ಸಾರಾಂಶ
ರಾಮನಗರ: ಜಿಲ್ಲೆಯ ಬೀದಿಬದಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಆಹಾರದ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಖಾತ್ರಿ ಪಡಿಸಬೇಕೆಂದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಜಿಲ್ಲಾ ಅಂಕಿತ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ನಿರ್ದೇಶನ ನೀಡಿದರು.ನಗರದ ಅಪರ ಜಿಲ್ಲಾಧಿಕಾರಿ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಕಾರ್ಯಕ್ರಮದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೀದಿ ಬದಿಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳು, ಆಹಾರ ಕೇಂದ್ರಗಳ ನೈರ್ಮಲ್ಯ ಮತ್ತು ಗುಣಮಟ್ಟವನ್ನು ಮತ್ತು ಸ್ಥಳೀಯ ವಿವಿಧ ಜನಪ್ರಿಯ ತಿಂಡಿಗಳನ್ನು ಮಾರಾಟ ಮಾಡುವ, ಮಾರಾಟಗಾರರು, ಅಂಗಡಿಗಳು, ಸ್ಟಾಲ್‌ಗಳು ತಯಾರಿಸುವ ಆಹಾರ ಪದ್ದತಿಗಳ ಗುಣಮಟ್ಟ ಉತ್ತಮವಾಗಿರಬೇಕು.
ಇದು ಗ್ರಾಹಕರಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಸ್ಥಳೀಯ ತಿಂಡಿಗಳನ್ನು ತಿನ್ನುವ ನಂಬಿಕೆಯನ್ನು ಮೂಡಿಸಬೇಕು. ಒಮ್ಮೆ ಬಳಕೆ ಮಾಡಿದ ಎಣ್ಣೆಯನ್ನು ಮತ್ತೊಮ್ಮೆ ಅಡುಗೆ ಮಾಡಲು ಬಳಸಿದರೆ ಅದರಲ್ಲಿ ಉತ್ಪತ್ತಿ ಆಗುವ ಕೆಲವೊಂದು ಹಾನಿಕಾರಕ ಅಂಶಗಳು ಅಡುಗೆ ಎಣ್ಣೆಯ ರುಚಿಯನ್ನು ಬದಲಾಯಿಸಿ ತಯಾರು ಮಾಡುವ ಆಹಾರದ ಸ್ವಾದವನ್ನು ಹದಗೆಡಿಸುತ್ತದೆ ಎಂದರು.
ಒಮ್ಮೆ ಬಳಸಿ ಶೇಖರಿಸಿಟ್ಟ ಅಡುಗೆ ಎಣ್ಣೆಗಳನ್ನು ಮರು ಬಳಕೆ ಮಾಡಿದರೆ ಅದರಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಲ್ಡಿಹ್ಶೆಡ್ ಎಂಬ ರಾಸಾಯನಿಕ ಬಿಡುಗಡೆ ಆಗುತ್ತದೆ. ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ನಾವು ಹೊಸದಾಗಿ ಬಳಸುವ ಅಡುಗೆ ಎಣ್ಣೆಗೂ ಮರುಬಳಕೆ ಮಾಡುವ ಅಡುಗೆ ಎಣ್ಣೆಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ.
ಬಳಸಿದ ಅಡುಗೆ ಎಣ್ಣೆಯನ್ನು ಒಂದು ದಿನ ಅಥವಾ ಎರಡು ದಿನಗಳಲ್ಲಿ ಸೇವಿಸಬೇಕು. ಅದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಾರದು. ಹೆಚ್ಚು ಕಾಲ ಕರಿದ ಎಣ್ಣೆಯನ್ನೇ ಅಡುಗೆಗೆ ಉಪಯೋಗಿಸುವುದರಿಂದ ಹೃದಯಿ ಸಂಬಂಧಿ ಕಾಯಿಲೆಗಳು, ನರ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಎಫ್‌ಎಸ್‌ಎಸ್‌ಎಐ ನಿಯಮಗಳಂತೆ ಅಡುಗೆಗೆ ಬಳಸುವ ಎಣ್ಣೆಯಲ್ಲಿ ಟೋಟಲ್ ಪೋಲಾರ್ ಕಾಂಪಚಿಡ್ಸ್ (ಟಿಪಿಸಿ)ನ ಮಿತಿಯು ಗರಿಷ್ಠ ಶೇ. 25ನ್ನು ಮೀರಬಾರದು ಎಂದು ತಿಳಿಸಿದರು.
