ಪಿಡಿಒ ವರ್ಗಾವಣೆ, ಅಧ್ಯಕ್ಷರ ರಾಜೀನಾಮೆ: ಮಾದಾಪುರ ಅಭಿವೃದ್ಧಿ ಹಿನ್ನಡೆ

| Published : Nov 21 2024, 01:03 AM IST

ಸಾರಾಂಶ

ಮಾದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜಿನಾಮೆ ಸಲ್ಲಿಸಿದ್ದು, ಕಳೆದ ಐದು ವರ್ಷಗಳ ಆಡಳಿತದಲ್ಲಿ 4 ಮಂದಿ ಅಧ್ಯಕ್ಷರು ಆಡಳಿತ ನಡೆಸಿದ್ದಾರೆ. ಆಗಾಗ್ಗೆ ಅಧ್ಯಕ್ಷರ ರಾಜಿನಾಮೆ, ಪಿಡಿಒಗಳ ವರ್ಗಾವಣೆಯಿಂದ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮಾದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜಿನಾಮೆ ಸಲ್ಲಿಸಿದ್ದು, ಕಳೆದ ಐದು ವರ್ಷಗಳ ಆಡಳಿತದಲ್ಲಿ 4 ಮಂದಿ ಅಧ್ಯಕ್ಷರು ಆಡಳಿತ ನಡೆಸಿದ್ದಾರೆ. ಆಗಾಗ್ಗೆ ಅಧ್ಯಕ್ಷರ ರಾಜಿನಾಮೆ, ಪಿಡಿಒಗಳ ವರ್ಗಾವಣೆಯಿಂದ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ.

ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ 16 ಮಂದಿ ಸದಸ್ಯರ ಬಲವಿದ್ದು, 13 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಓರ್ವ ಕಾಂಗ್ರೆಸ್ ಬೆಂಬಲಿತರು, ಸಿಪಿಎಂ ಬೆಂಬಲಿತ ಓರ್ವರು, 1 ಪಕ್ಷೇತರ ಸದಸ್ಯರಿದ್ದಾರೆ.

ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಆ್ಯಕ್ಟ್‌ ಪ್ರಕಾರ 5 ವರ್ಷದ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಮೀಸಲಾತಿ ಅನ್ವಯ ಎರಡೂವರೆ ವರ್ಷಕ್ಕೊಮ್ಮೆ ಪಂಚಾಯಿತಿ ಅಧ್ಯಕ್ಷರ ಆಯ್ಕೆ ನಡೆಯಬೇಕಾಗಿದೆ. ಆದರೆ ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಎರಡೂವರೆ ವರ್ಷದ ಮೊದಲ ಹಂತದ ಮಹಿಳಾ ಕೋಟಾದಡಿಯಲ್ಲಿ ಕೆ.ಸಿ.ಶೀಲಾ, ನಿರೂಪ ಹಾಗೂ ಮಾನಸ ಅಧಿಕಾರ ಹಂಚಿಕೆ ಮಾಡಿಕೊಂಡು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡರು. ಎರಡನೇ ಅವಧಿಯಲ್ಲಿ ಎರಡೂವರೆ ವರ್ಷದ ಅವಧಿಯಲ್ಲಿ ಸಾಮಾನ್ಯ ಮೀಸಲು ಕ್ಷೇತ್ರದಿಂದ ಮನು ಬಿದ್ದಪ್ಪ ಅಧ್ಯಕ್ಷರಾಗಿ ಆಯ್ಕೆಯಾದರು. ಇದೀಗ ಇನ್ನು 1 ವರ್ಷದ ಅಧಿಕಾರ ಅವಧಿ ಇರುವಾಗಲೇ ಅವರು ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗೆ ರಾಜಿನಾಮೆ ನೀಡಿದ್ದಾರೆ.

ಪದೇ ಪದೇ ವರ್ಗಾವಣೆ:

ಇನ್ನೊಂದು ವಿಶೇಷ ಅಂದರೆ ಮಾದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಆಗಾಗ್ಗೆ ಬದಲಿಸುತ್ತಾ ಬರಲಾಗಿದ್ದು, ಸುಮಾರು 5 ವರ್ಷದ ಪ್ರಥಮ ಹಂತದಲ್ಲಿ ಪಿಡಿಒ ಆಗಿ ಪೂರ್ಣಕುಮಾರ್, ಅನಂತರ ಸುಮೇಶ್, ಸುರೇಶ, ಪೂರ್ಣಿಮ, ಬಾಲಕೃಷ್ಣ ರೈ ಅವರನ್ನು ಅತ್ಯಲ್ಪ ಅವಧಿಯಲ್ಲೇ ವರ್ಗಾಯಿಸಲಾಗಿದೆ.

