ಧರ್ಮದ ಮಾರ್ಗದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ: ಡಾ.ಮಾದೇಶ್ ಗುರೂಜಿ

| Published : Oct 01 2024, 01:21 AM IST

ಧರ್ಮದ ಮಾರ್ಗದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ: ಡಾ.ಮಾದೇಶ್ ಗುರೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಉಳ್ಳವರು ಹಾಗೂ ಸ್ಥಿತಿವಂತರು ತಾವು ಗಳಿಸಿರುವ ಹಣದಲ್ಲಿ ಅಲ್ಪ ಭಾಗವನ್ನು ಸಮಾಜದ ಬಡವರು ಹಾಗೂ ನೊಂದವರಿಗೆ ದಾನ ಧರ್ಮ ಮಾಡುವ ಮೂಲಕ ಸಹಾಯ ಹಸ್ತ ಚಾಚಬೇಕು. ಆಡಂಬರದ ಪೂಜೆ ಬಿಟ್ಟು ನಿಜವಾದ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜಿಸಿದರೆ ಭಗವಂತ ಆಶೀರ್ವದಿಸುತ್ತಾನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಿಂದ ಮಾತ್ರ ನಾವು ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹುಣಸೂರು ತಾಲೂಕು ದೇವನೂರಿನ ಮಾನವ ಧರ್ಮ ಪೀಠದ ಪೀಠಾಧ್ಯಕ್ಷ ಡಾ.ಮಾದೇಶ್ ಗುರೂಜಿ ಹೇಳಿದರು.

ತಾಲೂಕಿನ ಬೆಡದಹಳ್ಳಿ ಶ್ರೀಪಂಚಭೂತೇಶ್ವರ ಕ್ಷೇತ್ರದಲ್ಲಿ ರುದ್ರಮುನಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ತಾಯಿ ಶ್ರೀ ಹೃದಯೇಶ್ವರಿ ದೇವಿ ಮಹಾಪೂಜೆ ಹಾಗೂ ಶ್ರೀಪಂಚಭೂತೇಶ್ವರ ಮಹಾ ಯಜ್ಞದಲ್ಲಿ ಭಾಗವಹಿಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಿ ಆಶೀರ್ವಚನ ನೀಡಿದರು.

ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ನಾನು ನನ್ನದು ಎಂದು ಜನರು ಸಂಕುಚಿತ ಮನೋಭಾವನೆಯ ವ್ಯಕ್ತಿತ್ವದಿಂದ ಸಣ್ಣವರಾಗುತ್ತಿದ್ದಾರೆ. ಸಾಮಾಜಿಕ ಅಸಮಾನತೆ ಹಾಗೂ ಕಂದಾಚಾರಗಳು ವಿಜೃಂಬಿಸುತ್ತಿವೆ ಎಂದು ವಿಷಾದಿಸಿದರು.

ಉಳ್ಳವರು ಹಾಗೂ ಸ್ಥಿತಿವಂತರು ತಾವು ಗಳಿಸಿರುವ ಹಣದಲ್ಲಿ ಅಲ್ಪ ಭಾಗವನ್ನು ಸಮಾಜದ ಬಡವರು ಹಾಗೂ ನೊಂದವರಿಗೆ ದಾನ ಧರ್ಮ ಮಾಡುವ ಮೂಲಕ ಸಹಾಯ ಹಸ್ತ ಚಾಚಬೇಕು. ಆಡಂಬರದ ಪೂಜೆ ಬಿಟ್ಟು ನಿಜವಾದ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜಿಸಿದರೆ ಭಗವಂತ ಆಶೀರ್ವದಿಸುತ್ತಾನೆ ಎಂದರು.

ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಬೆಡದಹಳ್ಳಿ ಮಠದ ಪೀಠಾಧಿಪತಿ ಶ್ರೀರುದ್ರಮುನಿ ಸ್ವಾಮೀಜಿ ಹೂವು ಮತ್ತು ಹಣ್ಣಿನ ಗಿಡಗಳನ್ನು ವಿತರಿಸಿದರು. ಮಳವಳ್ಳಿ ಬೋಸೇಗೌಡನ ದೊಡ್ಡಿ ಸಿದ್ದರಾಮೇಶ್ವರ ಮಠದ ಶ್ರೀಸಿದ್ದರಾಮ ಸ್ವಾಮೀಜಿ, ಪಂಚಭೂತೇಶ್ವರ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಕಾಂತರಾಜು, ಖಜಾಂಚಿ ಮಹೇಶ್, ಸಂಚಾಲಕ ಕೆ.ಎಸ್.ಚಂದ್ರು, ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.