

ನರಗುಂದ: ಪಾಪು ಕನ್ನಡ ನಾಡು-ನುಡಿಗೆ ಅವಿರತವಾಗಿ ಶ್ರಮಿಸಿದ ಅಪ್ರತಿಮ ಕನ್ನಡ ಹೋರಾಟಗಾರ. ಸಾಹಿತಿಯಾಗಿ, ಪತ್ರಿಕೋದ್ಯಮಿಯಾಗಿದ್ದ ಪಾಟೀಲ ಪುಟ್ಟಪ್ಪನವರು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಈ ಶತಮಾನ ಕಂಡ ಕನ್ನಡದ ಕಣ್ಮನಿ ಎಂದು ಶಿಕ್ಷಕ ಶಿವಾನಂದ ಮಣ್ಣೂರಮಠ ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧಮ೯ ಸಂಸ್ಥೆ, ದೊರೆಸ್ವಾಮಿ ವಿರಕ್ತಮಠ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ಕರ್ನಾಟಕ ಏಕೀಕರಣದ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-17 ಹಾಗೂ ವಚನಾಮೃತ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಟ್ಟಪ್ಪನವರು ಮೊದಲ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಗಡಿ ನಾಡಿನಲ್ಲಿ ಕನ್ನಡವನ್ನು ಸಂರಕ್ಷಿಸುವುದರ ಜತೆಗೆ ಕನ್ನಡವನ್ನು ಕಟ್ಟಿದ ಕರುನಾಡಿನ ಕುಲತಿಲಕ. 1982ರಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಮಾಡಲು ಗೋಕಾಕ್ ವರದಿ ಜಾರಿಗೆ ಮಾಡುವಲ್ಲಿ ಪುಟ್ಟಪ್ಪನವರು ಪ್ರಮುಖ ಪಾತ್ರವಹಿಸಿದ್ದರು. ಜೀವನದುದ್ದಕ್ಕೂ ಕನ್ನಡ ನೆಲ-ಜಲ ಭಾಷೆಗಾಗಿ ಶ್ರಮಿಸಿದ ಅವರ ಜೀವನವೇ ನಮಗೆಲ್ಲ ಆದರ್ಶ ಎಂದರು.

ಸಾನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡಕ್ಕೆ ಮತ್ತೊಂದು ಹೆಸರೇ ಪಾಪು ಎನ್ನುವಂತ್ತಿದ್ದ ಅವರು ದೇಶದ ಯಾವುದೇ ಸ್ಥಳದಲ್ಲಿ ಕುಳಿತು ಗುಡುಗಿದರೂ ಅದು ಸಿಂಹ ಧ್ವನಿಯಾಗಿರುತ್ತಿತ್ತು. ನೇರ- ನಿಷ್ಠುರವಾದಿಗಳಾಗಿದ್ದ ಅವರು ಯಾವುದಕ್ಕೂ ರಾಜಿಯಾಗದೆ ಕನ್ನಡವನ್ನು ಕಣ್ಣಿನಂತೆ ಕಾಪಾಡುತ್ತಿದ್ದರು. ಈ ಭಾಗದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಅಧ್ಯಕ್ಷರಾಗಿ ಕನ್ನಡ ನಾಡಿನ ಸಂರಕ್ಷಕರಾಗಿ ಕೆಲಸ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ನಾಗರಾಜ ನೆಗಳೂರ, ವಿ.ಎನ್. ಕೊಳ್ಳಿಯವರ, ಚೆನ್ನಪ್ಪ ಕೋರಿ, ಶರಣಯ್ಯ ಕುಲಕರ್ಣಿ, ಪ್ರಭುಲಿಂಗಯ್ಯ ಹಿರೇಮಠ, ಮಹಾಂತೇಶ ಸಾಲಿಮಠ, ಶಂಕ್ರಣ್ಣ ವಾಳದ, ಹುಂಬಿ ಸೇರಿದಂತೆ ಮುಂತಾದವರು ಇದ್ದರು. ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ಆರ್.ಬಿ. ಚಿನಿವಾಲರ ನಿರೂಪಿಸಿದರು.