ವನ್ಯಜೀವಿ ಬೆಳೆ ಹಾನಿ ಪರಿಹಾರ ನ.30ರೊಳಗೆ ಪಾವತಿ: ಈಶ್ವರ ಖಂಡ್ರೆ ಸೂಚನೆ

| Published : Nov 24 2025, 01:15 AM IST

ವನ್ಯಜೀವಿ ಬೆಳೆ ಹಾನಿ ಪರಿಹಾರ ನ.30ರೊಳಗೆ ಪಾವತಿ: ಈಶ್ವರ ಖಂಡ್ರೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುವನ್ಯಜೀವಿಯಿಂದ ಆಗಿರುವ ಎಲ್ಲ ಬೆಳೆ ಹಾನಿ ಪರಿಹಾರವನ್ನು ಈ ತಿಂಗಳಾಂತ್ಯದೊಳಗೆ ಪಾವತಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

- ಚಿರತೆ ಸೆರೆಗೆ 4 ಹೆಚ್ಚುವರಿ ಬೋನುಗಳನ್ನು ಇಡಲು ಅರಣ್ಯ ಸಚಿವರ ಆದೇಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವನ್ಯಜೀವಿಯಿಂದ ಆಗಿರುವ ಎಲ್ಲ ಬೆಳೆ ಹಾನಿ ಪರಿಹಾರವನ್ನು ಈ ತಿಂಗಳಾಂತ್ಯದೊಳಗೆ ಪಾವತಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಅಜ್ಜಂಪುರದಲ್ಲಿ ಶಿವಮೊಗ್ಗ, ಉಂಬ್ಳೆಬೈಲು ಮತ್ತು ಚಿಕ್ಕಮಗಳೂರು ವಿಭಾಗದ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದ ಅವರು, ಕಾಡು ಪ್ರಾಣಿಗಳು ತೋಟ, ಹೊಲ, ಗದ್ದೆಗೆ ನುಗ್ಗಿ ಬೆಳೆ ನಷ್ಟ ಮಾಡಿದರೆ, ಆದಷ್ಟು ಶೀಘ್ರ ಪರಿಹಾರ ಪಾವತಿಸುವಂತೆ ಇತ್ತೀಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚಿಸಿದರು.ಇತ್ತೀಚೆಗೆ ನವಿಲೇಕಲ್ ಗುಡ್ಡದಲ್ಲಿ 5 ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಸಚಿವರು, ವನ್ಯಜೀವಿಯಿಂದ ಒಂದೇ ಒಂದು ಸಾವು ಸಂಭವಿಸಬಾರದು. ಆದರೆ, ಕೈಮೀರಿ ಇಂತಹ ದುರ್ಘಟನೆಗಳು ನಡೆಯುತ್ತಿವೆ. ಕೂಡಲೇ ಹಾಲಿ ಇರುವ 8 ಬೋನಿನ ಜೊತೆಗೆ ಇನ್ನೂ 4 ಹೆಚ್ಚುವರಿ ಬೋನುಗಳನ್ನಿಟ್ಟು, ನಾಡಿಗೆ ಬರುವ ಚಿರತೆಗಳ ಸೆರೆಗೆ ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

-- ಬಾಕ್ಸ್--ಒತ್ತುವರಿಯಾದ್ರೆ ಆರ್.ಎಫ್.ಗಳೇ ಹೊಣೆ:

