ಬಳ್ಳಾರಿ: ಕಾರ್ಗಿಲ್ ಯುದ್ಧವು ಕೇವಲ ಎರಡು ರಾಷ್ಟ್ರಗಳ ನಡುವಿನ ಯುದ್ಧವಾಗಿರಲಿಲ್ಲ. ಅದು ಭಾರತೀಯ ಸೈನಿಕರ ಅಚಲ ದೇಶಭಕ್ತಿ, ಧೈರ್ಯ, ಸಾಹಸ ಹಾಗೂ ಪರಾಕ್ರಮದ ಪ್ರತೀಕವಾಗಿತ್ತು ಎಂದು ಎಬಿವಿಪಿ ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ್ ಕುಳಗೇರಿ ಹೇಳಿದರು.

ನಗರದಲ್ಲಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಎಬಿವಿಪಿಯಿಂದ ಗಡಗಿಚನ್ನಪ್ಪ ವೃತ್ತದಿಂದ ಕನಕದುರ್ಗಮ್ಮ ದೇವಸ್ಥಾನದವರೆಗೆ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಅಪ್ರತಿಮ ಶೌರ್ಯ ಪ್ರದರ್ಶಿಸಿ ದೇಶದ ಗಡಿಯನ್ನು ರಕ್ಷಿಸಿದರು. ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ರಾಷ್ಟ್ರದ ಸಾರ್ವಭೌಮತ್ವವನ್ನು ಉಳಿಸಿಕೊಂಡ ವೀರಯೋಧರ ತ್ಯಾಗವನ್ನು ದೇಶದ ಪ್ರತಿಯೊಬ್ಬ ನಾಗರಿಕ ಸದಾ ಸ್ಮರಿಸಬೇಕು ಎಂದು ಹೇಳಿದರು.

ಇಂದಿನ ಯುವಜನತೆ ದೇಶದ ಇತಿಹಾಸ, ಸೈನಿಕರ ತ್ಯಾಗ ಮತ್ತು ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಅರಿತು ದೇಶಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು. ಕಾರ್ಗಿಲ್ ವಿಜಯ ದಿವಸವು ಕೇವಲ ಆಚರಣೆಗೆ ಸೀಮಿತವಾಗದೆ, ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧರ ಬದುಕಿನಿಂದ ಪ್ರೇರಣೆ ಪಡೆಯುವ ದಿನವಾಗಬೇಕು ಎಂದು ತಿಳಿಸಿದರು.

ಭಾರತೀಯ ಸೇನೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 527 ಸೈನಿಕರು ಹುತಾತ್ಮರಾಗಿದ್ದಾರೆ. ಅವರನ್ನು ಇಂದಿನ ಯುವ ಸಮುದಾಯ ಸ್ಮರಿಸಿಕೊಳ್ಳಬೇಕು. ಇಂದು ಭಾರತೀಯ ಸೈನ್ಯ ಬಹಳಷ್ಟು ಬಲಿಷ್ಠವಾಗಿದೆ. ಭಾರತಕ್ಕೆ ಇಂದು ವಿದೇಶಗಳಿಂದ ಯಾವುದೇ ಆಪತ್ತು ಇಲ್ಲ. ಅದನ್ನು ತಡೆಯುವುದಕ್ಕೆ ಭಾರತೀಯ ಸೈನ್ಯ ಗಟ್ಟಿಯಾಗಿದೆ. ಆದರೆ ನಮ್ಮ ದೇಶದ ಒಳಗಡೆ ಇದ್ದು ನಮ್ಮ ದೇಶದ ವಿರುದ್ಧ ಸಂಚು ರೂಪಿಸುವ ದೇಶ ವಿದ್ರೋಹಿಗಳ ವಿರುದ್ಧ ಇಂದಿನ ಯುವಶಕ್ತಿ ಜಾಗೃತರಾಗಬೇಕಿದೆ ಎಂದರು.


ಮಾಜಿ ಸೈನಿಕರಾದ ಸುಬೇದಾರ ದೇವರಾಜ ಮಾತನಾಡಿ, ನಮಗೆ ಸೈನ್ಯದಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿರುವುದು ನಮ್ಮ ಪೂರ್ವಜನ್ಮದ ಪುಣ್ಯವಾಗಿದೆ. ಕಾರ್ಗಿಲ್ ವಿಜಯ ದಿವಸ ಆಚರಿಸಲು ನಮಗೆ ಅತ್ಯಂತ ಸಂತೋಷವೆನಿಸುತ್ತದೆ. ನಮ್ಮ ಸೈನಿಕರು ದೇಶಕ್ಕಾಗಿ ಏನಾದರೂ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟ ಯುದ್ಧ ಕಾರ್ಗಿಲ್‌ ಯುದ್ಧವಾಗಿದೆ ಎಂದು ಬಣ್ಣಿಸಿದರು.

ಎಬಿವಿಪಿಯ ವಿಭಾಗ ಸಂಚಾಲಕ ದಿಲೀಪಕುಮಾರ, ಭರತ ಟಿ., ನಗರ ಅಧ್ಯಕ್ಷೆ ಡಾ.ಮಂಗಳಾ, ನಗರ ಕಾರ್ಯದರ್ಶಿ ಬಸವಕಿರಣ, ಜಿಲ್ಲಾ ಪ್ರಮುಖರಾದ ದರ್ಶನ್, ಮಾರುತಿ, ಹರ್ಷಿತ್ ರೆಡ್ಡಿ, ಕೃಷ್ಣ, ಪೂಜಾರಿ ಭಾವನಿ ಸೇರಿದಂತೆ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಂಜಿನ ಮೆರವಣೆಯಲ್ಲಿ ಭಾಗವಹಿಸಿದ್ದರು.