ಮೂಲ್ಕಿ: ಬದುಕು ಸಾರ್ಥಕವಾಗಬೇಕಾದರೆ ದಾನ ಧರ್ಮಗಳ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣೀರೊರೆಸುವ ಕಾರ್ಯ ಮಾಡಬೇಕು. ಜೀವನದಲ್ಲಿ ಸಂಸ್ಕಾರ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಾಧಕರಾಗಲು ಸಾಧ್ಯವೆಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಹಳೆಯಂಗಡಿಯ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು ಅವರ ಷಷ್ಟ್ಯಬ್ದ ಪೂರ್ತಿ ಶಾಂತಿ ಕಾರ್ಯಕ್ರಮದಲ್ಲಿ ಸಂಸ್ಥಾನ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಸತೀಶ್ ಭಟ್ ಹಾಗೂ ಅವರ ಪತ್ನಿ ಭಾರತಿ ಭಟ್ ಅವರು ಸಾರ್ಥಕ ಬದುಕು ನಡೆಸಿದ್ದು, ತಮ್ಮ ನೋವನ್ನು ಅರಗಿಸಿಕೊಂಡು ಪರರ ಕಷ್ಟ ಸುಖಗಳಲ್ಲಿ ಸಹಭಾಗಿಯಾಗಿ ಉತ್ತಮ ಕಾರ್ಯವನ್ನು ಸಾಧಿಸಿದ್ದಾರೆ. ಅವರ ಬದುಕು ಇನ್ನಷ್ಟು ಉಜ್ವಲವಾಗಲೆಂದು ಹಾರೈಸಿದರು. ಕಟೀಲು ಕ್ಷೇತ್ರದ ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ವೇದಮೂರ್ತಿ ಕೃಷ್ಣ ಭಟ್ ಪಾವಂಜೆ, ಜ್ಯೋತಿಷಿ ವಾಸುದೇವ ಭಟ್ ಪಾವಂಜೆ, ಬಪ್ಪನಾಡು ಕ್ಷೇತ್ರದ ಅರ್ಚಕ ಶ್ರೀಪತಿ ಉಪಾಧ್ಯಾಯ, ಜ್ಯೋತಿಷಿ ವಿಶ್ವನಾಥ ಭಟ್, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಗಣೇಶ್ ಭಟ್ ಪಾವಂಜೆ, ಡಾ.ಶ್ರೀವತ್ಸ ಉಪಾಧ್ಯಾಯ ಕೊಲಕಾಡಿ, ಶಾಸಕ ಉಮಾನಾಥ ಕೋಟ್ಯಾನ್ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಶ್ರೀ ವಿದ್ಯಾಭೂಷಣ ತೀರ್ಥರಿಂದ ಗಾನಸುಧೆ ನಡೆಯಿತು.