ಸೌಲಭ್ಯ ಪಡೆಯುವಲ್ಲಿ ವಂಚಿತ ತಿಳವಳ್ಳಿ ಮಾದಿಗ ಸಮಾಜ-ಪವಿತ್ರಾ

| Published : Oct 07 2025, 01:03 AM IST

ಸಾರಾಂಶ

ಜಿಲ್ಲೆಯಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸವಲತ್ತುಗಳಿಂದ ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದ ಮಾದಿಗ ಸಮುದಾಯ ವಂಚಿತವಾಗಿದ್ದು, ಇಂದಿಗೂ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ದಮನಿತ ಸೇನಾ ಸಮಿತಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪವಿತ್ರಾ ಜಿ. ಹೇಳಿದರು.

ಹಾವೇರಿ: ಜಿಲ್ಲೆಯಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸವಲತ್ತುಗಳಿಂದ ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದ ಮಾದಿಗ ಸಮುದಾಯ ವಂಚಿತವಾಗಿದ್ದು, ಇಂದಿಗೂ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ದಮನಿತ ಸೇನಾ ಸಮಿತಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪವಿತ್ರಾ ಜಿ. ಹೇಳಿದರು.ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಸಮೀಕ್ಷೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ದಮನಿತ ಸೇನಾ ಸಮಿತಿ ಸಂಚರಿಸಿ ಜನರಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಇಂದಿಗೂ ಮಾದಿಗ ಸಮಾಜ ತೀರಾ ಹಿಂದುಳಿದಿದೆ. ಅದರಲ್ಲೂ ತಿಳವಳ್ಳಿ ಗ್ರಾಮದಲ್ಲಿ ಮೀಸಲಾತಿ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹೆಸರಿಗೆ ಒಂದೆರಡು ಜನರಿಗೆ ಮನೆಗಳ ಹಂಚಿಕೆ ಮಾಡಿ ಉಳಿದವರುಗಳನ್ನು ಇತರರಿಗೆ ನೀಡಲಾಗುತ್ತಿದೆ ಎಂದು ದೂರಿದರು.ಅಲ್ಲದೇ ಪ್ರತಿ ಮನೆ, ನಿವೇಶನ ಸೇರಿದಂತೆ ಕಾಮಗಾರಿಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಸರ್ಕಾರ ನೀಡುವ ಮೊತ್ತದಲ್ಲಿ ಒಂದಷ್ಟು ಪಾಲನ್ನು ಅಲ್ಲಿನ ಸಿಬ್ಬಂದಿಗೆ ನೀಡಿದರೆ ಮಾತ್ರ ಯೋಜನೆಗಳು ಸಿಗುತ್ತವೆ. ಸರ್ಕಾರದ ಯೋಜನೆಗಳನ್ನು ಪಡೆಯಲು ಲಂಚ ನೀಡುವುದು ಅನಿವಾರ್ಯ ಎಂಬಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮುಖಂಡ ಮಹಾದೇವಪ್ಪ ಮಾಳಮ್ಮನವರ ಮಾತನಾಡಿ, ಜಿಲ್ಲೆಯಲ್ಲಿ ಜೂಜಾಟ, ಮಟ್ಕಾ ಎಗ್ಗಿಲ್ಲದೇ ನಡೆಯುತ್ತಿವೆ. ಅವರಿಗೆ ಯಾವುದೇ ಭಯವಿಲ್ಲದೇ ಸಮಾಜದಲ್ಲಿ ಮುಕ್ತವಾಗಿ ತಮ್ಮ ದಂಧೆ ನಡೆಸಿದ್ದು, ಪ್ರಶ್ನಿಸಿದವರ ಮೇಲೆ ಭಯ ಮೂಡಿಸುವ ಪ್ರಯತ್ನ ನಡೆದಿದೆ. ಅದೇ ರೀತಿ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಕೂಡ ರಾಜಾರೋಷವಾಗಿ ಹಾಡಹಗಲೇ ನಡೆದಿದೆ ಎಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಜಿ.ಗೋವಿಂದರಾಜ್, ಯಶವಂತ, ಭುವನೇಶ್ವರಿ ವಡ್ಡಮ್ಮನವರ, ಮಂಜಪ್ಪ ತಿಳವಳ್ಳಿ, ಜಗದೀಶ ತಿಳವಳ್ಳಿ, ನಾಗೇಶ ಕಿರವಾಡಿ, ಪುನೀತ ಕಿರವಾಡಿ, ಪರಶುರಾಮ ಹಿರೇಕೆರೂರ ಇತರರು ಇದ್ದರು.