2015ರ ನಂತರ ಯಾವುದೇ ಹೊಸ ಅರಣ್ಯ ಒತ್ತುವರಿ ಆಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಉಪಗ್ರಹ ಚಿತ್ರ ಆಧರಿಸಿ ಅರಣ್ಯ ಒತ್ತುವರಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು. ಇಲ್ಲವಾದರೆ ಆಯಾ ವಲಯದ ಅರಣ್ಯಾಧಿಕಾರಿ (ಆರ್.ಎಫ್.ಓ)ಗಳನ್ನೇ ಹೊಣೆ ಮಾಡಲಾಗುವುದು ಎಂದು ಈಶ್ವರ ಖಂಡ್ರೆ ಎಚ್ಚರಿಸಿದರು.ಕಾಳಿಂಗ ಸರ್ಪಗಳು ತೋಟ, ಮನೆಯ ಬಳಿ ಬಂದ ಬಗ್ಗೆ ದೂರು ಬಂದರೆ ಅರಣ್ಯ ಇಲಾಖೆ ಸಿಬ್ಬಂದಿಯೇ ಹಿಡಿಯಬೇಕು. ಇದಕ್ಕಾಗಿ ಮಲೆನಾಡು ಮತ್ತು ಕೊಡಗು ಜಿಲ್ಲೆಯ ಪ್ರತಿ ವಲಯದಲ್ಲಿ ಕನಿಷ್ಠ 5 ಸಿಬ್ಬಂದಿಗೆ ಕಾಳಿಂಗ ಸರ್ಪ ರಕ್ಷಣೆ ತರಬೇತಿ ಕೊಡಿಸಬೇಕು. ಕಾಳಿಂಗ ಸರ್ಪಗಳ ರಕ್ಷಣೆಗೆ ಖಾಸಗಿ ಸಂಸ್ಥೆಗಳ ನೆರವು ಪಡೆಯಬಾರದು ಎಂದು ಅರಣ್ಯ ಸಚಿವರು ತಿಳಿಸಿದರು.

--ಸೆಕ್ಷನ್ 4 ವರದಿ ಸಲ್ಲಿಸಲು ಸೂಚನೆ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 4 ಆಗಿ ಸೆಕ್ಷನ್ 17 ಆಗದ ಎಷ್ಟು ಪ್ರಕರಣ ಇದೆ ಮತ್ತು ಯಾವ ಹಂತದಲ್ಲಿದೆ ಎಂಬ ಬಗ್ಗೆ ಒಂದು ವಾರದೊಳಗೆ ಸಚಿವಾಲಯಕ್ಕೆ ಮಾಹಿತಿ ನೀಡುವಂತೆ ಆದೇಶ ನೀಡಿದರು.ಅಜ್ಜಂಪುರ ತಾಲೂಕಿನಲ್ಲಿ ವೃಕ್ಷೋದ್ಯಾನ ನಿರ್ಮಾಣಕ್ಕೆ ಜಾಗ ಗುರುತಿಸಿ 10 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ತಿಳಿಸಿದರು.ಅರಣ್ಯ ಸಿಬ್ಬಂದಿ ಮತ್ತು ರೈತರ ನಡುವೆ ಸ್ನೇಹಭಾವ ಇರಬೇಕು. ಅನ್ನದಾತರೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಹೆಚ್ಚು ಜನಸ್ನೇಹಿಯಾಗಿ ವರ್ತಿಸಿ, ಅವರ ಕುಂದು ಕೊರತೆ ಆಲಿಸಿ, ಸಾಧ್ಯವಾದಷ್ಟು ಶೀಘ್ರ ಪರಿಹಾರ ಒದಗಿಸಿ. ಹಿರಿಯ ಅಧಿಕಾರಿ ಳು ಕ್ಷೇತ್ರಕ್ಕೆ ಮತ್ತು ವನ್ಯಜೀವಿ ಸಂಘರ್ಷ ಇರುವ ಕಾಡಿನಂಚಿನ ಗ್ರಾಮಗಳಿಗೆ ತೆರಳಿ ಜನಸಂಪರ್ಕ ಸಭೆ ನಡೆಸಿ ಎಂದೂ ಸೂಚಿಸಿದರು.

ಸಭೆಯಲ್ಲಿ ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.23 ಕೆಸಿಕೆಎಂ 4ಅಜ್ಜಂಪುರದಲ್ಲಿ ಶಿವಮೊಗ್ಗ, ಉಂಬ್ಳೆಬೈಲು ಮತ್ತು ಚಿಕ್ಕಮಗಳೂರು ವಿಭಾಗದ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಭಾನುವಾರ ಸಚಿವ ಈಶ್ವರ ಖಂಡ್ರೆ ಅವರು ಸಭೆ ನಡೆಸಿದರು. ಶಾಸಕ ಜಿ.ಎಚ್‌. ಶ್ರೀನಿವಾಸ್‌ ಇದ್ದರು.