ಬಳ್ಳಾರಿ: ಇಂದಿನ ಡಿಜಿಟಲ್ ಯುಗದಲ್ಲಿಯೂ ಪತ್ರಿಕೆಗಳ ಮಹತ್ವ ಕಡಿಮೆಯಾಗಿಲ್ಲ. ಮುದ್ರಿತ ಪತ್ರಿಕೆ ಅಥವಾ ಇ-ಪೇಪರ್ ಯಾವುದೇ ರೂಪದಲ್ಲಿದ್ದರೂ ನಿಯಮಿತವಾಗಿ ಪತ್ರಿಕೆ ಓದುವ ಅಭ್ಯಾಸ ವ್ಯಕ್ತಿತ್ವ ವಿಕಸನಕ್ಕೆ, ಚಿಂತನಶಕ್ತಿಯ ಬೆಳವಣಿಗೆಗೆ ಹಾಗೂ ಉತ್ತಮ ನಾಗರಿಕನಾಗಲು ಸಹಕಾರಿಯಾಗಬಲ್ಲದು ಎಂದು ಹಿರಿಯ ಪತ್ರಕರ್ತ ಕೆ.ಎಂ. ಮಂಜುನಾಥ್ ತಿಳಿಸಿದರು.
ನಗರದ ಇಂಡೋ-ಅಮೇರಿಕನ್ ಪದವಿಪೂರ್ವ ಮತ್ತು ಪದವಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಹಮ್ಮಿಕೊಂಡಿದ್ದ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿಗಳ ಸ್ಮಾರಕ ದತ್ತಿ ಹಾಗೂ ಸಿರಿಗೇರಿ ಬಸವರಾಜ ಸ್ಮಾರಕ ದತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪತ್ರಿಕೆ ಸೇರಿದಂತೆ ಪಠ್ಯಪುಸ್ತಕ ಹೊರತಾಗಿ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಗ್ರಂಥಾಲಯಗಳ ಜೊತೆ ನಿರಂತರ ಒಡನಾಟ ಇಟ್ಟುಕೊಳ್ಳಬೇಕು. ಬಿಡುವಿನ ವೇಳೆಯಲ್ಲಷ್ಟೇ ಅಲ್ಲ, ಸಮಯ ಸಿಕ್ಕಾಗಲೆಲ್ಲ ಪುಸ್ತಕಗಳನ್ನು ಓದುವ ಅಭಿರುಚಿ ಮೈಗೂಡಿಸಿಕೊಳ್ಳುವುದರಿಂದ ಜ್ಞಾನಾಭಿವೃದ್ಧಿಗೆ ಜೊತೆಗೆ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯದಲ್ಲಿ ಸಾಮರಸ್ಯದ ನೆಲೆಗಳು ಕುರಿತು ಹಿರಿಯ ಚಿಂತಕ ಕೆ.ಬಿ. ಸಿದ್ಧಲಿಂಗಪ್ಪ ಉಪನ್ಯಾಸ ನೀಡಿದರು. ಬಸವಾದಿ ಶರಣರು ಸಾಮರಸ್ಯದ ಬದುಕಿಗೆ ನೀಡಿದ್ದ ಆದ್ಯತೆಯ ಕುರಿತು ಸಿದ್ಧಲಿಂಗಪ್ಪ ಅವರು ವಿಶ್ಲೇಷಿಸಿದರು.ಕಾಲೇಜಿನ ಪ್ರಾಂಶುಪಾಲ ಬಿ.ವಿ. ರಾಜೇಶ್, ಸಾರಿಗೆ ಇಲಾಖೆಯ ಕಾರ್ಮಿಕ ಅಧಿಕಾರಿ ಕರಿಗೌಡ ಮಾತನಾಡಿದರು. ಕಸಾಪ ಕೋಶಾಧ್ಯಕ್ಷ ಬಸವರಾಜ ಗದಗಿನ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಪಿ. ಸುಧೀರ್ ಉಪಸ್ಥಿತರಿದ್ದರು.
ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ ಹಾಗೂ ಆಧ್ಯಾತ್ಮಿಕ ಚಿಂತಕ ಅಮಾತಿ ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ರಂಗಭೂಮಿ ಕಲಾವಿದ ರಾಮೇಶ್ವರಯ್ಯನವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.