ಸಾರಾಂಶ
3/ 4ನೇ ದರ್ಜೆ ನೌಕರರನ್ನಾಗಿ ಪರಿಗಣಿಸಿಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜಿಲ್ಲಾಡಳಿತ ಭವನದ ಬಳಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರು ಕೊರೆಯುವ ಚಳಿಯಲ್ಲೇ ಮಂಗಳವಾರ ಅಹೋರಾತ್ರಿ ಧರಣಿ ನಡೆದಿದ್ದು, ಬುಧವಾರವೂ ಮುಂದುವರೆದಿದೆ.ಕನಿಷ್ಠ ವೇತನ, ಗ್ರಾಜ್ಯುಟಿ, ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆಗೇರಿಸುವುದು, ಗುಣಮಟ್ಟದ ಆಹಾರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಂಗನವಾಡಿ ನೌಕರರ ಸಂಘದಿಂದ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಭವನ ಪಕ್ಕದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ಕುಳಿತು ಮಂಗಳವಾರ ರಾತ್ರಿ ರಸ್ತೆ ಬದಿ ಮಲಗಿ ನಂತರ ಬುಧವಾರ ಬೆಳಗ್ಗೆ ಧರಣಿ ಆರಂಭಿಸಿದರು.
ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ಆರನೇ ಗ್ಯಾರಂಟಿಯಾಗಿ ಅಂಗನವಾಡಿ ನೌಕರರಿಗೆ ₹15,000 ಕನಿಷ್ಠ ವೇತನ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು ವರ್ಷವಾದರೂ ಭರವಸೆ ಈಡೇರಿಸಿಲ್ಲ. ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ. ನೌಕರರೇ ಹಣ ನೀಡಿ ಮೊಟ್ಟೆ, ತರಕಾರಿ ಖರೀದಿಸಬೇಕಾಗಿದೆ. ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.ಮಾತೃ ವಂದನಾ, ಚುನಾವಣೆ ಕಾರ್ಯಗಳು ಸೇರಿದಂತೆ ಇಲಾಖೇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಗೌರವ ಧನವಿಲ್ಲದ ಅಂಗನವಾಡಿ ನೌಕರರು ಇಲಾಖೇತರ ಕೆಲಸಗಳನ್ನು ನಿಭಾಯಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗುಣಮಟ್ಟದ ಆಹಾರ ಪದಾರ್ಥಗಳು ಸಿಗುತ್ತಿಲ್ಲ. ರವೆ, ಬೆಲ್ಲ, ಮಸಾಲೆ ಇತ್ಯಾದಿ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿಲ್ಲ. ರವೆಯಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿವೆ. ರಾಜ್ಯದ ಎಲ್ಲ ಕಡೆ ಏಕ ಮಾದರಿಯ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ಮಕ್ಕಳು ಆಹಾರ ಸೇವನೆ ಮಾಡಲು ಕಷ್ಟವಾಗುತ್ತಿದೆ. ಈ ಹಿಂದಿನ ಮಾದರಿಯಲ್ಲೇ ಆಯಾ ಪ್ರಾಂತ್ಯಾವಾರು ಇರುವ ಆಹಾರ ಪದ್ದತಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲೇ ಆಹಾರ ಪದಾರ್ಥ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.ಈ ಕುರಿತು ಮಾಹಿತಿ ಪಡೆದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ.ರೆಡ್ಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ರಾತ್ರಿಯ ಊಟದ ವ್ಯವಸ್ಥೆ ಮಾಡಿ, 400ಕ್ಕೂ ಹೆಚ್ಚು ಉಲ್ಲನ್ ರಗ್ಗು ವಿತರಿಸಿದರಲ್ಲದೇ ನಾಳೆಯೂ ಊಟ, ತಿಂಡಿ ಪೂರೈಸುವ ಭರವಸೆ ನೀಡಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾ ಕಾರ್ಯದರ್ಶಿ ರತ್ನಮ್ಮ, ಖಜಾಂಚಿ ವೆಂಕಟಲಕ್ಷ್ಮಮ್ಮ, ಮಂಜುಳ, ಭಾಗ್ಯಮ್ಮ, ಸುಜಾತ, ಭಾಗ್ಯಲಕ್ಷ್ಮಮ್ಮ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.