ಕರಿದ ಪದಾರ್ಥಗಳನ್ನು ಹಳೆಯ ನ್ಯೂಸ್ ಪೇಪರ್, ಪ್ಲಾಸ್ಟಿಕ್ ನಲ್ಲಿ ಸುತ್ತಿ ಕೊಡುವುದು ಅತ್ಯಂತ ಅಪಾಯಕಾರಿಯಾಗಿದೆ. ಇಂತಹವು ಕಂಡರೆ ಸಂಬಂಧ ಪಟ್ಟ ನಗರ ಸಭೆಯೊಂದಿಗೆ ಅಂಕಿತ ಅಧಿಕಾರಿಗಳು, ಮೊದಲು ಅರಿವು ಮೂಡಿಸಿ ನಂತರದಲ್ಲಿ ರೇಡ್ ಮಾಡಬೇಕು. ಜಿಲ್ಲೆಯ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಚತೆ ಮತ್ತು ಆಹಾರ ತಯಾರಿಕೆ ಸುರಕ್ಷತೆ ಬಗ್ಗೆ ತಪ್ಪದೆ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಬ್ಬರಿ ಎಣ್ಣೆ ಸೇರಿದಂತೆ ಖೋವಾ ಸಿದ್ದಪಡಿಸುವ ಸ್ಥಳಗಳಿಗೆ ಅನೀರಿಕ್ಷಿತ ಭೇಟಿ ನೀಡಿ ತಪಾಸಣೆ ಮಾಡಬೇಕು. ಗೋಬಿ ಮಂಚೂರಿಗೆ ಕೃತಕ ಬಣ್ಣ ನಿಷೇಧಿಸಲಾಗಿದ್ದು, ಅದರ ಉಲ್ಲಂಘನೆ ಕಂಡುಬಂದಿದಿಯೇ ಎಂಬುದನ್ನು ತಪಾಸಣೆ ನಡೆಸಬೇಕು ಎಂದು ಚಂದ್ರಯ್ಯ ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದ ಜಿಲ್ಲೆಯ 2 ಹೋಟೆಲ್ ಗಳ ಮೇಲೆ ರೇಡ್ ಮಾಡಲಾಗಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ. ರೋಚನಾ ತಿಳಿಸಿದರು.
ಅಂಗನವಾಡಿಗಳಲ್ಲಿ ಆಹಾರ ಸುರಕ್ಷತೆ
ಕೃತಕ ಬಣ್ಣಗಳನ್ನು ವೆಜ್, ಚಿಕನ್, ಫಿಶ್ ಇತರೆ ಕಬಾಬ್‌ಗಳ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದೆ, ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಮತ್ತು ಗುಣಮಟ್ಟ ಕಾಯ್ದೆ-2006ರ ನೀಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು 10ಲಕ್ಷ ರು.ಗಳ ವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಬಹುದಾಗಿದೆ ಎಂದು ಚಂದ್ರಯ್ಯ ತಿಳಿಸಿದರು.ಅದರಂತೆ ಖಾಸಗಿಯಾಗಿ ಆಹಾರ ಸಿದ್ದಪಡಿಸುವರು ಅಲ್ಲಿನ ಸ್ಪಚ್ಚತೆ ಹಾಗೂ ಸುರಕ್ಷತೆಯ ಬಗ್ಗೆ ಗಮನ ಹರಿಸಲು ತಾಕೀತು ಮಾಡಬೇಕು ಹಾಗೂ ಅವರನ್ನೆಲ್ಲಾ ನೋಂದಾಯಿಸಲು ಅರಿವು ಮೂಡಿಸಬೇಕು ಹಾಗೂ ಕಡ್ಡಾಯವಾಗಿ ಕ್ರಮವಹಿಸಬೇಕು ಎಂದು ತಿಳಿಸಿದರು.
ಆಹಾರ ಸುರಕ್ಷತೆಯ ಅಧಿಕಾರಿ ಡಾ.ಚಂದ್ರಶೇಖರ್, ಆರ್.ಸಿ.ಎಚ್ ಅಧಿಕಾರಿ ಡಾ.ರಾಜು, ನಗರಸಭೆ ಆಯುಕ್ತ ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.ಆಹಾರ ಸುರಕ್ಷತೆ ವಿಚಾರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ನಿಯಮಗಳನ್ನು ಉಲ್ಲಂಘಿಸುವ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಹೊಟೆಲ್ ಮೇಲೆ ದಾಳಿ ನಡೆಸಲು ಸೂಚಿಸಲಾಗಿದೆ. ಜನರ ಆರೋಗ್ಯದ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಈ ವಿಚಾರದಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ದಂಡ ವಿಧಿಸಲು ಸೂಚಿಸಲಾಗಿದೆ. ಆದ್ದರಿಂದ ವ್ಯಾಪಾರಸ್ಥರು ನಿಯಮಗಳನ್ನು ಪಾಲಿಸಿ ಜನರ ಆರೋಗ್ಯ ಕಾಪಾಡುವಲ್ಲಿ ಸಹಕರಿಸಬೇಕು
- ಆರ್. ಚಂದ್ರಯ್ಯ, ಅಪರ ಜಿಲ್ಲಾಧಿಕಾರಿ. ರಾಮನಗರ