ನರೇಗಾ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗವಹಿಸಿ ಕೆಲಸ ನಿರ್ವಹಿಸಿದ್ದು, 2025-26ನೇ ಸಾಲಿನಲ್ಲಿ 4.11 ಕೋಟಿ ರು. ಹಾಗೂ 2026-27ನೇ ಸಾಲಿನಲ್ಲಿ 3.10 ಕೋಟಿ ಸೇರಿ 7.21 ಕೋಟಿ ರು. ಕೂಲಿ ಹಣವನ್ನು ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜೀತ್ ಕುಮಾರ ತಿಳಿಸಿದ್ದಾರೆ.
ಹಾವೇರಿ:ನರೇಗಾ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗವಹಿಸಿ ಕೆಲಸ ನಿರ್ವಹಿಸಿದ್ದು, 2025-26ನೇ ಸಾಲಿನಲ್ಲಿ 4.11 ಕೋಟಿ ರು. ಹಾಗೂ 2026-27ನೇ ಸಾಲಿನಲ್ಲಿ 3.10 ಕೋಟಿ ಸೇರಿ 7.21 ಕೋಟಿ ರು. ಕೂಲಿ ಹಣವನ್ನು ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜೀತ್ ಕುಮಾರ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಅವರು, ಗ್ರಾಮೀಣ ಬಡ ಕುಟುಂಬಗಳ ಜೀವನಮಟ್ಟ ಸುಧಾರಣೆ, ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ಕೂಲಿ ಹಣವನ್ನು ಸರ್ಕಾರದಿಂದ ಬಿಡುಗಡೆಗೊಂಡ ಅನುದಾನದ ಆಧಾರದ ಮೇಲೆ ಯಶಸ್ವಿಯಾಗಿ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ. ಶಾಶ್ವತ ಆಸ್ತಿ ನಿರ್ಮಾಣ:ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಬಡ ಹಾಗೂ ನಿರುದ್ಯೋಗಿ ಕುಟುಂಬಗಳಿಗೆ ವರ್ಷಕ್ಕೆ 100 ದಿನಗಳ ಅಕುಶಲ ಕೂಲಿ ಉದ್ಯೋಗವನ್ನು ಖಾತ್ರಿ ಪಡಿಸುವ ಮಹತ್ವದ ಯೋಜನೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ ಯೋಜನೆಯ ಅನುಷ್ಠಾನ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಕೆರೆ ಅಭಿವೃದ್ಧಿ, ಕಾಲುವೆ ಸ್ವಚ್ಛತೆ, ಮಣ್ಣು ಕಾಮಗಾರಿ, ಗಿಡ ನೆಡುವುದು, ರಸ್ತೆ ಅಭಿವೃದ್ಧಿ, ಜಲ ಸಂರಕ್ಷಣೆ ಸೇರಿದಂತೆ ವಿವಿಧ ಶಾಶ್ವತ ಆಸ್ತಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು, ರೈತ ಕುಟುಂಬಗಳು, ಕೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಕೂಲಿಕಾರರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದು ಯೋಜನೆಯ ಪ್ರಮುಖ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ.ಉದ್ಯೋಗಕ್ಕೆ ಬೇಡಿಕೆ ಸಲ್ಲಿಸಿ:ಉದ್ಯೋಗದ ಅವಶ್ಯಕತೆ ಇರುವ ಗ್ರಾಮೀಣ ಕುಟುಂಬಗಳು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ನಮೂನೆ-6 ಸಲ್ಲಿಸಿ ಉದ್ಯೋಗಕ್ಕೆ ಬೇಡಿಕೆ ನೀಡಬೇಕು. ಬೇಡಿಕೆ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಅವರ ಗ್ರಾಮದಲ್ಲಿಯೇ ಅಕುಶಲ ಕೂಲಿ ಕೆಲಸ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲೇ ಆರನೇ ಸ್ಥಾನ: 2026-27ನೇ ಸಾಲಿಗೆ ಹಾವೇರಿ ಜಿಲ್ಲೆಯು ಹೆಚ್ಚು ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲಿಯೇ 6ನೇ ಸ್ಥಾನದಲ್ಲಿದ್ದು, ಗ್ರಾಮೀಣ ಭಾಗದ ಅಕುಶಲ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದೆ ಹಾಗೂ ಒಲಸೆ ಹೋಗದಂತೆ ಗ್ರಾಮಸ್ಥರಿಗೆ ಕೆಲಸ ನೀಡಲಾಗುವುದು. ಕೂಲಿಕಾರರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಪಾವತಿ ಆಗುವಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಯೋಜನೆಯ ಪಾರದರ್ಶಕ ಅನುಷ್ಠಾನಕ್ಕೆ ಜಿಲ್ಲಾಡಳಿತ ಬದ್ಧವಾಗಿದೆ. ಜೊತೆಗೆ ನರೇಗಾ ಯೋಜನೆಯಡಿ ಹೆಚ್ಚು ಹೆಚ್ಚು ಜನರು ಉದ್ಯೋಗ ಪಡೆದು ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಹಾವೇರಿ ಜಿಪಂ ಸಿಇಒ ದಲ್ಜೀತ್ ಕುಮಾರ ಹೇಳಿದರು.