ದಾಂಡೇಲಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ

| Published : May 09 2024, 01:04 AM IST

ಸಾರಾಂಶ

ಮುಂಜಾನೆ ವೇಗ ಪಡೆದುಕೊಂಡ ಮತದಾನ, ಮಧ್ಯಾಹ್ನದ ವೇಳೆಗೆ ನೀರಸವಾಗಿತ್ತು.

ದಾಂಡೇಲಿ: ರಾಜ್ಯದಲ್ಲಿ ೨ನೇ ಹಂತದ ಲೋಕಸಭಾ ಚುನಾವಣೆ ಮತದಾನ ದಾಂಡೇಲಿ ನಗರ ನಗರದ ೩೧ ವಾರ್ಡ್‌ ಸೇರಿದಂತೆ ನಾಲ್ಕು ಗ್ರಾಪಂ ವ್ಯಾಪ್ತಿಯ ೫೬ ಮತಗಟ್ಟೆಗಳಲ್ಲಿ ಶಾಂತಯುತವಾಗಿ ನಡೆಯಿತು. ಕೆಲವು ಕಡೆ ಮತ ಯಂತ್ರಗಳ ತೊಂದರೆಯಿಂದ ವಿಳಂಬವಾಯಿತು.

ಮಧ್ಯಾಹ್ನದ ವರೆಗೆ ದಾಂಡೇಲಿ ಸೇರಿದಂತೆ ತಾಲೂಕಿನಲ್ಲಿ ಶೇ. 50ರಷ್ಟು ಮತದಾನವಾಗಿತ್ತು. ತಾಲೂಕಿನ ಒಟ್ಟು ಮತದಾರರು ೫೩,೮೦೩, ಅದರಲ್ಲಿ ಪುರುಷರು ೨೬,೧೪೫, ಮಹಿಳೆಯರು ೨೭,೬೬೧ ಇದ್ದಾರೆ. ಮುಂಜಾನೆ ವೇಗ ಪಡೆದುಕೊಂಡ ಮತದಾನ, ಮಧ್ಯಾಹ್ನದ ವೇಳೆಗೆ ನಿರಸವಾಗಿತ್ತು.

ಮೊದಲ ಬಾರಿಗೆ ಮತದಾನ: ಎಂಬಿಬಿಎಸ್ ವಿದ್ಯಾರ್ಥಿ ಗಣೇಶನಗರದ ದಿಗ್ವಿಜಯಸಿಂಹ ಯು. ಘೋರ್ಪಡೆ ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಿ ಜನತಂತ್ರದ ಹಬ್ಬಕ್ಕೆ ಸಾಕ್ಷಿಯಾದರು.

ಚುನಾವಣಾ ಬಹಿಷ್ಕಾರ ಹಿಂದಕ್ಕೆ: ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯವರು ನಗರದ ಜಿ+೨ ಮನೆಗಳ ಹಂಚಿಕೆ ಮತ್ತು ಗೃಹ ಮಂಡಳಿಯಿಂದ ನಿವೇಶನಗಳ ಹಂಚಿಕೆ ತಡವಾಗುತ್ತಿರುವುದನ್ನು ಖಂಡಿಸಿ ಚುನಾವಣೆ ಬಹಿಷ್ಕಾರಕ್ಕೆ ಕರೆನೀಡಿದ್ದರು. ಆದರೆ ದೇಶದ ಪ್ರಗತಿಗಾಗಿ ನಡೆಯುವ ಲೋಕಸಭಾ ಚುನಾವಣೆ ಬಹಿಷ್ಕರಿಸಿರುವುದನ್ನು ಹಿಂಪಡೆದು ಎಲ್ಲರೂ ಮತ ಚಲಾಯಿಸುವುದಾಗಿ ಸಮಿತಿ ಅಧ್ಯಕ್ಷ ಅಕ್ರಮ ಖಾನ ತಿಳಿಸಿದರು.ಜೋಯಿಡಾದಲ್ಲಿ ಉತ್ಸಾಹದಿಂದ ಮತ ಚಲಾಯಿಸಿದ ಜನ

ಜೋಯಿಡಾ: ತಾಲೂಕಿನಲ್ಲಿ ಲೋಕಸಭಾ ಚುನಾವಣೆಗೆ ನಡೆದ ಮತದಾನ ಶಾಂತಿಯುತವಾಗಿ ನಡೆಯಿತು. ಮತದಾರರು ಉತ್ಸಾಹದಿಂದ ಬಂದು ಮತದಾನ ನಡೆಸಿರುವುದು ಕಂಡುಬಂದಿತು.ಅಣಶಿಯಿಂದ ಅನಮೋಡ ವರೆಗೂ ಅತ್ಯಂತ ವಿಸ್ತಾರವಾದ ತಾಲೂಕಿನಲ್ಲಿ ಬಜಾರಕುಣಾಂಗ, ಶಿವಪುರಗಳಂತಹ ಹಿಂದುಳಿದ ಪ್ರದೇಶಗಳ ಮತಗಟ್ಟೆಗಳಲ್ಲಿ ಕೂಡ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದು ಕಂಡುಬಂದಿತು. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಮತದಾರರನ್ನು ಓಲೈಸುವ ಕಾರ್ಯ ಮುಗಿದು, ಮತದಾರರು ಹಕ್ಕು ಚಲಾಯಿಸಿದ್ದಾರೆ, ಮತ ಪೆಟ್ಟಿಗೆಯಲ್ಲಿ ಅವರ ಅಭಿಮತ ಭದ್ರವಾಗಿದೆ. ಉಳಿದ ಅಭ್ಯರ್ಥಿಗಳ ಬಗ್ಗೆ ಮತದಾರರು ಆಸಕ್ತಿ ವಹಿಸಿದ್ದು ಕಂಡುಬಂದಿಲ್ಲ. ತಾಲೂಕಿನಲ್ಲಿ ಸರಿಸುಮಾರು ಶೇ. 70ರಷ್ಟು ಮತದಾನವಾಗಿದೆ ಎಂದು ಮೊದಲ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಕಡೆಗಳಲ್ಲಿ ಮತಗಟ್ಟೆಗಳನ್ನು ಅಲಂಕರಿಸಿದ್ದು ಕಂಡು ಬಂದಿದೆ.ಬಿಜೆಪಿ, ಕಾಂಗ್ರೆಸ್ ಪ್ರಮುಖರೆಲ್ಲ ಮತದಾನ ಕೇಂದ್ರಕ್ಕೆ ಬಂದು ಉತ್ಸಾಹದಿಂದಲೇ ಮತ ಚಲಾಯಿಸಿ ನಮ್ಮದೇ ಗೆಲುವು ಎಂದು ಸಂತಸ ವ್ಯಕ್ತಪಡಿಸಿದರು.