ಜೀವನದಲ್ಲಿ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯದಿಂದ ಜೀವಿಸಬೇಕಾದರೆ ಧಾರ್ಮಿಕ ಆಚರಣೆಗಳು ಮಹುತ್ವ ಪಡೆದುಕೊಳ್ಳುತ್ತವೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಸೋಮನಗೌಡ ಪಾಟೀಲ ಮನಗೂಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಜೀವನದಲ್ಲಿ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯದಿಂದ ಜೀವಿಸಬೇಕಾದರೆ ಧಾರ್ಮಿಕ ಆಚರಣೆಗಳು ಮಹುತ್ವ ಪಡೆದುಕೊಳ್ಳುತ್ತವೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಸೋಮನಗೌಡ ಪಾಟೀಲ ಮನಗೂಳಿ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಭಜನಾ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಟ್ಟೀಕಂಥಿ ಹಿರೇಮಠದ ಬಾಲತಪಸ್ವಿ ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ 77ನೇ ಯಾತ್ರಾ ಮಹೋತ್ಸವ, ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ 25ನೇ ಸಂಸ್ಮರಣೋತ್ಸವ ಹಾಗೂ ಶ್ರೀಗುರು ಮಹಾಂತೇಶ್ವರ ಪ್ರಶಸ್ತಿ ಹಾಗೂ ಭೂ ಜನ ಆರೋಗ್ಯ ರಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಗುರುರಕ್ಷೆ, ಧರ್ಮ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು. ಪ್ರಸುತ್ತ ದಿನಗಳಲ್ಲಿ ಜನರಲ್ಲಿ ಪ್ರೀತಿ, ವಿಶ್ವಾಸಕ್ಕೆ ಕೊರತೆ ಎದ್ದು ಕಾಣುತ್ತಿದೆ. ಮುನಿಸು, ವೈಮನಸ್ಸುಗಳನ್ನು ಬಿಟ್ಟು ಪ್ರತಿಯೊಬ್ಬರು ಸಹಕಾರ, ಸಹಬಾಳ್ವೆ, ಪ್ರೀತಿ-ವಿಶ್ವಾಸದೊಂದಿಗೆ ಜೀವಿಸಬೇಕಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಜೀವನಕ್ಕೆ ಇಂಬು ನೀಡುತ್ತವೆ. ಆದ್ದರಿಂದ ಧಾರ್ಮಿಕ ಆಚರಣೆ ಮೊದಲ ಪ್ರಾಶಸ್ತ್ಯ ನೀಡುವಂತೆ ಸಲಹೆ ನೀಡಿದರು. ಪಟ್ಟೀಕಂಥಿ ಹಿರೇಮಠದ ಪ್ರಸ್ತುತ ಸ್ವಾಮೀಜಿ ಡಾ.ಮಹಾಂತಲಿಂಗ ಶಿವಾಚಾರ್ಯರು, ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದರು.
ನಾಗಠಾಣದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀಮಠವನ್ನು ಅವರ ತಪಸ್ಸಿನ ಶಕ್ತಿಯಿಂದ ಮುನ್ನೆಡೆಸಿಕೊಂಡು ಹೋಗುತ್ತಿದ್ದು, ಹಲವು ಸಾಮಾಜಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಮುಖ್ಯಮಂತ್ರಿ ಪದಕ ಪುರಸ್ಕ್ರತ ಪಿಎಸ್ಐ ಶ್ರೀಕಾಂತ ಕಾಂಬಳೆ ಮಾತನಾಡಿದರು. ಸಾನ್ನಿಧ್ಯವನ್ನು ಕೆರೂರಿನ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಇಂಗಳೇಶ್ವರದ ಭೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ, ಪಪಂ ಹಂಗಾಮಿ ಅಧ್ಯಕ್ಷ ಶೇಖಪ್ಪಗೌಡ ಬಿರಾದಾರ, ಮುಖಂಡರಾದ ಸುಭಾಸಗೌಡ ಪಾಟೀಲ, ರಾಜಶೇಖರ ಮಗಿಮಠ, ಗುರು ಗಚ್ಚಿನಮಠ, ಎಸ್.ಎಸ್.ಗೊಳಸಂಗಿಮಠ, ಪಪಂ ಸದಸ್ಯರಾದ ಪ್ರದೀಪ ಜಾನಕರ, ಭಾಗ್ಯರಾಜ ಸೊನ್ನದ, ಪಪಂ ಮುಖ್ಯಾಧಿಕಾರಿ ನಿಖಿಲೇಶ ಪಾಟೀಲ, ಸಂಗಮೇಶ ಗೆಣ್ಣೂರ, ಎಸ್.ಪಿ.ಪಾಟೀಲ ಇತರರು ಇದ್ದರು.ಇದೇ ವೇಳೆ ರತ್ನಾಬಾಯಿ ಸಿದ್ದಪ್ಪ ಗುಬ್ಬಾ ದಂಪತಿಗಳಿಗೆ ಶ್ರೀಗುರು ಮಹಾಂತೇಶ್ವರ ಪ್ರಶಸ್ತಿ, ವಿರೇಶ ಗೂಡಲಮನಿ ಅವರಿಗೆ ಭೂ ಜನ ಆರೋಗ್ಯ ರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪ್ರತಿಭಾನ್ವಿತ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಗುರುರಕ್ಷೆ ನೀಡಲಾಯಿತು. ಶ್ರೀಮಠದ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್, ಪರಿಕರಗಳನ್ನು ವಿತರಿಸಲಾಯಿತು. ಸಮಾರಂಭಕ್ಕೂ ಮುನ್ನ ಗುರು ಮಹಾಂತೇಶ್ವರರ ಹಾಗೂ ಗುರು ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ರಜತ ಮೂರ್ತಿಗಳ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕುಂಭಮೇಳ, ಸಕಲ ವಾದ್ಯ ವೈಭವದೊಂದಿಗೆ ಜರುಗಿತು. ನಂತರ ರಥೋತ್ಸವ, ಶ್ರೀಮಠದ ಪೂಜ್ಯರ ಸಿಂಹಾಸನಾರೋಹಣ ನೆರವೇರಿತು.ಇಂದು ರಾಸಾಯನಿಕ ಬಳಕೆಯಿಂದಾಗಿ ಭೂಮಿಯ ಆರೋಗ್ಯ ಕೆಟ್ಟು ಹೋಗಿದೆ. ಕೆಟ್ಟು ಹೋದ ಭೂಮಿಯಿಂದ ಬರುವ ಆಹಾರದಿಂದ ಜನರ ಆರೋಗ್ಯವು ಕೆಡುತ್ತಿದೆ. ಇದನ್ನು ಮನಗಂಡು ನಾವು ಸಾವಯವ ಕೃಷಿ ಮಾಡುವ ಕೃಷಿಕರನ್ನು ಉತ್ತೇಜಿಸುವ ಸಲುವಾಗಿ ಭೂ ಜನ ಆರೋಗ್ಯ ರಕ್ಷಕ ಪ್ರಶಸ್ತಿ ಎಂಬ ವಿನೂತನವಾಗಿ ಶ್ರೀಮಠ ನೀಡಿದೆ. ಭೂಮಿಯ ಆರೋಗ್ಯ ಸರಿಯಿದ್ದರೆ ಜನರ ಆರೋಗ್ಯವು ಸರಿಯಾಗುತ್ತದೆ.- ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ,
ಪಟ್ಟೀಕಂಥಿ ಹಿರೇಮಠ