ಸಾರಾಂಶ
ಸಮಾಜ ವಿಜ್ಞಾನ ಪರೀಕ್ಷೆ 28617 ವಿದ್ಯಾರ್ಥಿಗಳ ಪೈಕಿ 28141 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 476 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ತಿಳಿಸಿದ್ದಾರೆ.
ಧಾರವಾಡ: ಎಸ್ಸೆಸ್ಸೆಲ್ಸಿಯ ಸಮಾಜ ವಿಜ್ಞಾನ ಪರೀಕ್ಷೆಯು ಜಿಲ್ಲಾದ್ಯಂತ ಶನಿವಾರ ಶಾಂತರೀತಿಯಿಂದ ಸುಸೂತ್ರವಾಗಿ ನಡೆಯಿತು. ಈ ನಡುವೆ ಕಲಘಟಗಿ ತಾಲೂಕಲ್ಲಿ ಪರೀಕ್ಷೆ ವೇಳೆಯೇ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಳಾಗಿದ್ದಳು. ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
28617 ವಿದ್ಯಾರ್ಥಿಗಳ ಪೈಕಿ 28141 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 476 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ತಿಳಿಸಿದ್ದಾರೆ.ಡಿಸಿ ಭೇಟಿ
ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಪಂ ಸಿಇಒ ಭುವನೇಶ ಪಾಟೀಲ ಅವರು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ವಿದ್ಯಾರ್ಥಿಗಳ ಹಾಜರಾತಿ, ಗೈರು ಕುರಿತು ಮಾಹಿತಿ ಪಡೆದರು. ಧಾರವಾಡ ತಾಲೂಕಿನ ಯರಿಕೊಪ್ಪ, ಕಲಘಟಗಿ ಪಟ್ಟಣದ ಸೇಂಟ್ ಮೇರಿ ಇಂಗ್ಲೀಷ್ ಮಾಧ್ಯಮ ಶಾಲೆ ಮತ್ತು ಜನತಾ ಪ್ರೌಢಶಾಲೆಗಳಲ್ಲಿ ಸ್ಥಾಪಿಸಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವದನ್ನು, ಮೂಲಸೌಕರ್ಯ, ಸಿಸಿ ಟಿವಿ ಅಳವಡಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು.ಪ್ರತಿ ಪರೀಕ್ಷೆ ನಿರ್ದಿಷ್ಟ ಸಂಖ್ಯೆಯ ಕೆಲ ವಿದ್ಯಾರ್ಥಿಗಳು ಗೈರಾಗುತ್ತಿದ್ದಾರೆ. ಆಯಾ ಶಾಲೆಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಪರೀಕ್ಷೆಗೆ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ವಾಸ್ತವಿಕ ಕಾರಣ ತಿಳಿದು ತಮಗೆ ವರದಿ ನೀಡಬೇಕೆಂದು ಬಿಇಒಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ವಿದ್ಯಾರ್ಥಿನಿ ಅಸ್ವಸ್ಥ
ಈ ನಡುವೆ ಕಲಘಟಗಿ ಪಟ್ಟಣದ ಜನತಾ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿನ ವಿದ್ಯಾರ್ಥಿನಿ ಸ್ಪಂದನಾ ಬೋಸ್ಲೆಗೆ ಎದೆ ನೋವು ಕಾಣಿಸಿಕೊಂಡು ಅಸ್ವಸ್ಥಳಾದಳು. ಇದೇ ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಅಲ್ಲೇ ಇದ್ದರು. ಕೂಡಲೇ ಆ್ಯಂಬುಲೆನ್ಸ್ ಕರೆಯಿಸಿ ತಾಲೂಕಾಸ್ಪತ್ರೆಗೆ ಕಳುಹಿಸಿದರು. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ವಿದ್ಯಾರ್ಥಿನಿ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯ ಅಜ್ಜಿ ಸ್ಥಳದಲ್ಲಿದ್ದರು.ಈ ಸಂದರ್ಭದಲ್ಲಿ ಕಲಘಟಗಿ ಪ್ರಭಾರ ತಹಸೀಲ್ದಾರ್ ಬಸವರಾಜ ಬೆಣ್ಣಿಶಿರೂರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಬಸಾಪುರ ಹಾಗೂ ಶಿಕ್ಷಣಾಧಿಕಾರಿ ರೇಖಾ ಭಜಂತ್ರಿ ಸೇರಿದಂತೆ ಇತರರು ಇದ್ದರು.