ಪಿಡಿಒ ಮೇಲೆ ಗ್ರಾಮ ಪಂಚಾಯತ್‌ ಸದಸ್ಯನಿಂದ ಹಲ್ಲೆ

| Published : Apr 01 2025, 12:50 AM IST

ಸಾರಾಂಶ

ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಏಕಾಏಕಿ ಗ್ರಾಮ ಪಂಚಾಯಿತಿ ಸದಸ್ಯ ಪಿಡಿಒ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಏನೇ ಸಮಸ್ಯೆ ಇದ್ದರೂ ಕುಳಿತು, ಅಥವಾ ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವುದನ್ನು ಬಿಟ್ಟು ನೌಕರನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್‌ ಆಗಿದ್ದರೂ ಪೊಲೀಸರು ಹಲ್ಲೆಕೋರನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಸಾತೇನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಬಿ.ವಿ.ಅರುಣ್ ಕುಮಾರ್ ಎಂಬುವರ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ವಿ.ಎನ್.ಯೋಗೇಶ್ ಎಂಬಾತ ಹಲ್ಲೆ ಮಾಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿದರೂ ಕ್ರಮಕ್ಕೆ ಮುಂದಾಗದಿರುವುದನ್ನು ಖಂಡಿಸಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳು ಮತ್ತು ಪಂಚಾಯಿತಿ ನೌಕರರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಏಕಾಏಕಿ ಗ್ರಾಮ ಪಂಚಾಯಿತಿ ಸದಸ್ಯ ಪಿಡಿಒ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಏನೇ ಸಮಸ್ಯೆ ಇದ್ದರೂ ಕುಳಿತು, ಅಥವಾ ಮೇಲಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವುದನ್ನು ಬಿಟ್ಟು ನೌಕರನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್‌ ಆಗಿದ್ದರೂ ಪೊಲೀಸರು ಹಲ್ಲೆಕೋರನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲ್ಲೆಗೊಳಗಾದ ಪಿಡಿಒ ಬಿ.ವಿ.ಅರುಣ್ ಕುಮಾರ್ ಮಾತನಾಡಿ, ಮಾ. ೨೫ರಂದು ಮಧ್ಯಾಹ್ನ ೧ ಗಂಟೆ ಸುಮಾರಿಗೆ ಪಂಚಾಯತಿ ಕಚೇರಿಯಲ್ಲಿ ನಾನು ಕರ್ತವ್ಯ ನಿರ್ವಹಿಸುವ ವೇಳೆ ಏಕಾಏಕಿ ಬಂದ ಸದಸ್ಯ ವಾರನಹಳ್ಳಿ ಗ್ರಾಮದ ವಿ.ಎನ್. ಯೋಗೇಶ್ ಬಂದು ತಲೆಗೆ ಮತ್ತು ಬೆನ್ನಿಗೆ ಬಲವಾಗಿ ಕೈಯಿಂದ ಹೊಡೆದು ಕೆಳಗೆ ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು, ಈ ವೇಳೆ ಸ್ಥಳದಲ್ಲಿದ್ದ ಕೆಲವರು ಯೋಗೇಶ್‌ನನ್ನು ತಡೆದು ಹೆಚ್ಚಿನ ಅನಾಹುತ ತಡೆದರು. ಇಷ್ಟಕ್ಕೆ ತೃಪ್ತಿಯಾಗದ ಯೋಗೇಶ್ ಹೊರಗೆ ಹೋಗಿ ತನ್ನ ಕಾರಿನಿಂದ ಟೈರ್ ಬಿಚ್ಚುವ ಜಾಕ್ ರಾಡ್ ತೆಗೆದುಕೊಂಡು ಬಂದು ಹಲ್ಲೆಗೆ ಮುಂದಾದರು. ಆಗ ಅಲ್ಲೇ ಇದ್ದ ಕೆಲ ಸದಸ್ಯರು ಮತ್ತು ನೌಕರರು ಯೋಗೇಶ್‌ನನ್ನು ತಡೆದು ನನ್ನ ಪ್ರಾಣ ಉಳಿಸಿದ್ದಾರೆ. ಅಕ್ಕಪಕ್ಕದಲ್ಲಿ ಯಾರೂ ಇಲ್ಲದಿದ್ದರೇ ನನ್ನ ಪ್ರಾಣಕ್ಕೆ ಹಾನಿಯಾಗುತ್ತಿತ್ತು. ಈ ಕುರಿತಾಗಿ ಮಾರನೇ ದಿನ ಮಾ.೨೬ರಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಪೊಲೀಸರು ಕ್ರಮಕ್ಕೆ ಮುಂದಾಗಿಲ್ಲವೆಂದು ಆರೋಪಿಸಿದರು.

ಮಾಜಿ ಸೈನಿಕ, ಹಾಲಿ ಪಿಡಿಓ ಬಸವರಾಜ್ ಮಾತನಾಡಿ, ಸೈನಿಕನಾಗಿ ದೇಶ ಸೇವೆ ಮಾಡಿ, ಇದೀಗ ಗ್ರಾಮಗಳ ಅಭಿವೃದ್ಧಿ ಆಸೆಯಿಂದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರನ ಮೇಲೆ ಮಾಡಿರುವ ಹಲ್ಲೆ ಖಂಡನೀಯ, ಇದಕ್ಕಾಗಿ ಜಿಲ್ಲಾ ಮಾಜಿ ಸೈನಿಕರ ಸಂಘ, ಸರ್ಕಾರಿ ನೌಕರರ ಸಂಘ, ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ನೌಕರರ ಸಂಘ ಘಟನೆಯನ್ನು ಖಂಡಿಸಿ, ಹಲ್ಲೆ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್ ಮಾತನಾಡಿ, ಘಟನೆ ಸಂಬಂಧ ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದರು.