ಸಾರಾಂಶ
ಕೊಪ್ಪಳ ತಾಲೂಕು ಪಂಚಾಯಿತಿಯಲ್ಲಿ ಕೂಸಿನ ಮನೆಯ ಆರೈಕೆದಾರರ ತರಬೇತಿ ಸಮಾರೋಪ
ಕನ್ನಡಪ್ರಭ ವಾರ್ತೆ ಕೊಪ್ಪಳಮಕ್ಕಳ ಬೌದ್ಧಿಕ ಬೆಳವಣಿಗೆಗೆ ಕೂಸಿನ ಮನೆಗಳು ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೂಸಿನ ಮನೆಯ ಕೆರ್ ಟೇಕರ್‌ಗಳಿಗೆ ಏರ್ಪಡಿಸಿದ್ದ ೭ ದಿನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕೂಸಿನ ಮನೆಗಳು ಮಕ್ಕಳಿಗೆ ಬೇಕಾದ ಕಲಿಕಾ ಪೂರಕ ಚಟುವಟಿಕೆ ಜರುಗಿಸಲು ನಾನಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿಯ ವಿವಿಧ ಅನುದಾನದಲ್ಲಿ ಅವಕಾಶ ಇರುವುದರಿಂದ ಅಭಿವೃದ್ಧಿ ಪಡಿಸಲಾಗಿದ್ದು, ಮಕ್ಕಳ ಆರೈಕೆದಾರರು ಕೂಸಿನ ಮನೆಗೆ ದಾಖಲಾಗುವ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಬೇಕು ಎಂದರು.
ಕೂಸಿನ ಮನೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ಆರೈಕೆ ಮಾಡಿ ಅವರಿಗೆ ಆಹಾರವನ್ನು ಕ್ರಮಬದ್ಧವಾಗಿ ನೀಡುವಂತೆ ತಿಳಿಸಿದರು.ಕೂಸಿನ ಮನೆಗೆ ನಿಗದಿಪಡಿಸಲಾದ ಎಲ್ಲ ದಾಖಲಾತಿಗಳನ್ನು ಕಡ್ಡಾಯವಾಗಿ ನಿರ್ವಹಿಸತಕ್ಕದ್ದು. ಮಕ್ಕಳಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಯಾವುದೇ ರೀತಿಯಾಗಿ ನಿರ್ಲಕ್ಷ್ಯ ವಹಿಸುವಂತಿಲ್ಲ ಎಂದರು.
ಪ್ರತಿ ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಜರುಗಿಸುವ ಜೊತೆಗೆ ಪ್ರತಿ ಮಗುವಿನ ತೂಕ ಮತ್ತು ಆರೋಗ್ಯದ ಬಗ್ಗೆ ನಿಗಾವಹಿಸಲು ಪಾಲಕರಿಗೆ ಮಾಹಿತಿ ನೀಡಬೇಕು ಎಂದರು.ಮೊಬೈಲ್ ಕ್ರಷ್ ಸಂಸ್ಥೆಯ ತರಬೇತಿದಾರರಾದ ಚಿದಾನಂದಸ್ವಾಮಿ ಮಾತನಾಡಿ, ೭ ದಿನಗಳ ಕಾಲ ತರಬೇತಿ ನೀಡಲಾಗಿದ್ದು, ಆರೈಕೆದಾರರು ಆಸಕ್ತಿ ವಹಿಸಿ ಕೂಸಿನ ಮನೆಯನ್ನು ಮಾದರಿ ಕೂಸಿನ ಮನೆಯನ್ನಾಗಿ ನಿರ್ಮಿಸುವಲ್ಲಿ ನಿಮ್ಮ ಪಾತ್ರ ಬಹು ಮುಖ್ಯವಾಗಿದೆ. ಪಠ್ಯೇತರ ಚಟುವಟಿಕೆ ಜರುಗಿಸುವುದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆಯಾಗುತ್ತದೆ ಎಂದರು. ತರಬೇತಿಯಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಮೊಬೈಲ್ ಕ್ರಷ್ ಸಂಸ್ಥೆಯ ತರಬೇತಿದಾರರಾದ ವಿಜಯಲಕ್ಷ್ಮೀ, ರಜನಿ, ರಾಜಶೇಖರ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ್ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.