ಹೋಟೆಲ್‌ , ಅಂಗಡಿಗಳಿಂದ ಬರುವ ತ್ಯಾಜ್ಯವನ್ನು ಕೆರೆಗೆ, ಚರಂಡಿಗೆ ಹಾಕದೆ, ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಎನ್.ಎ.ಕುಂಞ ಅಹಮದ್ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ಹೋಟೆಲ್‌ ಳು, ಅಂಗಡಿಗಳಿಂದ ಬರುವ ತ್ಯಾಜ್ಯವನ್ನು ಕೆರೆಗೆ, ಚರಂಡಿಗೆ ಹಾಕದೆ, ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಎನ್.ಎ.ಕುಂಞ ಅಹಮದ್ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಳೆ ನೀರಿನ ಚರಂಡಿ ಮತ್ತು ತ್ಯಾಜ್ಯ ನೀರಿನ ಒಳ ಚರಂಡಿಗಳನ್ನು ಕೆರೆಯೊಂದಿಗೆ ಸಂಪರ್ಕಿಸದಂತೆ ಬೇರ್ಪಡಿಸಬೇಕು. ಕಸ ಹೋಗದಂತೆ ತಡೆಗಟ್ಟಬೇಕು. ಮುಖ್ಯವಾಗಿ ಸುಪ್ರೀಂ ಕೋರ್ಟ್ ನ ಆದೇಶದಂತೆ ಶಾಲಾ ಕಾಲೇಜು ಆವರಣ, ಆಸ್ಪತ್ರೆಗಳು, ಬಸ್ ನಿಲ್ದಾಣಗಳಂತಹ ಸ್ಥಳಗಳಿಂದ ನಾಯಿಗಳನ್ನು ಹಿಡಿದು, ಸುರಕ್ಷಿತ ಆಶ್ರಯಕ್ಕೆ ಕಳುಹಿಸಬೇಕು. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ರೇಬೀಸ್ ತಡೆಗಟ್ಟಲು ಸಂತಾನಹರಣ ಮತ್ತು ಲಸಿಕೆ ಹಾಕಿಸುವುದು ಅತ್ಯಗತ್ಯ ಎಂದರು. ಕಾರ್ಯ ನಿರ್ವಾಹಕ ಅಧಿಕಾರಿ ಅನಂತರಾಜು ಮಾತನಾಡಿ ಮಟನ್, ಚಿಕನ್ ಮಾರ್ಕೆಟ್ ನಲ್ಲಿರುವ ತ್ಯಾಜ್ಯವನ್ನು ನಿರ್ದಿಷ್ಟ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಚಿಸಬೇಕು. ಈ ಬಗ್ಗೆ ಸಂಬಂಧಿಸಿದ ಅಂಗಡಿಗಳಿಗೆ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳವಳಿಕೆ ನೋಟಿಸ್ ನೀಡಿ ನಿರ್ದಿಷ್ಟ ಸ್ಥಳದಲ್ಲಿ ತ್ಯಾಜ್ಯವನ್ನು ಹಾಕಲು ಸೂಚಿಸಬೇಕು. ಸಾರ್ವಜನಿಕರಿಗೆ ಕೆರೆಗಳ ಮಹತ್ವ ತಿಳಿಸಿ, ಕಸ ಹಾಕದಂತೆ ಮತ್ತು ತ್ಯಾಜ್ಯ ನೀರು ಹರಿಬಿಡದಂತೆ ಮನವೊಲಿಸಿ ಜಾಗೃತಿ ಅಭಿಯಾನಗಳನ್ನು ನಡೆಸಬೇಕು ಎಂದರು. ಈ ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.