ಪಿಡಿಒಗಳು ಗುಣಮಟ್ಟದ ಸೇವೆ ನೀಡಿ: ಜಿಪಂ ಸಿಇಒ

| Published : Oct 30 2025, 01:02 AM IST

ಸಾರಾಂಶ

ಇಲಾಖೆಗಳಲ್ಲಿ ಈಗಾಗಲೇ ಅನುಮೋದನೆಗೊಂಡಿರುವ ಎಲ್ಲಾ ಕಾಮಾಗಾರಿಗಳನ್ನು ಅಧಿಕಾರಿಗಳು ಗುಣಮಟ್ಟದ ಕೆಲಸಗಳನ್ನು ಅನುಷ್ಟಾನ ಮಾಡಬೇಕು.

ಕನ್ನಡಪ್ರಭ ವಾರ್ತೆ ಶಿರಾ

ಅನುಷ್ಟಾನ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ತಾಲೂಕಿನಲ್ಲಿ ಅನುಷ್ಟಾನ ಮಾಡಬೇಕು ಹಾಗೂ ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಮೂಲಕ ಗುಣಮಟ್ಟದ ಸೇವೆ ನೀಡಿ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ಅವರು ಸೂಚನೆ ನೀಡಿದರು.

ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅನುಷ್ಟಾನ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಜಲ ಜೀವನ್ ಮಿಷನ್, ನರೇಗಾ ಯೋಜನೆ, ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ಅನುದಾನ, ಲಿಂಕ್ ಡಾಕ್ಯುಮೆಂಟ್, 3051 ಮತ್ತು 5054 ನಿರ್ವಹಣಾ ಅನುದಾನ, ತಾಲೂಕು ಪಂಚಾಯಿತಿ ಅನಿಬಂಧಿತ ಅನುದಾನ ಸೇರಿದಂತೆ ಎಲ್ಲಾ ಅನುಷ್ಟಾನ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವಿಷಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಇಲಾಖೆಗಳಲ್ಲಿ ಈಗಾಗಲೇ ಅನುಮೋದನೆಗೊಂಡಿರುವ ಎಲ್ಲಾ ಕಾಮಾಗಾರಿಗಳನ್ನು ಅಧಿಕಾರಿಗಳು ಗುಣಮಟ್ಟದ ಕೆಲಸಗಳನ್ನು ಅನುಷ್ಟಾನ ಮಾಡಬೇಕು ಹಾಗೂ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ, ಅಂಗನವಾಡಿ, ಶಾಲೆ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ನಿರ್ಮಿಸುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪ್ರಗತಿಯಲ್ಲಿರುವ ಅಂಗನವಾಡಿ ಕಟ್ಟಡಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿದ ಜಿ.ಪಂ. ಸಿಇಓ ಅವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯವರು ಒಂದು ತಿಂಗಳೊಳಗೆ ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಕೃಷಿ ಇಲಾಖೆ , ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಹೊಸ-ಹೊಸ ರೈತರಿಗೆ ಸವಲತ್ತುಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕು. ವಿತರಣಾ ಪರಿಕರಗಳು, ಫಲಾನುಭವಿಗಳ ಆಯ್ಕೆ ವಿತರಣಾ ವ್ಯವಸ್ಥೆ ಪಾರದರ್ಶಕ ವಾಗಿದ್ದು, ಜನಸ್ನೇಹಿಯಾಗಿರಬೇಕು ಎಂದರಲ್ಲದೆ ತಾಲೂಕಿನ 42 ಗ್ರಾಮ ಪಂಚಾಯಿತಿಗಳಲ್ಲೂ ಫಲಾನುಭವಿಗಳು ಇರಬೇಕು ಹಾಗೂ ಜನವರಿ ತಿಂಗಳೊಳಗೆ ಸವಲತ್ತು ವಿತರಣೆ ಮುಗಿಯುವಂತೆ ಯೋಜನೆ ರೂಪಿಸಿ ಕ್ರಮವಹಿಸುವಂತೆ ಸೂಚನೆ ನೀಡಿದರು.

ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 6877 ಕಾಮಗಾರಿಗಳು ಅನುಮೋದನೆಗೊಂಡಿವೆ. ಪ್ರಸಕ್ತ ವರ್ಷದಲ್ಲಿ ಪದವಿ ಪೂರ್ವ ಕಾಲೇಜುಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಎಲ್ಲಾ ಅನುಮೋದನೆಗೊಂಡಿರುವ ಕಾಮಗಾರಿಗಳು ಶುರುವಾಗಬೇಕು. ಜಾತ್ರಾ ಸ್ಥಳಗಳು, ದೇವಾಲಯಗಳ ಬಳಿ ಹಾಗೂ ಎಲ್ಲಿ ಅವಶ್ಯಕತೆ ಇದೆ ಅಂತಹ ಕಡೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಆರ್., ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅನುಷ್ಟಾನ ಇಲಾಖೆಯ ಅಧಿಕಾರಿಗಳು ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದರು.

ಸಾರ್ವಜನಿಕ ಆಸ್ಪತ್ರೆ ಭೇಟಿ:

ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಔಷಧಿಗಳ ಸಂಗ್ರಹ ಕೊಠಡಿ, ಪ್ರಯೋಗಾಲಯ, ಹೆರಿಗೆ ಕೊಠಡಿ, ಆಸ್ಪತ್ರೆಯ ಆವರಣ ಸ್ವಚ್ಛತೆ, ಸಿಬ್ಬಂದಿ ಹಾಜರಾತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದು ವೈದ್ಯರ ಆಧ್ಯ ಕರ್ತವ್ಯ. ಆದ್ದರಿಂದ ವ್ಯವಸ್ಥಿತ ರೀತಿಯಲ್ಲಿ ಆರೋಗ್ಯ ಸೇವೆ ಒದಗಿಸುವಂತೆ ಸೂಚನೆ ನೀಡಿದರು. ನಂತರ ಭುವನಹಳ್ಳಿ ಗ್ರಾಮ ಪಂಚಾಯಿತಿ ಅಂತಾಪುರ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಟಾನಗೊಂಡಿರುವ ಮನೆ-ಮನೆ ಗಂಗೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ, ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕರೊಟ್ಟಿಗೆ ಸಂವಹನ ನೆಡೆಸಿದರು.

ಹುಯಿಲ್ ದೊರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, ಪ್ರಗತಿಯಲ್ಲಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದರು ಹಾಗೂ ಕಿಲಾರದಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪಂಚಾಯಿತಿ ರಾಜ್ ಇಂಜಿನಿಯರಿಂಗ್ ಇಲಾಖೆಯಡಿ ಪ್ರಗತಿಯಲ್ಲಿರುವ ಶಾಲಾ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು.

೨೯ಶಿರಾ೧: ಶಿರಾ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿ.ಪಂ. ಸಿಇಓ ಪ್ರಭು ಜಿ ಅವರು ತಾಲೂಕಿನ ಅನುಷ್ಟಾನ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು. ತಾ.ಪಂ. ಇಓ ಹರೀಶ್ ಸೇರಿದಂತೆ ಹಲವರು ಹಾಜರಿದ್ದರು.

೨೯ಶಿರಾ೨: ಜಿ.ಪಂ. ಸಿಇಓ ಪ್ರಭು.ಜಿ ಅವರು ತಾಲೂಕಿನ ಹುಯಿಲ್ದೊರೆ ಗ್ರಾ.ಪಂ. ವ್ಯಾಪ್ತಿಯ ಕಿಲಾರದಹಳ್ಳಿ ಗ್ರಾಮದಲ್ಲಿ ಸರಕಾರಿ ಶಾಲಾ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದರು.

೨೯ಶಿರಾ೩: ಜಿ.ಪಂ. ಸಿಇಓ ಪ್ರಭು.ಜಿ ಅವರು ತಾಲೂಕಿನ ಭುವನಹಳ್ಳಿ ಗ್ರಾಮ ಪಂಚಾಯಿತಿ ಅಂತಾಪುರ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಟಾನಗೊಂಡಿರುವ ಮನೆ-ಮನೆ ಗಂಗೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು.