ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶುಕ್ರವಾರ ನಡೆದ ಬಂಡೆಮ್ಮ ದೇವಿ ಜಾತ್ರಾಮಹೋತ್ಸವದಲ್ಲಿ ಸುಕ್ಷೇತ್ರ ನಯಾನಗರದ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಧಾರವಾಡ: ಕಲಿಯುಗ ವಿನಾಶದ ಅಂಚಿನಲ್ಲಿದೆ. ಯಾರಿಗೂ ನೆಮ್ಮದಿ ಇಲ್ಲ. ಈಗ ಧರ್ಮ ಒಂದೇ ಕಾಲಿನಲ್ಲಿ ನಿಂತುಕೊಂಡಿದ್ದು ಅದು ಯಾವಾಗ ಬೀಳಲಿದೆ ಎಂಬುದು ಗೊತ್ತಿಲ್ಲ. ಇದಕ್ಕೆ ಪರಿಹಾರ ಪಡೆಯಲು ಗುರುವಿನ ಆಶೀರ್ವಾದ ಪಡೆಯಬೇಕಾಗಿದೆ. ಸಂಸ್ಕಾರ, ಸಂಸ್ಕೃತಿಯ ಆಸರೆ ಪಡೆಯಬೇಕಾಗಿದೆ ಎಂದು ಸುಕ್ಷೇತ್ರ ನಯಾನಗರದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಯಾದವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಂಡೆಮ್ಮ ದೇವಿ ಜಾತ್ರಾಮಹೋತ್ಸವದಲ್ಲಿ ಸಾನ್ನಿಧ್ಯವಹಿಸಿದ ಅವರು, ಮಣ್ಣು, ನೀರು, ಗಾಳಿಯಷ್ಟೇ ಗುರುವಿನ ಆಶೀರ್ವಾದ ಮುಖ್ಯ. ದಾನ-ಧರ್ಮದ ಮನೋಸ್ಥಿತಿಯುಳ್ಳ ಕೆಲವು ಜನರಿಂದ ಮಾತ್ರ ಧರ್ಮದ ಉಳಿವು ನಿಂತಿದೆ. ನಾನೇ ಮೇಲು, ನನ್ನಿಂದಲೇ ಎಲ್ಲ ಅನ್ನುವ ಭ್ರಮೆಯಲ್ಲಿ ಮನುಷ್ಯ ಬದುಕುತ್ತಿದ್ದಾನೆ. ಮುಂದೊಂದು ದಿನ ನಾವು ಅಳೆದು ಹೋಗುತ್ತೇವೆ. ನಾವು ಮಾಡಿದ ಕೆಲಸಗಳು ಶಾಶ್ವತವಾಗಲಿವೆ ಎಂಬುದನ್ನು ಅರಿತು ನಡೆಯಬೇಕಾಗಿದೆ ಎಂದರು.

ಮನುಷ್ಯನಲ್ಲಿ ಹಂಚಿಕೊಂಡು ತಿನ್ನುವ, ಬದುಕುವ ಭಾವನೆ ಬರಬೇಕಾಗಿದೆ. ಈ ಹಿಂದೆ ಜಗತ್ತಿನಲ್ಲಿ ಬೆಂಕಿ ಅವಘಡ ಆಗಲಿದೆ ಉಕ್ಕಿನ ಹಕ್ಕಿಗೆ ಪೆಟ್ಟಾಗಲಿದೆ ಎಂಬ ವಾಖ್ಯಾನ ಆಗಿತ್ತು. ಅದು ಈಗ ನಿಜವಾಗುತ್ತಿದೆ. ಮುಂದೆ ಮಕ್ಕಳು- ಮರಿ ಜಾಗೃತಿ ಎಂಬ ವಾಕ್ಯವಾಗಿದೆ, ಎಲ್ಲರೂ ಜಾಗೃತಿ ವಹಿಸಬೇಕು. ಊರು ಒಗ್ಗಟ್ಟಾದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಜಾತ್ರಾ ಮಹೋತ್ಸವವೇ ಸಾಕ್ಷಿ. ಇಲ್ಲಿ ಸ್ವತಃ ಖರ್ಚಿನಲ್ಲಿ ಬಂಡೆಮ್ಮನ ದೇವಸ್ಥಾನ ನಿರ್ಮಿಸಿ ಊರಿನವರೊಂದಿಗೆ ಸೇರಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿರುವ ಶಿವಪುತ್ರಪ್ಪ ಬೆಂಡಿಗೇರಿ ಕಾರ್ಯ ಮಾದರಿ ಆಗಿದೆ ಎಂದರು.

ಯಾದವಾಡ- ಶಿಂಗನಹಳ್ಳಿಯ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದುಡಿಯುವುದು ಮಾನವನ ಕೆಲಸ. ಅದಕ್ಕೆ ಆ ಭಗವಂತೆ ಫಲಾಫಲ ನೀಡಲಿದ್ದಾನೆ. ಪ್ರತಿಯೊಬ್ಬರೂ ಸೇವಾ ಭಾವನೆಯಿಂದ ಬಾಳಬೇಕು ಎಂದರು.

ಯಾದವಾಡ ಸಿದ್ಧರೂಢಮಠದ ಆನಂದ ಗುರೂಜಿ, ಶಿವಪುತ್ರಪ್ಪ ಬೆಂಡಿಗೇರಿ, ನಿಜಗುಣಿ ಬೆಂಡಿಗೇರಿ, ಬಾಳಮ್ಮ ಬೆಂಡಿಗೇರಿ, ಶೇಖಣ್ಣ ಕುಂಬಾರ ಉಪಸ್ಥಿತರಿದ್ದರು. ಮಡಿವಾಳಪ್ಪ ದಿಂಡಲಕೊಪ್ಪ ಸ್ವಾಗತಿಸಿದರು.

ಅದ್ಧೂರಿ ಜಾತ್ರಾಮಹೋತ್ಸವ: ಯಾದವಾಡ ಬಂಡೆಮ್ಮದೇವಿ ನೂತನ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣಪ್ರತಿಷ್ಠಾನದಂತೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾಮಹೋತ್ಸವ ಅದ್ಧೂರಿಯಾಗಿ ನಡೆಯಿತು. ವಿದ್ವಾನ್ ಚೇತನ್ ಗುರೂಜಿ, ಗಂಗಯ್ಯ ಹಿರೇಮಠ ಹಾಗೂ ಗ್ರಾಮದ ಜಂಗಮಮೂರ್ತಿಗಳ ವೈದಿಕತ್ವದಲ್ಲಿ ಗಣಪತಿ ಪೂಜೆ, ದ್ವಾರ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಶಿಲಾಮೂರ್ತಿಗೆ ಮಹಾರುದ್ರಾಭಿಷೇಕ, ಅಲಂಕಾರ ಪೂಜೆ, ಕುಂಕುಮಾರ್ಚನೆ ನಡೆಯಿತು. ಮಹಿಳೆಯರು ಕುಂಭಮೇಳದೊಂದಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆನಂತರ ಅಂಬಲಿ, ಕಿಚಡಿ, ಗೋದಿಹುಗ್ಗಿಯೊಂದಿಗೆ ಅನ್ನಸಂತರ್ಪಣೆ, ಭಜನೆ ಕಾರ್ಯಕ್ರಮ ನಡೆಯಿತು.