ನಿರಂತರ ನೀರು ಯೋಜನೆಗೆ ಹಣ ಪಾವತಿ, ತನಿಖೆಗೆ ಸೂಚನೆ

| Published : Jan 05 2025, 01:30 AM IST

ಸಾರಾಂಶ

ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ನಿರಂತರ ನೀರು (24*7) ಸರಬರಾಜು ಮಾಡುವ ಯೋಜನೆ ಒಂದೂ ವಲಯದಲ್ಲೂ ಪೂರ್ಣಗೊಂಡಿಲ್ಲ. ಆದರೂ ಗುತ್ತಿಗೆದಾರರಿಗೆ 30 ಕೋಟಿ ರು. ಪಾವತಿಸಲಾಗಿದೆ. ಯಾರ್ಯಾುರ ಕಾಲದಲ್ಲಿ ಎಷ್ಟೆಷ್ಟು ಹಣ ಭರಿಸಲಾಗಿದೆ ಎಂಬುದನ್ನು ತನಿಖೆ ನಡೆಸಿ ಅವರಿಂದಲೇ ಹಣ ವಸೂಲಿ ಮಾಡಲು ಕ್ರಮವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಾಕೀತು ಮಾಡಿದರು.

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ನಿರಂತರ ನೀರು (24*7) ಸರಬರಾಜು ಮಾಡುವ ಯೋಜನೆ ಒಂದೂ ವಲಯದಲ್ಲೂ ಪೂರ್ಣಗೊಂಡಿಲ್ಲ. ಆದರೂ ಗುತ್ತಿಗೆದಾರರಿಗೆ 30 ಕೋಟಿ ರು. ಪಾವತಿಸಲಾಗಿದೆ. ಯಾರ‍್ಯಾರ ಕಾಲದಲ್ಲಿ ಎಷ್ಟೆಷ್ಟು ಹಣ ಭರಿಸಲಾಗಿದೆ ಎಂಬುದನ್ನು ತನಿಖೆ ನಡೆಸಿ ಅವರಿಂದಲೇ ಹಣ ವಸೂಲಿ ಮಾಡಲು ಕ್ರಮವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಾಕೀತು ಮಾಡಿದರು.ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಗರಸಭೆ ಹಾಗೂ ಕೆಯುಐಡಿಎಫ್‌ಸಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಚಿವ ಶಿವಾನಂದ ಪಾಟೀಲ ಹರಿಹಾಯ್ದರು.ಹಾವೇರಿ ನಗರಕ್ಕೆ ನಿರಂತರ ನೀರು ಸರಬರಾಜು ಮಾಡುವ 33 ಕೋಟಿ ವೆಚ್ಚದ ಯೋಜನೆಗೆ ಕಾರ್ಯಾದೇಶ ನೀಡಿ 10 ವರ್ಷ ಆಗಿದೆ. 30 ಕೋಟಿ ರು. ಖರ್ಚು ಮಾಡಿದ್ದರೂ ಸರಿಯಾಗಿ ನೀರು ಕೊಡಲು ಸಾಧ್ಯವಾಗಿಲ್ಲ, ಕೆಲಸ ಪೂರ್ಣಗೊಳ್ಳದಿದ್ದರೂ ಹೇಗೆ 30 ಕೋಟಿ ರು. ಪಾವತಿಸಿದ್ದೀರಿ. ಯಾವ್ಯಾವ ಅಧಿಕಾರಿಗಳ ಕಾಲದಲ್ಲಿ ಎಷ್ಟೆಷ್ಟು ಹಣ ಪಾವತಿಯಾಗಿದೆ ಎಂಬುದರ ಮಾಹಿತಿ ನಮ್ಮ ಬಳಿ ಇದೆ. ತನಿಖೆ ನಡೆಸಿ ಆಯಾ ಅಧಿಕಾರಿಗಳನ್ನೇ ಹೊಣೆ ಮಾಡಿ ಅವರಿಂದಲೇ ಹಣ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಆಗ ಪ್ರತಿಕ್ರಿಯಿಸಿದ ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ, ನಗರದಲ್ಲಿ ನೀರು ಪೂರೈಸುವ ಕಾಮಗಾರಿ ನಡೆದಿದೆ. ಆದರೆ, ಈಗ ಬಹಳಷ್ಟು ಕಡೆ ಹಾಳಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದರು.