ಕನ್ನಡಪ್ರಭ ವಾರ್ತೆ ರಾಮನಗರ
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ವತಿಯಿಂದ ಪಾದಯಾತ್ರೆ ಸಾಗುವ ಯೋಜನಾ ಪ್ರದೇಶದ ಗ್ರಾಮಗಳಲ್ಲಿ ರಾತ್ರೋರಾತ್ರಿ ಅಳವಡಿಸಿದ್ದ ಯೋಜನೆ ಪರವಾದ ಫ್ಲೆಕ್ಸ್ ಗಳನ್ನು ಕಾರ್ಯಕರ್ತರು ಹರಿದು ಆಕ್ರೋಶ ವ್ಯಕ್ತಪಡಿಸಿದರು.ಅಂಚಿಪುರ ಮತ್ತು ಅಂಚಿಪುರ ಕಾಲೋನಿ ಸೇರಿದಂತೆ ಪಾದಯಾತ್ರೆ ನಡೆಯಲಿರುವ ಗ್ರಾಮಗಳಲ್ಲಿ ನಿಖಿಲ್ ಪಾದಯಾತ್ರೆ ಸ್ವಾಗತಿಸುವ, ಯೋಜನೆ ವಿರೋಧಿಸುವ ದೊಡ್ಡ ಪ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಅವುಗಳ ಪಕ್ಕದಲ್ಲೇ ''''ನಮ್ಮ ಭೂಮಿ ನಮ್ಮ ಹಕ್ಕು'''', ''''ಬೇಕೇ ಬೇಕೇ ಟೌನ್ ಶಿಪ್ ಬೇಕು'''' ಎಂಬ ಬರಹದ ದೊಡ್ಡ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು.
ಅಂಚಿಪುರ ಕಾಲೋನಿ ವೃತ್ತದ ಅರಳಿಕಟ್ಟೆ ಬಳಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ರೖತರು ಜಿಬಿಐಟಿ ಯೋಜನೆಗೆ ಭೂಮಿ ಕೊಡಲು ಸಿದ್ಧ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು -ಯೋಜನೆ ಅಡ್ಡಿ ಪಡಿಸಬೇಡಿ. 20 ವರ್ಷಗಳ ವನವಾಸಕ್ಕೆ ಮುಕ್ತಿ ಬೇಕು, ಸ್ವಾರ್ಥ ಬಿಟ್ಟು ಯೋಜನೆಗೆ ಬೆಂಬಲ ನೀಡಿ ಎಂಬ ಬರಹದ ಎರಡು ಫ್ಲೆಕ್ಸ್ ಹಾಗೂ ಬೇಕೆ ಬೇಕು ಟೌನ್ ಶಿಪ್ ಬೇಕು, ನಮ್ಮ ಭೂಮಿ ನಮ್ಮ ಹಕ್ಕು, ದಲಿತರ ನಡೆ ಅಭಿವೃದ್ಧಿ ಕಡೆ ಎಂಬ ಬರಹದ ಫ್ಲೆಕ್ಸ್ ಗಳನ್ನು ವಿದ್ಯುತ್ ಕಂಬಗಳಿಗೂ ಅಳವಡಿಸಿದ್ದರು.ಕೆಲ ಪೊಲೀಸರು ಟೌನ್ ಶಿಪ್ ಪರವಾಗಿರುವ ಫ್ಲೆಕ್ಸ್ ಗಳತ್ತ ಹೋರಾಟಗಾರರು ಬಾರದಂತೆ ತಡೆಯಲು ಪ್ರಯತ್ನಿಸಿದರು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿದ್ದ ಹೋರಾಟಗಾರರು ಫ್ಲೆಕ್ಸ್ ಗಳನ್ನು ಸುತ್ತುವರಿದು ಹರಿದು ಹಾಕಿದರು. ಇದನ್ನು ತಡೆಯಲಾಗದೆ ಪೊಲೀಸರು ಅಸಹಾಯಕರಾದರು.
ಅದಾದ ಕೆಲವೇ ಕ್ಷಣದಲ್ಲಿ ಸ್ಥಳದಲ್ಲಿದ್ದ ಮತ್ತೊಂದು ದೊಡ್ಡ ಫ್ಲೆಕ್ಸ್ ಗಳು ಹಾಗೂ ವಿದ್ಯುತ್ ಕಂಬಗಳಲ್ಲಿ ಅಳವಡಿಸಿದ್ದ ಫ್ಲೆಕ್ಸ್ ಗಳನ್ನು ಸಹ ಹೋರಾಟಗಾರರು ಹರಿದು ನೆಲದ ಮೇಲೆ ಹಾಕಿ ತುಳಿದರು.