ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸೂಚನೆಯ ಮೇರೆಗೆ 21ರ ಸೋಮವಾರದಿಂದ ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿಯನ್ನು ಆರಂಭಿಸಲಾಗುತ್ತಿದೆ ಎಂದು ತಾಲೂಕು ಪಿಡಿಒಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸೂಚನೆಯ ಮೇರೆಗೆ 21ರ ಸೋಮವಾರದಿಂದ ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿಯನ್ನು ಆರಂಭಿಸಲಾಗುತ್ತಿದೆ ಎಂದು ತಾಲೂಕು ಪಿಡಿಒಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.

ಈ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಿಡಿಒಗಳ ಸಮಸ್ಯೆಗಳನ್ನು ಕುರಿತು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ ಸಹ ಇದುವರೆಗೂ ಸರ್ಕಾರ ಸ್ಪಂದಿಸಿಲ್ಲ. ಆದ್ದರಿಂದ ನಮ್ಮ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಲಾಗಿದೆ.

ಈ ಎಲ್ಲಾ ಸಮಸ್ಯೆಗಳು ಇನ್ನೂ ಬಗೆಹರಿಯದಿರುವ ಕಾರಣಕ್ಕೆ ಸೆ 21 ರ ಸೋಮವಾರದಿಂದ 23 ರವರೆಗೆ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಅಸಹಕಾರ ಚಳುವಳಿ ನಡೆಯಲಿದೆ. ಈ ವೇಳೆಯೊಳಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ 24ರ ನಂತರ ಬೆಂಗಳೂರಿನ ಪ್ರೀಡಮ್ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿ ಚಳುವಳಿ ನಡೆಯಲಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಈ ಅಸಹಕಾರ ಚಳುವಳಿಯ ವೇಳೆ ಗ್ರಾಮ ಪಂಚಾಯಿತಿಗಳ ಅತ್ಯಗತ್ಯ ಮೂಲಭೂತ ಸೇವೆಗಳಾದ ಕುಡಿಯುವ ನೀರು ಪೂರೈಕೆ, ಬೀದಿ ದೀಪಗಳ ನಿರ್ವಹಣೆ, ನೈರ್ಮಲ್ಯ ಸೇವೆಗಳು ಎಂದಿನಂತೆ ಮುಂದುವರೆಯುತ್ತವೆ. ಆದರೆ ಯೋಜನೆಗಳು, ತಂತ್ರಾಂಶಗಳು, ಆಡಳಿತಾತ್ಮಕ ಕಾರ್ಯಗಳು, ಹೆಚ್ಚುವರಿ ಜವಾಬ್ದಾರಿಗಳ ನಿರ್ವಹಣೆ ಸ್ಥಗಿತಗೊಳ್ಳಲಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅನಂತ್ ರಾಜ್, ಪಿಡಿಒ ಗಳು ಅಸಹಕಾರ ಚಳವಳಿ ಕುರಿತು ಮಾಹಿತಿ ನೀಡಿದ್ದಾರೆ. ಇವರ ಗೈರು ಹಾಜರಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿರುವ ಕಾರ್ಯದರ್ಶಿಗಳು, ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ಹಲವರು ಅವರ ಕಾರ್ಯವನ್ನು ನಿರ್ವಹಿಸುವರು. ಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.