ಅಮೃತ್ ಯೋಜನೆ ಚುರುಕುಗೊಳ್ಳಿ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಗರಸಭೆ ಪ್ರದೇಶಗಳಿಗೆ ನೀರು ಪೂರೈಸುವ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ಹಾವೇರಿಗೆ ಬೇಸಿಗೆಯಲ್ಲಿ ಕನಿಷ್ಠ 5 ದಿನಕ್ಕೊಮ್ಮೆ ನೀರು ಪೂರೈಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವರು ಸೂಚಿಸಿದರು.ಶಾಸಕ ಯಾಸೀರ್‌ಖಾನ್ ಪಠಾಣ ಮಾತನಾಡಿ, ಅಮೃತ್ ಯೋಜನೆಯಡಿ, ಶಿಗ್ಗಾಂವಿ, ಬಂಕಾಪುರ, ಸವಣೂರು ಪಟ್ಟಣದಲ್ಲಿ ಪೈಪ್‌ಲೈನ್ ಅಳವಡಿಸುವ ಕಾರ್ಯ ನಡೆದಿದೆ. ಆದರೆ, ಕೆಲಸ ಆಗಿರುವುದಕ್ಕಿಂತಲೂ ಹೆಚ್ಚು ಬಿಲ್ ಪಾವತಿಸಲಾಗಿದೆ. ಸವಣೂರಿನಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆದಾರ ಪತ್ತೆನೇ ಆಗಿಲ್ಲ ಎಂದು ಕಿಡಿಕಾರಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಹಿರೇಕೆರೂರ, ರಟ್ಟೀಹಳ್ಳಿ, ಹಾನಗಲ್ಲ ಪಟ್ಟಣಗಳಲ್ಲೂ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಭೌತಿಕ ಪ್ರಗತಿಗಿಂತ ಆರ್ಥಿಕ ಪ್ರಗತಿನೇ ಹೆಚ್ಚಾಗಿದೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಆಗ ಗರಂ ಆದ ಸಚಿವರು, ಈ ಯೋಜನೆಗಳ ಕಾಮಗಾರಿಗಳ ಕುರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಡಿಗೇ ಪತ್ರ ಬರೆಯಿರಿ. ಮುಂದಿನ ಸಭೆಗೆ ಅವರೇ ಬಂದು ಉತ್ತರಿಸಲಿ ಎಂದು ಡಿಸಿಗೆ ಸೂಚಿಸಿದರು.ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ತುಂಗಭದ್ರ ನದಿಯಿಂದ ಬ್ಯಾಡಗಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಯೋಜನೆ ಜಾರಿಯಲ್ಲಿದ್ದು, ಅದರಲ್ಲಿ ತಾಲೂಕಿನ ಹುಲಿಹಳ್ಳಿ, ಅಸುಂಡಿ, ಕದರಮಂಡಲಗಿ ಗ್ರಾಮಗಳನ್ನೂ ಸೇರಿಸಲಾಗಿದೆ. ಆದರೀಗ ಈ ಮೂರು ಗ್ರಾಮಗಳಲ್ಲಿ ಅಲ್ಲಲ್ಲಿ ಪೈಪ್‌ಲೈನ್ ಅಳವಡಿಸಿಕೊಂಡು ಡಿಪಿಆರ್‌ನಲ್ಲಿ ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚು ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಡಿಪಿಆರ್‌ನಲ್ಲಿ ಇರುವಷ್ಟು ನೀರು ಬಳಸಿಕೊಳ್ಳಲು ಯಾರದ್ದೂ ತಕರಾರು ಇಲ್ಲ, ಆದರೆ, ಹೆಚ್ಚುವರಿ ನೀರು ಬಳಕೆ ಮಾಡಿಕೊಳ್ಳುತ್ತಿರುವ ಪರಿಣಾಮ ಬ್ಯಾಡಗಿ ಪಟ್ಟಣದಲ್ಲಿ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.ಆಗ ಜಿಪಂ ಸಿಇಒ ಅಕ್ಷಯ್ ಶ್ರೀಧರ ಪ್ರತಿಕ್ರಿಯಿಸಿ, ಮೂರು ಗ್ರಾಮಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಬ್ಯಾಡಗಿ ಪುರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದರು. ಸಭೆಯಲ್ಲಿ ವಿಧಾನಸಭೆ ಉಪಾಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ವಿಪ ಮುಖ್ಯಸಚೇತಕ ಸಲೀಂ ಅಹ್ಮದ್, ಗ್ಯಾರಂಟಿ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಯಾಸೀರ್‌ಖಾನ್ ಪಠಾಣ, ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಅಂಶುಕುಮಾರ ಇತರರು ಇದ್ದರು. ಜಿಪಂ ಸಿಇಒ ಅಕ್ಷಯ್ ಶ್ರೀಧರ ನಿರ್ವಹಿಸಿದರು. ಸಭೆಯ ಆರಂಭಕ್ಕೂ ಮುನ್ನ ಮಾಜಿ ಸಿಎಂ ಎಸ್.ಎಂ. ಕೃಷ್ಣ, ಮಾಜಿ ಸಚಿವರಾದ ಮನೋಹರ ತಹಶೀಲ್ದಾರ್ ನಿಧನರಾದ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ವರದಿ ಸಲ್ಲಿಸಿ: ನಾನು ನಡೆಸಿರುವ ಈ ಹಿಂದಿನ ಎರಡೂ ಕೆಡಿಪಿ ಸಭೆಗೆ ಗೈರಾಗಿದ್ದ ಅಧಿಕಾರಿಗಳ ವಿರುದ್ಧ ಏನು ಕ್ರಮಕೈಗೊಂಡಿದ್ದೀರಿ. ಎರಡೂ ಸಭೆಗೆ ಗೈರಾದವರ ಪಟ್ಟಿ ನಮ್ಮ ಬಳಿ ಇದೆ. ಅವರಲ್ಲಿ ಎಷ್ಟು ಜನರಿಗೆ ನೋಟಿಸ್ ಕೊಟ್ಟಿದ್ದೀರಿ, ಇಂದಿನ ಸಭೆಗೆ ಎಷ್ಟು ಜನರು ಗೈರಾಗಿದ್ದಾರೆ ಎಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಅಧಿಕಾರಿಗಳಿಗೆ ಪ್ರಶ್ನಿಸಿದರು. ಆಗ ಜಿಪಂ ಉಪಕಾರ್ಯದರ್ಶಿ ರಂಗಸ್ವಾಮಿ ಪ್ರತಿಕ್ರಿಯಿಸಿ, 119 ಅಧಿಕಾರಿಗಳಿಗೆ ಸಭೆಯ ಸೂಚನಾ ಪತ್ರ ಕಳುಹಿಸಲಾಗಿದೆ. ಅದರಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳು ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಆಗ ಸಚಿವರು, ಗೈರಾದ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಸೂಚಿಸಿದರು. ಅಧಿಕಾರಿಗಳು ಕೆಡಿಪಿ ಸಭೆಯ ಗಂಭೀರತೆ ಅರಿತು ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಬರಬೇಕು. ಅಪೂರ್ಣ ಮಾಹಿತಿ ತರುವುದು ಸರಿಯಲ್ಲ, ಸಭೆಗೂ ಮುನ್ನ ಹೋಮ್‌ವರ್ಕ್ ಮಾಡಿಕೊಂಡು ಬರಬೇಕು. ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಪ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.