ಇದೀಗ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧಿಕಾರಿ ಗೂಳಪ್ಪಕೂತಿನ ಅವರನ್ನು ಪ್ರಭಾರಿಯಾಗಿ ನೇಮಿಸಲಾಗಿದೆ.

ಒಂದೆಂಡೆ ಅಧ್ಯಕ್ಷರ ರಾಜೀನಾಮೆ, ಮತ್ತೊಂದೆಡೆ ಪಿಡಿಒಗಳ ವರ್ಗಾವಣೆಯಿಂದ ಆಡಳಿತದ ವೇಗಕ್ಕೆ ಗ್ರಹಣ ಹಿಡಿದಿದ್ದು, ಜನಸಾಮಾನ್ಯರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಗ್ರಾಮಸ್ಥರಾದ ಚಂದ್ರ, ಬೆಳ್ಯಪ್ಪ ಹಾಗೂ ಗಣೇಶ ತಿಳಿಸಿದ್ದಾರೆ.

ಪಟ್ಟಣ ಬೆಳವಣಿಗೆಗೆ ಪೂರಕವಲ್ಲ:

ಬೆಳೆಯುತ್ತಿರುವ ಪಟ್ಟಣ ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುವಾಗ ರಾಜ್ಯ ಹೆದ್ದಾರಿ ಮಧ್ಯಭಾಗದಲ್ಲಿ ಸಿಗುತ್ತಿರುವ ಮಾದಾಪುರ ಪಟ್ಟಣ ಬೆಳೆಯುತ್ತಿರುವ ಪಟ್ಟಣವಾಗಿದೆ. ಆನೇಕ ನೂತನ ವಾಣಿಜ್ಯ ಕಟ್ಟಡಗಳು ತಲೆಯಿತ್ತಿದ್ದು, ಕೆಲವು ಪ್ರವಾಸಿ ತಾಣಗಳಿಗೆ ಈ ಭಾಗದಿಂದಲೇ ತೆರಳಬಹುದಾಗಿದ್ದು, ನಾಡ ತರಕಾರಿಗಳಿಗೆ ಹೆಸರುವಾಸಿಯಾದ ಊರಾಗಿದೆ.

ದೂರದ ಊರಿನಿಂದ ನಾಡು ತರಕಾರಿಗೆ ಶನಿವಾರ ಸಂತೆ ದಿನ ಗ್ರಾಹಕರು ಮುಗಿದು ಬೀಳುತ್ತಾರೆ. ಸೂರ್ಲಬ್ಬಿ, ಕುಂಬಾರಗಡಿಕೆ, ಕಿಕ್ಕರಳ್ಳಿ, ಗರ್ವಾಲೆ ಭಾಗದ ರೈತರು ತರಕಾರಿ ಹಸಿಮೆಣಸು ಬೆಳಸಿ ಇಲ್ಲಿಗೆ ತಂದು ಮಾರುತ್ತಾರೆ.

ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ ರೈತರು ಬಾಡಿಗೆ ವಾಹನದಲ್ಲಿ ತರಕಾರಿ ತಂದು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಾಣಬಹುದಾಗಿದೆ.

ಆದರೆ ಪಂಚಾಯಿತಿ ಆಡಳಿತದ ಒಗ್ಗಟ್ಟಿಲ್ಲದೆ ಜನ ಸಾಮಾನ್ಯರ ಪಾಡು ಆಯೋಮಯವಾಗಿದೆ.

.........................

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿವೆ. ಮಾದಾಪುರ ಭಾಗದ ನಿವಾಸಿಗಳಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಇದೀಗ ತಾತ್ಕಾಲಿಕವಾಗಿ ವಾರದಲ್ಲಿ 3 ದಿನಗಳ ಕರ್ತವ್ಯಕ್ಕೆ ಅಭಿವೃದ್ಧಿ ಅಧಿಕಾರಿ ನಿಯೋಜಿಸಲಾಗಿದೆ. ತಾಲೂಕು ಆಡಳಿತದ ವತಿಯಿಂದಲ್ಲೂ ಈ ಗ್ರಾಮ ಪಂಚಾಯಿತಿಯ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪೂರ್ಣ ಅವಧಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಿಸಲಾಗುವುದು.

-ಪರಮೇಶ್‌ ಕುಮಾರ್‌ ವಿ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ.