ಸಂವಿಧಾನದಿಂದ ನೆಮ್ಮದಿಯ ಬದುಕು ಸಾಧ್ಯ

| Published : Nov 27 2024, 01:04 AM IST

ಸಾರಾಂಶ

ದೇಶದ ಸಂವಿಧಾನದ ಪೀಠಿಕೆಯಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವದ ಹಿರಿಮೆ, ಶಕ್ತಿ ಹಾಗೂ ಅದರ ಶ್ರೇಷ್ಠ ಗುಣ ಅಡಗಿವೆ. ಸರ್ವಧರ್ಮಗಳಿಗೂ ಸಮಭಾವ ಎಂಬ ಸದಾಶಯ ಸಂವಿಧಾನದ ಮುಖ್ಯ ಧ್ಯೇಯವಾಗಿದೆ

ಗದಗ: ಭಾರತ ಅತ್ಯಂತ ಶ್ರೇಷ್ಠ ಸಂವಿಧಾನ ಹೊಂದಿದ ರಾಷ್ಟ್ರವಾಗಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ನೆಮ್ಮದಿಯ ಬದುಕು ನೀಡಲು ಸಂವಿಧಾನದಿಂದ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ, ನಮನ ಸಲ್ಲಿಸಿ ಮಾತನಾಡಿದರು.

ದೇಶದ ಸಂವಿಧಾನದ ಪೀಠಿಕೆಯಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವದ ಹಿರಿಮೆ, ಶಕ್ತಿ ಹಾಗೂ ಅದರ ಶ್ರೇಷ್ಠ ಗುಣ ಅಡಗಿವೆ. ಸರ್ವಧರ್ಮಗಳಿಗೂ ಸಮಭಾವ ಎಂಬ ಸದಾಶಯ ಸಂವಿಧಾನದ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಅವರು, ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು, ವ್ಯಕ್ತಿ ಗೌರವ, ರಾಷ್ಟ್ರದ ಏಕತೆ ಹಾಗೂ ಅಖಂಡತೆ ಶುನಿಶ್ಚಿತಗೊಳಿಸಿ ಭ್ರಾತೃಭಾವನೆ ವೃದ್ಧಿಗೊಳಿಸಲು ಶ್ರದ್ಧಾ ಪೂರ್ವ ಸಂಕಲ್ಪ ಮಾಡುವ ಕುರಿತು ಸಂವಿಧಾನದ ಪೀಠಿಕೆ ಓದಿದರು.

ಜಿಪಂ ಸಿಇಒ ಭರತ್.ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ.ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದವರು, ಗಣ್ಯರು, ಸಾರ್ವಜನಿಕರು ಇದ್ದರು.