ಸಾರಾಂಶ
ವಿಶೇಷ ವರದಿಕನ್ನಡಪ್ರಭ ವಾರ್ತೆ ಮಂಡ್ಯ
ಕಾಲ ಕಾಲಕ್ಕೆ ವರ್ಗಾವಣೆಯಾಗುವ ಪಿಡಿಒ (ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ)ಗಳಿಗೆ ಸರಿಯಾಗಿ ಹುದ್ದೆ ತೋರಿಸದಿರುವುದು, ಕೆಲವೊಮ್ಮೆ ಹುದ್ದೆ ತೋರಿಸಿದರೂ ಸಕಾಲದಲ್ಲಿ ಮೂವ್‌ಮೆಂಟ್ ಆರ್ಡರ್ ಜಾರಿಗೊಳಿಸದಿರುವುದರಿಂದ ಪಿಡಿಒಗಳು ಖಾಲಿ ಕೂರುವಂತಾಗಿದೆ.ಖಾಲಿ ಇರುವ ಪಂಚಾಯ್ತಿಗಳ ಹೆಚ್ಚುವರಿ ಜವಾಬ್ದಾರಿಗಳನ್ನು ಕೆಲ ಪಿಡಿಒಗಳು ಹೊತ್ತಿದ್ದಾರೆ. ಇದರಿಂದ ಪಂಚಾಯಿತಿ ಕೆಲಸ-ಕಾರ್ಯಗಳಿಗೆ ಹಿನ್ನಡೆ ಉಂಟಾಗಿದ್ದು ಇದಕ್ಕೆ ಪಂಚಾಯ್ತಿಯ ಮೇಲಧಿಕಾರಿಗಳೇ ಪ್ರಮುಖ ಕಾರಣ ಎಂಬ ಆರೋಪ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.
ಮಂಡ್ಯದ ಕಂಬದಹಳ್ಳಿ, ಸಾತನೂರು, ಹೊಳಲು ಸೇರಿದ ಅನೇಕ ಗ್ರಾಪಂಗಳ ಪಿಡಿಒ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳ ಹೆಚ್ಚುವರಿ ಜವಾಬ್ದಾರಿಯನ್ನು ಬೇರೆ ಗ್ರಾಪಂ ಪಿಡಿಒಗಳಿಗೆ ವಹಿಸಲಾಗಿದೆ. ಆದರೆ, ಕೆಲವು ಪಂಚಾಯ್ತಿಗಳಿಗೆ ರಾಜ್ಯ ಸರ್ಕಾರ ಪಿಡಿಒಗಳನ್ನು ನೇಮಕ ಮಾಡದೆ ಖಾಲಿ ಕೂರಿಸಿದ್ದರೆ. ಇನ್ನು ಕೆಲ ಪಂಚಾಯ್ತಿಗಳಿಗೆ ಪಿಡಿಒಗಳನ್ನು ನೇಮಕ ಮಾಡಿದ್ದರೂ ಮೂವ್‌ಮೆಂಟ್ ಆರ್ಡರ್ ಜಾರಿ ಮಾಡಿದ್ದರೂ ಆದೇಶ ನೀಡುವುದಕ್ಕೆ ಮೇಲ್ಮಟ್ಟದ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.ಸಾತನೂರು ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ನೇಮಕಗೊಂಡು ನಾಲ್ಕು ವರ್ಷವಾಗದಿದ್ದರೂ ವರ್ಗಾವಣೆ ಮಾಡಿದ್ದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಆ ನಂತರದಲ್ಲಿ ಕಳೆದ ತಿಂಗಳು ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಅಲ್ಲಿಗೆ ಪಿಡಿಒ ಹುದ್ದೆ ಖಾಲಿ ಇದ್ದರೂ ಖಾಲಿ ಇರುವವರನ್ನು ನೇಮಕ ಮಾಡಿದ್ದರೂ ಆದೇಶ ನೀಡದೆ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗಾಗಲೇ ಖಾಲಿ ಕುಳಿತಿರುವ ಕೆಲ ಪಿಡಿಒಗಳು ಹುದ್ದೆಯನ್ನು ತೋರಿಸದ ಹಿನ್ನೆಲೆಯಲ್ಲಿ ಒಂದು ತಿಂಗಳು ಕಾಲ ಕಳೆದಿದ್ದಾರೆ. ಈಗ ಹುದ್ದೆ ತೋರಿಸಿದ್ದರೂ ಮೂವ್‌ಮೆಂಟ್ ಆರ್ಡರ್ ಕೈಗೆ ಸಿಗದಿರುವುದು ಅವರನ್ನು ಇನ್ನಷ್ಟು ಪೇಚಿಗೆ ಸಿಲುಕಿಸಿದೆ. ಒಮ್ಮೆ ಮೂವ್‌ಮೆಂಟ್ ಆರ್ಡರ್ ಜಾರಿಯಾಗಿದ್ದರೂ ಕೆಲವು ಅಧಿಕಾರಿಗಳು ಯಾವುದೋ ಪ್ರಭಾವಕ್ಕೆ ಮಣಿದು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ.ಪಂಚಾಯ್ತಿ ಮಟ್ಟದ ಕೆಲವು ಪಿಡಿಒಗಳು ರಾಜಕೀಯ ಪ್ರಭಾವವನ್ನು ಹೊಂದಿದ್ದು, ತಮಗೆ ಬೇಕಾದ ಪಂಚಾಯ್ತಿಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಅಥವಾ ಗಂಡ-ಹೆಂಡತಿ ಇಬ್ಬರೂ ಪಿಡಿಒಗಳಾಗಿದ್ದರೆ ಸಮೀಪದ ಸ್ಥಳಗಳಿಗೆ ಹೆಂಡತಿಯನ್ನು ವರ್ಗಾವಣೆ ಮಾಡಿಸಿಕೊಳ್ಳುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಖಾಲಿ ಕುಳಿತಿರುವ ಪಿಡಿಒಗಳಿಗೆ ಜಾರಿಯಾಗಿರುವ ಆದೇಶವನ್ನು ತಡೆ ಹಿಡಿದಿದ್ದಾರೆಯೇ ಎಂಬ ಬಗ್ಗೆಯೂ ಶಂಕೆ ವ್ಯಕ್ತವಾಗುತ್ತಿದೆ.
ಗ್ರಾಪಂಗಳಲ್ಲಿ ಸಾರ್ವಜನಿಕರ ಕೆಲಸ-ಕಾರ್ಯಗಳ ಒತ್ತಡ ಹೆಚ್ಚಾಗಿರುತ್ತದೆ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಇಲ್ಲದಿದ್ದರೆ ಪ್ರತಿಯೊಂದು ಕೆಲಸಗಳು ವಿಳಂಬವಾಗುತ್ತವೆ. ಸರ್ಕಾರದ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಜಾರಿಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಜನರು, ರೈತರ ಪಂಚಾಯ್ತಿ ಮಟ್ಟದ ಕೆಲಸಗಳು ಸುಗಮವಾಗಿ ನಡೆಯುವುದಿಲ್ಲ. ಇದರ ನಡುವೆಯೂ ಖಾಲಿ ಇರುವ ಪಿಡಿಒಗಳಿಗೆ ಆದೇಶ ಜಾರಿ ಮಾಡದಿರುವುದು ಅಧಿಕಾರಿಗಳ ಅಭಿವೃದ್ಧಿ ವಿರೋಧಿ ನಡೆಗೆ ಸಾಕ್ಷಿಯಾಗಿದೆ ಎಂಬ ಆರೋಪಗಳು ಜನಮಾನಸದಲ್ಲಿ ಕೇಳಿಬರುತ್ತಿವೆ.ಇದೀಗ ಪಂಚಾಯ್ತಿ ಮಟ್ಟದಲ್ಲಿ ಪೌತಿ ಖಾತೆ ಆಂದೋಲನಗಳು ನಡೆಯುತ್ತಿವೆ. ಪಿಡಿಒಗಳು ಪಂಚಾಯ್ತಿ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ ಆದೇಶವನ್ನು ಶೀಘ್ರಗತಿಯಲ್ಲಿ ಜಾರಿ ಮಾಡುವುದರೊಂದಿಗೆ ಖಾಲಿ ಇರುವ ಪಿಡಿಒಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿ, ಹೆಚ್ಚುವರಿ ಕಾರ್ಯ ಭಾರದಲ್ಲಿರುವವರನ್ನು ಬಿಡುಗಡೆ ಮಾಡಿ ಪಂಚಾಯ್ತಿ ಕೆಲಸಗಳು ಸುಗಮವಾಗಿ ನಡೆಯುವುದಕ್ಕೆ ಅನುವು ಮಾಡಿಕೊಡಬೇಕಾದ ಮೇಲಧಿಕಾರಿಗಳೇ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.ಜಿಲ್ಲೆಯಲ್ಲಿ ಖಾಲಿ ಇರುವ ಪಂಚಾಯ್ತಿಗಳಿಗೆ ಜಿಲ್ಲಾ ಪಂಚಾಯ್ತಿಯಿಂದ ಮೂವ್‌ಮೆಂಟ್ ಆರ್ಡರ್ ರಿಲೀಸ್ ಆಗಿಲ್ಲ. ಆದೇಶ ಬಿಡುಗಡೆಯಾದ ಕೂಡಲೇ ಖಾಲಿ ಇರುವ ಪಂಚಾಯ್ತಿಗಳಿಗೆ ನೇಮಕಗೊಂಡಿರುವ ಪಿಡಿಒಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುವುದು.- ವೀಣಾ. ಕಾರ್ಯನಿರ್ವಹಣಾಧಿಕಾರಿ, ಮಂಡ್ಯ ತಾಪಂ