ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಬೆಳಗ್ಗಿನಿಂದಲೇ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಸರತಿಯಲ್ಲಿ ನಿಂತು ಹಕ್ಕು ಚಲಾಯಿಸಿ ಶಾಂತಿಯುತ ಮತದಾನಕ್ಕೆ ಸಹಕರಿಸಿದರು.ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಮೆಚ್ಚಿನ ಅಭ್ಯರ್ಥಿಯ ರಾಜಕೀಯ ಭವಿಷ್ಯವನ್ನು ಮತಯಂತ್ರದಲ್ಲಿ ಭದ್ರಗೊಳಿಸಿದರು.ಕೆಲವೆಡೆ ಕೈಕೊಟ್ಟ ಯಂತ್ರ: ತಾಲೂಕಿನ ಬೂತ್ ಸಂಖ್ಯೆ 240 ಪದ್ಯಾಣ ಕರೋಪಾಡಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು ಒಂದು ತಾಸು ತಡವಾಗಿ ಮತದಾನ ಆರಂಭವಾಯಿತು. ಮತಯಂತ್ರದಲ್ಲಿರುವ ಒಂದು ಬಟನ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಮತದಾನಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ಕೆಲವು ಕಡೆಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಕೆಲವು ಮತಗಟ್ಟೆಯಲ್ಲಿ ಪ್ರಾರಂಭದಲ್ಲಿ ಮತಯಂತ್ರಗಳು ಕೈ ಕೊಟ್ಟರೆ ಇನ್ನುಕೆಲವು ಕಡೆಗಳ ಮತಯಂತ್ರಗಳು ಮಧ್ಯಾಹ್ನ ವೇಳೆ ಕೆಟ್ಟು ಹೋಗಿದೆ.ಬಿ.ಸಿ. ರೋಡಿನ ಹೃದಯಭಾಗದಲ್ಲಿರುವ ಕೈಕುಂಜೆ ಎ.ಪಿ.ಎಂ.ಸಿ. ಮತಗಟ್ಟೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 12.30 ರ ವರೆಗೆ ಅರ್ಧ ತಾಸುಗಳ ಕಾಲ ಯಂತ್ರ ಸ್ಥಗಿತಗೊಂಡ ಘಟನೆ ನಡೆಯಿತು. ಬಳಿಕ ಹೊಸ ಯಂತ್ರವನ್ನು ತರಿಸಿ , ಮತದಾನ ಮುಂದುವರಿಸಲಾಯಿತು. ಇದೇ ರೀತಿ ಬಿಸಿರೋಡಿನ ಅಜ್ಜಿಬೆಟ್ಟು ಹಾಗೂ ಅನಂತಾಡಿ ಮತಗಟ್ಟೆಯ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಕೆಲಕಾಲ ಅಡಚಣೆಗೆ ಕಾರಣವಾಯಿತು.
ಕೈಕೊಟ್ಟ ಕರೆಂಟ್: ಲೋಕಸಭಾ ಸಭಾ ಚುನಾವಣೆ ನಡೆಯುತ್ತಿರುವ ವೇಳೆ ಕರೆಂಟ್ ಆಗಾಗ ಕಣ್ಣು ಮುಚ್ಚಾಲೆ ಆಡುತ್ತಿತ್ತು. ಇದರಿಂದಾಗಿ ಮತಗಟ್ಟೆಯಲ್ಲಿ ಬಿಸಿಯ ತಾಪ ಹೆಚ್ಚಾಗಿ ಸಾಕಷ್ಟು ತೊಂದರೆ ಉಂಟುಮಾಡಿತ್ತು. ಇನ್ನೊಂದು ಕಡೆಯಿಂದ ಕೊಠಡಿಗಳು ಕತ್ತಲೆಯಾಗಿದ್ದು, ಮತದಾನ ಮಾಡಲು ಯಂತ್ರಗಳು ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ವಧುವರರಿಂದ ಮತದಾನ: ಮತದಾನದ ದಿನವೇ ಅತ್ಯಂತ ಹೆಚ್ಚು ಶುಭಕಾರ್ಯಗಳು ಇದ್ದವು. ನವ ವಧುವರರು ತಮ್ಮ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಮದುವೆ ವೇಷಭೂಷಣದಲ್ಲಿಯೇ ಬಂದು ಮತಚಲಾಯಿಸಿ ಗಮನಸೆಳೆದಿದ್ದಾರೆ. ಮಾಣಿಲ ಬೂತ್ ಸಂಖ್ಯೆ 88 ರಲ್ಲಿ ವರ ನವೀನ್ ಎಂಬಾತ ಮತದಾನ ಮಾಡಿದ್ದಾರೆ. ವೀರಕಂಬ ಗ್ರಾಮದ ಮಜಿ ಶಾಲೆಯ ಮತಗಟ್ಟೆ ಸಂಖ್ಯೆ 203 ರಲ್ಲಿ ಸ್ಥಳೀಯ ಗಣೇಶ್ ನಿಲಯ ಕಮಲಾಕ್ಷ ಪೂಜಾರಿಯವರ ದ್ವಿತೀಯ ಪುತ್ರಿ ವಿನುತಾ ವಿವಾಹಕ್ಕೂ ಮುನ್ನದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.ಗಣ್ಯರಿಂದ ಮತದಾನ..
ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಮೈ ಬೂತ್ ಸಂಖ್ಯೆ 92ರಲ್ಲಿ ಬೆಳಿಗ್ಗೆ ಐದನೇಯವರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಮತ ಚಲಾಯಿಸಿದ್ದಾರೆ.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು, ಎಡಪದವಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಕಳ್ಳಿಗೆ ಗ್ರಾಮದ ತೊಡಂಬಿಲ ಸೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಾಗೂ ಎ. ರುಕ್ಮಯ ಪೂಜಾರಿ ತಮ್ಮ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದರು.
ಮತಗಟ್ಟೆಯಲ್ಲಿ ನೀರು ಮತ್ತು ಬೆಲ್ಲ..!
ವೀರಕಂಬ ಮಜಿ ಶಾಲೆಯಲ್ಲಿ ಎರಡು ಮತ ಕೇಂದ್ರಗಳಿದ್ದು ಮಧ್ಯಾಹ್ನ ವಿಪರೀತ ಬಿಸಿಲು ಸೆಕೆ ಹಾಗೂ ಇವತ್ತು ಬಹಳಷ್ಟು ಶುಭ ಕಾರ್ಯಕ್ರಮಗಳಿದ್ದು ಬೆಳಗ್ಗಿನಿಂದಲೇ ಎರಡು ಮತ ಕೇಂದ್ರಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು. ಮತದಾರರ ಬಾಯಾರಿಕೆ ಕಳೆಯಲು ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಬೆಲ್ಲದ ವ್ಯವಸ್ಥೆ ಮಾಡಲಾಗಿತ್ತು.